ಸಖಿಯರಿಗಿಲ್ಲ ಸಂಬಳ ಭಾಗ್ಯ

selection-055-500x500
Published on

ಸುಭಾಸ ಧೂಪದಹೊಂಡ ಕಾರವಾರ
ಕೃಷಿ, ಹೈನುಗಾರಿಕೆ ಕ್ಷೇತ್ರದ ಬಲವರ್ಧನೆಗೆ ಜಾರಿಗೆ ತಂದ `ಸಖಿ' ಯೋಜನೆಗೆ ಬಾಲಗೃಹ ಕಾಡುತ್ತಿದೆ. ಯೋಜನೆ ಜಾರಿಯಾಗಿ 6 ತಿಂಗಳಾದರೂ ಇದುವರೆಗೂ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಇದರಡಿ ಆಯ್ಕೆಯಾದ ಸಂಪನ್ಮೂಲ ವ್ಯಕ್ತಿಗಳಿಗೆ ಗೌರವಧನ ಪಾವತಿಯಾಗುತ್ತಿಲ್ಲ.ರಾಷ್ಟ್ರೀಯ ಜೀವನೋಪಾಯ ಮಿಷನ್(ಎನ್‌ಆರ್‌ಎಲ್‌ಎಂ) ಅನುದಾನ ಬಳಸಿಕೊಂಡು ಕರ್ನಾಟಕ ರಾಜ್ಯ ಗ್ರಾಮೀಣ ಸಂಸ್ಥೆ ಜೀವನೋಪಾಯ ಅಭಿಯಾನದಡಿ ಕೃಷಿ, ಕೃಷಿ ಸಂಬಂಧಿ ಕೈಗಾರಿಕೆ ಹಾಗೂ ಹೈನುಗಾರಿಕೆ ಕ್ಷೇತ್ರದ ಸುಸ್ಥಿರ ಅಭಿವೃದ್ಧಿಗೆ 2022 ರ ಆಗಸ್ಟ್ ಲ್ಲಿ ಈ ಯೋಜನೆ ಜಾರಿಗೆ ತರಲಾಯಿತು. ದುರ್ಬಲ ವರ್ಗದ ಕೃಷಿಕ ಸಂಸ್ಥೆಗಳನ್ನು ಸ್ಥಾಪಿಸುವ ಜತೆಗೆ ಅವುಗಳ ಮೇಲ್ವಿಚಾರಣೆ ಹಾಗೂ ತರಬೇತಿಗೆ `ಸಖಿ' ಹೆಸರಿನ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳನ್ನು 2 ವರ್ಷದ ಅವಧಿಗೆ ನೇಮಕ ಮಾಡಲು ಸರ್ಕಾರ ಆದೇಶ ಮಾಡಿತು. ಈ ಸಂಪನ್ಮೂಲ ವ್ಯಕ್ತಿಗಳಿಗೆ ಮೊದಲೆರಡು ವರ್ಷ ಸರ್ಕಾರದಿಂದ ಗೌರವಧನ ನೀಡುವುದು. ನಂತರ ಅವರು ನೀಡುವ ಸೇವೆಗಳಿಗೆ ಕಮೀಷನ್ ಆಧಾರದ ಮೇಲೆ ಮಾಸಿಕ 5 ಸಾವಿರದಂತೆ ದುಡಿಯುವ ವ್ಯವಸ್ಥೆ ಮಾಡುವುದು ಯೋಜನೆಯ ಗುರಿಯಾಗಿದೆ. ಇದರಿಂದ ಸ್ಥಳೀಯರಿಗೆ ಉದ್ಯೋಗ ದೊರೆಯುವ ಜತೆ, ಕೃಷಿ ಕ್ಷೇತ್ರದ ಅಭಿವೃದ್ಧಿ, ಕೃಷಿ ಉತ್ಪಾದನೆಗಳ ಮೌಲ್ಯವರ್ಧನೆ ಹಾಗೂ ಮಾರಾಟಕ್ಕೆ ಉತ್ತೇಜನ ನೀಡುವ ಗುರಿ ಹೊಂದಲಾಗಿತ್ತು.
 ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬ ಕೃಷಿ ಸಖಿ, ಇನ್ನೊಬ್ಬ ಕೃಷಿ ಉದ್ಯೋಗ ಸಖಿಯನ್ನು ನೇಮಿಸಿಕೊಳ್ಳಲು ಆದೇಶಿಸಲಾಗಿತ್ತು. ಅವರಿಗೆ 15 ದಿನಗಳ ತರಬೇತಿಯ ನಂತರ ಮಾಸಿಕ 3 ಸಾವಿರ ರೂ. ಗೌರವಧನ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಅದರಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ 229 ಗ್ರಾಪಂಗಳಿಗೆ ತಲಾ ಇಬ್ಬರನ್ನು ನೇಮಿಸಿ ಆಗಸ್ಟ್ ನಲಯೇ ತರಬೇತಿ ನೀಡಲಾಗಿದೆ. ಸೆಪ್ಟೆಂಬರ್ 5 ರಿಂದ ಯೋಜನೆ ಅಧಿಕೃತವಾಗಿ ಜಾರಿಯಾಗಿದೆ.
ಸಮಸ್ಯೆ ಏನು..?
ಕನಿಷ್ಠ 10 ನೇ ತರಗತಿ ಉತ್ತೀರ್ಣರಾದ, ಸ್ವ ಸಹಾಯ ಸಂಘದಲ್ಲಿ ಕನಿಷ್ಠ 2 ವರ್ಷ ಕಾರ್ಯನಿರ್ವಹಿಸಿದ ಅನುಭವವಿರುವ ಸ್ವತಃ ಜಮೀನು ಹೊಂದಿ ಕೃಷಿ ಮಾಡುತ್ತಿರುವ, ಕೃಷಿ ತರಬೇತಿಗಳಿಗೆ ಭಾಗವಹಿಸಲು ಸಿದ್ಧರಿರುವವರನ್ನು ಆಯ್ಕೆ ಮಾಡುವಂತೆ ಸೂಚಿಸಲಾಗಿತ್ತು. ಸರ್ಕಾರದ ಸೂಚನೆಯಂತೆ ಸಂಪನ್ಮೂಲ ವ್ಯಕ್ತಿಗಳನ್ನು ನೇಮಿಸಿಕೊಂಡ ಬಳಿಕ ಅವರಿಗೆ ನೀಡಬೇಕಾದ ಗೌರವಧನಕ್ಕೆ ಬೇಕಾದ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಇದುವರೆಗೂ ಅನುದಾನ ಬಿಡುಗಡೆಯಾಗಿಲ್ಲ. ಇನ್ನು ಅವರಿಗೆ ಸಮರ್ಪಕವಾಗಿ ಕಾರ್ಯಗಳನ್ನೂ ಹಂಚಲಾಗಿಲ್ಲ. ಹೈನುಗಾರಿಕೆ ಸಖಿಗಳ ಆಯ್ಕೆಯಾಗಿದ್ದರೂ ಅವರಿಗೆ ಇದುವರೆಗೂ ತರಬೇತಿಯೇ ಪೂರ್ಣವಾಗಿಲ್ಲ. ಇದರಿಂದ ಯೋಜನೆ ಜಾರಿಗೆ ಹಿನ್ನಡೆಯಾಗಿದೆ.

