

ಹಿರಿಕರ ರವಿ ಸೋಮವಾರಪೇಟೆ
ಜೀವದ ಹಂಗು ತೊರೆದು ಭಾರತಮಾತೆಯ ಗಡಿರಕ್ಷಣೆ ಜವಾಬ್ದಾರಿ ಹೊತ್ತ ಅರೆ ಸೇನಾಪಡೆಯ ನಿವೃತ್ತ ಯೋಧರಲ್ಲಿ ಅನಾಥ ಭಾವನೆ ಮೂಡಿದೆ ಎಂದು ಕೊಡಗು ಜಿಲ್ಲಾ ಅರೆ ಸೇನಾಪಡೆಯ ಮಾಜಿ ಯೋಧರ ಒಕ್ಕೂಟದ ಪದಾಧಿಕಾರಿಗಳು ನೋವು ತೋಡಿಕೊಂಡರು.
ಕನ್ನಡ ನಂ.1 ದಿನಪತ್ರಿಕೆ ವಿಜಯವಾಣಿ ವತಿಯಿಂದ ಪಟ್ಟಣದ ಪತ್ರಿಕಾ ಭವನದಲ್ಲಿ ಬುಧವಾರ ಆಯೋಜಿಸಿದ್ದ ಅರೆ ಸೇನಾಪಡೆಯ ನಿವೃತ್ತ ಯೋಧರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಸಮಸ್ಯೆಗಳ ಸರಮಾಲೆಯನ್ನು ಬಿಚ್ಚಿಟ್ಟರು.
ಪಾಕಿಸ್ತಾನ ಗಡಿಯನ್ನು ಬಿಎಸ್‌ಎಫ್‌ನವರು ಕಾಯುತ್ತಾರೆ. ಚೀನಾ ಗಡಿಯನ್ನು ಐಟಿಪಿಪಿ ಪಡೆ ಕಾಯುತ್ತದೆ. ಸಿಆರ್‌ಪಿಎಫ್ ದೇಶದ ಆಂತರೀಕ ಭದ್ರತೆಯ ಜವಾಬ್ದಾರಿ ಹೊತ್ತಿದೆ. ಸಿಐಎಸ್‌ಎಫ್ ದೇಶದ ಸಂಪತ್ತನ್ನು ರಕ್ಷಣೆ ಮಾಡುವ ಜವಾಬ್ದಾರಿ ಇದೆ. ಎಸ್‌ಎಸ್‌ಬಿಎಸ್ ಮತ್ತು ಅಸ್ಸಾಂ ರೈಫಲ್ಸ್ ಕರಾವಳಿ ಕಾವಲು ಕಾಯುತ್ತದೆ. ಇವೆಲ್ಲವೂ ಸೇರಿ ಅರೆ ಸೇನಾಪಡೆಯಾಗಿದೆ ಎಂದು ಪದಾಧಿಕಾರಿಗಳು ಮಾಹಿತಿ ನೀಡಿದರು.
ಕೊಡಗಿನಲ್ಲಿ ಅರೆ ಸೇನಾಪಡೆಯಲ್ಲಿ ಕೆಲಸ ಮಾಡುತ್ತಿರುವವರು ಮತ್ತು ನಿವೃತ್ತರಾದವರು ಅಂದಾಜು ಮೂರು ಸಾವಿರ ಜನ ಇದ್ದೇವೆ. ಆದರೆ, ಕೊಡಗಿನಲ್ಲಿ ಕೇಂದ್ರಿಯ ಪೊಲೀಸ್ ಕಲ್ಯಾಣ ಭಂಡಾರ ಇಲ್ಲ. ಅದು ಇರುವುದು ಬೆಂಗಳೂರಿನಲ್ಲಿ, ಅಲ್ಲಿಗೆ ಹೋಗಿ ನಾವು ಅಗತ್ಯ ಸಾಮಗ್ರಿಗಳು ಮತ್ತು ಪಡಿತರ ಕೊಂಡು ತರಬೇಕಿದೆ ಎಂದು ಬೇಸರಿಸಿದರು.
