

ಹಾಸನ: ಕ್ರಾಂತಿಕಾರಿ ಬಸವಣ್ಣನವರ ಪ್ರತಿಮೆ ಭಗ್ನಗೊಳಿಸಿರುವ ಕಿಡಿಗೇಡಿಗಳನ್ನು ಶೀಘ್ರ ಬಂಧಿಸಬೇಕು ಎಂದು ಆಗ್ರಹಿಸಿ ವೀರಶೈವ ಲಿಂಗಾಯಿತ ಯವ ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕು ಬಿಚಗುಪ್ಪಿ ಗ್ರಾಮದಲ್ಲಿ ಬಸವಣ್ಣವರ ಪ್ರತಿಮೆಯನ್ನು ನಾಲ್ಕು ದಿನಗಳ ಹಿಂದೆ ದುಷ್ಕರ್ಮಿಗಳು ವಿರೂಪಗೊಳಿಸಿದ್ದಾರೆ. ಬಲವಾಧ ಆಯುಧದಿಂದ ಹೊಡೆದು ಕೈ ಕತ್ತರಿಸಲಾಗಿದೆ. ಶ್ರೇಷ್ಠ ಸಮಾಜ ಸುಧಾರಕ, ವಚನಕಾರ, ಜಾತಿ ಪದ್ಧತಿ, ಅಸ್ಪಶ್ಯತೆ ವಿರುದ್ಧ ಹೋರಾಡಿದ ಮಹಾನ್ ಮಾನವತಾವಾದಿಗೆ ಮಾಡಿರುವ ದೊಡ್ಡ ಅವಮಾನ ಇದಾಗಿದೆ ಎಂದರು.
ಭಕ್ತಿ ಭಂಡಾರಿ ಬಸವಣ್ಣ ಕೇವಲ ಕರ್ನಾಟಕಕ್ಕೆ ಮಾತ್ರವಲ್ಲದೆ ವಿಶ್ವವೇ ಪೂಜಿಸುವ ವ್ಯಕ್ತಿಯಾಗಿದ್ದರು. 12ನೇ ಶತಮಾನ ಕಂಡ ಶ್ರೇಷ್ಠ ನಾಯಕ ಅವರಾಗಿದ್ದಾರೆ. ಇಂದಿಗೂ ಬಸವಣ್ಣನವರ ವಚನಗಳು ಬದುಕಿಗೆ ದಾರಿ ದೀಪವಾಗಿದೆ. ಇಂತಹ ವ್ಯಕ್ತಿಗೆ ಅವಮಾನ ಮಾಡುವುದು ಖಂಡನೀಯ ಎಂದರು.
ವೀರಶೈವ ಲಿಂಗಾಯಿತ ಯುವ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್. ಅವಿನಾಶ್, ಉಪಾಧ್ಯಕ್ಷ ಶರತ್ ಭೂಷಣ್, ಕಾರ್ಯದರ್ಶಿ ವೀರೇಶ್ ಕುಮಾರ್, ಗೌರವಾಧ್ಯಕ್ಷ ಎಚ್.ಎನ್. ನಾಗೇಶ್, ಬಿ.ಎಚ್. ರೇಣುಕುಮಾರ್, ರಾಜು, ದಿಲೀಪ್ ಹಾಗೂ ಇತರರಿದ್ದರು.