

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಆಂಗ್ಲ ಭಾಷೆ ಹೇರಿಕೆಯಿಂದ ಕನ್ನಡ ಸಂಕಷ್ಟದಲ್ಲಿದ್ದು, ಈಗ ಕೇಂದ್ರ ಸರ್ಕಾರಕ್ಕೆ ನಮ್ಮ ಮೇಲೆ ಹಿಂದಿ ಭಾಷೆ ಹೇರುವ ಅಧಿಕಾರ ಇಲ್ಲ ಎಂದು ಹಿರಿಯ ವಿಮರ್ಶಕ ಎಸ್.ಆರ್. ವಿಜಯಶಂಕರ್ ಅಭಿಪ್ರಾಯಿಸಿದ್ದಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕನ್ನಡ ಕ್ರಿಯಾ ಸಮಿತಿ ವತಿಯಿಂದ ಎನ್.ಆರ್.ಕಾಲನಿಯ ಬಿಎಂಶ್ರೀ ಪ್ರತಿಷ್ಠಾನದಲ್ಲಿ ಸಾರಿಗೆ ಸಂಸ್ಥೆ ಕಾರ್ಮಿಕರಿಗಾಗಿ ಭಾನುವಾರ ಆಯೋಜಿಸಿದ್ದ "ಕನ್ನಡ ಮತ್ತು ಸಂಸತಿ ಜಾಗೃತಿ ಶಿಬಿರ'ದಲ್ಲಿ ಮಾತನಾಡಿದರು.
ಹಿಂದಿ ಭಾಷೆಯ ಅಗತ್ಯವಿದ್ದರೆ ಸ್ವ&ಪ್ರೇರಣೆ ಮೂಲಕವೇ ಕಲಿಯೋಣ. ಆದರೆ, ಹಿಂದಿ ಕಲಿಕೆ ಕಡ್ಡಾಯವಾಗಬಾರದು. ನಮ್ಮ ರಾಜ್ಯದಲ್ಲಿ ಕನ್ನಡ ಹೆಬ್ಬಾಗಿಲಾಗಿ ಮಿಕ್ಕೆಲ್ಲ ಭಾಷೆಗಳು ಕಿಟಕಿಯಂತಿರಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ಮನು ಬಳಿಗಾರ್ ಮಾತನಾಡಿ, ಕಲೆ, ಸಾಹಿತ್ಯ, ಸಂಗೀತ, ನೃತ್ಯ ಹೀಗೆ ವಿವಿಧ ಅಂಶಗಳಿಂದ ಸಮಾಜವನ್ನು ಸುಧಾರಿಸುವ ಸಂಸತಿ ಬೆಳೆಯುತ್ತದೆ. ದೇಶದಲ್ಲಿರುವ ಸಂಗೀತದ ಅರ್ಧ ಭಾಗ ಕರ್ನಾಟಕದ್ದಾಗಿದೆ. ಪಂಪ, ರನ್ನ, ಕುಮಾರವ್ಯಾಸ, ಕುವೆಂಪು, ಬೇಂದ್ರೆ, ಕಂಬಾರರು ಸೇರಿ ಅನೇಕರು ನೊಬೆಲ್ ಪ್ರಶಸ್ತಿಗೆ ಅರ್ಹತೆ ಇದ್ದಂತಹವರು ಎಂದು ತಿಳಿಸಿದರು. "ಕನ್ನಡ ಸಂಸತಿ- ಒಂದು ಚಿಂತನೆ' ವಿಷಯದ ಕುರಿತು ಸಾಹಿತಿ ಡಾ.ಎಸ್. ಪೂರ್ಣಿಮಾ , "ಕನ್ನಡಿಗರಿಗೆ ಉದ್ಯೋಗಾವಕಾಶ' ಕುರಿತು ಕನ್ನಡಪರ ಚಿಂತಕ ವಸಂತ ಶೆಟ್ಟಿ ಉಪನ್ಯಾಸ ನೀಡಿದರು. ಚಲನಚಿತ್ರ ನಿರ್ದೇಶಕ ಟಿ.ಎನ್. ಸೀತಾರಾಮ್, ಕನ್ನಡಪರ ಹೋರಾಟಗಾರ ವ.ಚ. ಚನ್ನೇಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಪ್ರಭುಸ್ವಾಮಿ, ರಾಜ್ಯ ಖಜಾಂಚಿ ಹುಸೇನ್ ಕೆ.ಎಸ್.ಎಂ. ಮತ್ತಿತರರಿದ್ದರು.
ತೆರಿಗೆ ಕಟ್ಟುವುದರಲ್ಲಿ ಕರ್ನಾಟಕವು ದೇಶದಲ್ಲಿಯೇ 2ನೇ ಸ್ಥಾನದಲ್ಲಿದೆ. ಆದರೆ ಕೇಂದ್ರದ ಅನುದಾನ ಪಡೆಯುವ ಪೈಕಿ 20ನೇ ಸ್ಥಾನದಲ್ಲಿದೆ. ಆದರೂ, ನಾವು ಸುಮ್ಮನಿದ್ದೇವೆ. ಅಭಿವೃದ್ಧಿಯಲ್ಲಿ ದೇಶಕ್ಕೆ ಮಾದರಿಯಾಗಿರುವ ರಾಜ್ಯ ನಮ್ಮದು. ಈ ಎಲ್ಲ ಸಾಧನೆ ಶರಣರ ಕಾಯಕವೇ ಕೈಲಾಸ ಎಂಬ ಸಿದ್ಧಾಂತದಿಂದ ಸಾಧ್ಯವಾಗಿದೆ. > ಡಾ.ಮನು ಬಳಿಗಾರ್, ಕಸಾಪ ಮಾಜಿ ಅಧ್ಯಕ್ಷ