

ಚಿಕ್ಕಮಗಳೂರು: ತಾಲೂಕಿನ ಮಲ್ಲೇನಹಳ್ಳಿ ಬಿಂಡಿಗ ಶ್ರೀ ದೇವಿರಮ್ಮನವರ ದೀಪೋತ್ಸವ ನ.13 ರಿಂದ 17 ರವರೆಗೆ ನಡೆಯಲಿದ್ದು, ಕರೊನಾ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಆಚರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ.
ಶ್ರೀ ದೇವೀರಮ್ಮನವರ ಬೆಟ್ಟವು ಅತ್ಯಂತ ಕಡಿದಾಗಿದ್ದು, ಬೆಟ್ಟಕ್ಕೆ ಹತ್ತುವ ಮಾರ್ಗಗಳು ತುಂಬಾ ಕಿರಿದಾಗಿವೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವುದರಿಂದ ಬೆಟ್ಟ ಹತ್ತುವ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಸಾಧ್ಯವಾಗಿದ್ದು ಕರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚು.
ಭಕ್ತರು ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಈ ವರ್ಷದ ಮಟ್ಟಿಗೆ ನ.14ರಂದು ಶ್ರೀ ದೇವೀರಮ್ಮ ಬೆಟ್ಟವೇರುವುದಕ್ಕೆ ಅವಕಾಶ ನಿರ್ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.