ಭೂಸೇನೆ, ವಾಯುಸೇನಾ ಮತ್ತು ನೌಕದಳದ ನಿವೃತ್ತ ಸೈನಿಕರಿಗೆ ಸಂಬಂಧಿಸಿದಂತೆ ಕೊಡಗಿನಲ್ಲಿ ಸೈನಿಕ ಕಲ್ಯಾಣ ಇಲಾಖೆ ಇದೆ. ಮಡಿಕೇರಿ, ವಿರಾಜಪೇಟೆಯಲ್ಲಿ ಸೇನಾ ಕ್ಯಾಂಟಿನ್ ಸೌಲಭ್ಯವಿದೆ. ಆದರೆ ಅರೆಸೇನಾ ಪಡೆಯ ನಿವೃತ್ತ ಯೋಧರು ಸೇನಾ ಕ್ಯಾಂಟಿನ್‌ನಿಂದ ಸಾಮಗ್ರಿಗಳನ್ನು ಖರೀದಿಸಲು ಸಾಧ್ಯವಿಲ್ಲ. ಈ ತಾರತಮ್ಯ ಸಲ್ಲದು. ಅರೆ ಸೇನಾಪಡೆಯ ನಿವೃತ್ತರಿಗೂ ಕೊಡಗು ಜಿಲ್ಲೆಯಲ್ಲಿ ಅರೆ ಸೈನಿಕ ಕಲ್ಯಾಣ ಬೋರ್ಡ್ ಸ್ಥಾಪಿಸಬೇಕೆಂದು ಒತ್ತಾಯಿಸಿದರು.
ಹಿಂದಿನ ಸಾಲಿನಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಅರೆ ಸೇನಾಪಡೆಯ ನಿವೃತ್ತ ಯೋಧರ ಮನವಿಗೆ ಸ್ಪಂದಿಸಿ, ಸೈನಿಕ ಮತ್ತು ಅರೆಸೈನಿಕ ಕಲ್ಯಾಣ ಇಲಾಖೆಯನ್ನು ಸ್ಥಾಪಿಸಲು ಸರ್ಕಾರಿ ಆದೇಶವನ್ನು ಮಾಡಿದ್ದರು. ನಂತರ ಸರ್ಕಾರ ಬಿದ್ದು ಹೋಗಿ, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದ ನಂತರ, ಸೈನಿಕರ ನಿಯೋಗದ ಮನವಿಯಂತೆ ಸೈನಿಕ ಕಲ್ಯಾಣ ಇಲಾಖೆ ಎಂದು ಯಥಾಸ್ಥಿತಿಯಂತೆ ಮುಂದುವರಿಸಿದರು.
ಇಲ್ಲಿಯವರೆಗೆ ಅರೆ ಸೈನಿಕ ಕಲ್ಯಾಣ ಬೋರ್ಡ್ ಸ್ಥಾಪಿಸಿಲ್ಲ. ಕಳೆದ 12 ವರ್ಷಗಳಿಂದ ಕೊಡಗು ಅರೆಸೈನಿಕ ನಿವೃತ್ತ ಯೋಧರ ಸಂಘದ ಕಟ್ಟಡದ ಜಾಗಕ್ಕೆ ಹಕ್ಕುಪತ್ರ ನೀಡುವಂತೆ ಮನವಿ ಮಾಡುತ್ತಿದ್ದೇವೆ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಜಿಲ್ಲಾಧಿಕಾರಿಗಳ ಕಚೇರಿಯಿಂದ ನಮ್ಮ ಸಂಘದ ಅರ್ಜಿಗಳನ್ನು ಕೊಡಗು ಜಿಲ್ಲಾ ಸೈನಿಕ ಕಲ್ಯಾಣ ಇಲಾಖೆಗೆ ಕಳುಹಿಸಿ ಕ್ರಮ ವಹಿಸುವಂತೆ ಸೂಚಿಸಿದ್ದಾರೆ. ಆದರೆ ಅರೆ ಸೇನಾಪಡೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸೈನಿಕ ಕಲ್ಯಾಣ ಇಲಾಖೆ ಹೇಳುತ್ತಿದೆ. ನಮ್ಮ ಬೇಡಿಕೆ ಈಡೇರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಅರೆ ಸೈನಿಕ ಕಲ್ಯಾಣ ಬೋರ್ಡ್ ಸ್ಥಾಪನೆಗೆ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದೇವೆ. ಅದಕ್ಕೂ ಉತ್ತರ ಸಿಕ್ಕಿಲ್ಲ ಎಂದು ನೊಂದುಕೊಂಡರು.
ನಿವೃತ್ತರಾದ ಅರೆ ಸೇನಾಪಡೆ ಯೋಧರಿಗೆ ವಯಸ್ಸಾಗಿದೆ. ಅನೇಕರಿಗೆ ಅರೋಗ್ಯ ಕೆಟ್ಟಿದೆ. ಕೆಲವರು ವಿಧವೆಯರು ಇದ್ದಾರೆ. ಪ್ರತಿ ತಿಂಗಳು ಬೆಂಗಳೂರಿನಲ್ಲಿರುವ ಕೇಂದ್ರಿಯ ಪೊಲೀಸ್ ಕಲ್ಯಾಣ ಭಂಡಾರಕ್ಕೆ ತೆರಳಿ ಅಗತ್ಯ ಸಾಮಗ್ರಿಗಳು ಮತ್ತು ಪಡಿತರ ತರಲು ಕಷ್ಟವಾಗುತ್ತಿದೆ. ವಯಸ್ಸಾದವರು ರಾತ್ರಿ ಬಸ್ ಹತ್ತಬೇಕು. 5 ಗಂಟೆಗೆ ಬೆಂಗಳೂರು ಬಸ್ ನಿಲ್ದಾಣ ತಲುಪುತ್ತೇವೆ. ಭಂಡಾರ ಬಾಗಿಲು ತೆಗೆಯುವುದು 9 ಗಂಟೆಯಾಗುತ್ತದೆ. 4 ಗಂಟೆಗಳ ಕಾಲ ಬಸ್‌ಸ್ಟಾಂಡ್ ಹಾಗೂ ಅಂಗಡಿಗಳ ಮುಂಭಾಗದಲ್ಲಿ ಕಾಯಬೇಕು. ಇಂತಹ ಕಷ್ಟ ನಮ್ಮ ವೈರಿಗಳಿಗೂ ಬರಬಾರದು ಎಂದು ಬೇಸರಿಸಿದರು.
ಯೋಧರ ಕೋಟಾದಂತೆ ಮದ್ಯವನ್ನು ಖರೀದಿಸಿದರೆ ಮೆಟ್ರೋ ಸೇರಿದಂತೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಾಗಿಸುವುದಕ್ಕೆ ನಿಷೇಧವಿದೆ. ಈ ಕಾರಣದಿಂದ ಕೊಡಗಿನಲ್ಲಿ ದುಪ್ಪಟ್ಟು ಹಣ ನೀಡಿ ವೈನ್ಸ್ ಶಾಪ್‌ನಲ್ಲಿ ಖರೀದಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಸಿಗುವ ಪಿಂಚಣಿ ಕೂಡ ಕಡಿಮೆಯಿದೆ ಎಂದು ತಮ್ಮ ಸಂಕಷ್ಟ ಹೇಳಿಕೊಂಡರು.
ಕೊಡಗು ಜಿಲ್ಲಾ ನಿವೃತ್ತ ಅರೆ ಸೇನಾಪಡೆ ಒಕ್ಕೂಟ ಮನವಿ ಮೇರೆಗೆ ಮಡಿಕೇರಿ ಸಮೀಪದ ಕರ್ಣಂಗೇರಿ ಗ್ರಾಮದ ಸ.ನಂ. 10/2ರಲ್ಲಿ 0.20ಸೆಂಟ್ ಜಾಗವನ್ನು ಕಂದಾಯ ಇಲಾಖೆ ನೀಡಿದೆ. ಸರ್ವೆ ಹಾಗೂ ಹದ್ದುಬಸ್ತು ಆಗಿದೆ. ಕಳೆದ 12 ವರ್ಷಗಳಿಂದ ಹಕ್ಕುಪತ್ರಗಳನ್ನು ಮಾಡಿಕೊಡದೆ ಕಂದಾಯ ಇಲಾಖೆ ಸತಾಯಿಸುತ್ತಿದೆ. ಯಾವುದೇ ಮನವಿಗೂ ಸ್ಪಂದಿಸುತ್ತಿಲ್ಲ. ದೇಶಕ್ಕಾಗಿ ಪ್ರಾಣ ಒತ್ತೆಯಿಟ್ಟು ಸೇವೆ ಮಾಡಿದ್ದೇವೆ. ಈಗ ನಿವೃತ್ತರಾದ ಮೇಲೆ ನಮ್ಮ ಸಂಘಕ್ಕೆ ಒಂದು ಕಟ್ಟಡ ನಿರ್ಮಿಸಿಕೊಳ್ಳಬೇಕಾಗಿದೆ. ಅದಕ್ಕೂ ಹಕ್ಕುಪತ್ರ ಕೊಡುತ್ತಿಲ್ಲ ಎಂದು ದೂರಿದರು. ನಿವೃತ್ತ ಯೋಧರಿಗೆ ಸಾರ್ವಜನಿಕ ಜೀವನದಲ್ಲಿ ಬೆಲೆಯೇ ಇಲ್ಲವೇ? ಎಂದು ಪ್ರಶ್ನಿಸಿದರು.