ಸಖಿಯರ ಕಾರ್ಯವೇನು..?
ಗ್ರಾಪಂ ಮಟ್ಟದ ಒಕ್ಕೂಟದ ಮಹಿಳಾ ರೈತರ ವಿವರ ಸಂಗ್ರಹಿಸುವುದು. ಕೃಷಿ ಜೀವನೋಪಾಯ ಉಪಸಮಿತಿಯ ಸದಸ್ಯರಿಗೆ ತರಬೇತಿ ನೀಡುವುದು. ರೈತರ ಕ್ಷೇತ್ರ ಪಾಠ ಶಾಲೆಯನ್ನು ಆಯೋಜಿಸುವುದು. ತಾಲೂಕು ಮಟ್ಟದ ಕೃಷಿ ತಾಂತ್ರಿಕ ಸಂಯೋಜಕರಿಗೆ ಅಗತ್ಯ ಸಮನ್ವಯವನ್ನು ಒದಗಿಸುವುದು. ಕೃಷಿ ಜೀವನೋಪಾಯ ಚಟುವಟಿಕೆಗಳ ಅನುಷ್ಠಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಿ ತಾಲೂಕು ಮಟ್ಟದ ಎಂಐಎಸ್ ಸಿಬ್ಬಂದಿಗೆ ನೀಡವುದು. ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೆ ಕೃಷಿ, ಮೀನುಗಾರಿಕೆ, ಅರಣ್ಯ ಇಲಾಖೆಗಳು ಮತ್ತು ಮಹಾತ್ಮ ಗಾಂಽ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗಳಿಂದ ಆಸ್ತಿ ರಚನೆ ಸೌಲಭ್ಯಗಳಂತಹ ಎಲ್ಲ ಪ್ರಯೋಜನಗಳಿಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವುದು. ಕೃಷಿ ವಿಜ್ಞಾನ ಕೇಂದ್ರ, ನಬಾರ್ಡ್ ಮತ್ತು ಇತರ ಕೃಷಿ ಜೀವನೋಪಾಯಗಳ ಅಂಗಸAಸ್ಥೆಗಳು ನಡೆಸುವ ವಿವಿಧ ತರಬೇತಿ ಕಾರ್ಯಕ್ರಮಗಳಿಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಕಳುಹಿಸುವುದು. ಸಾವಯವ ಗ್ರಾಮ ಕ್ಲಸ್ಟರ್ ಕಾರ್ಯಕ್ರಮ ಮತ್ತು ಸಮಗ್ರ ಕೃಷಿ ಕ್ಲಸ್ಟರ್ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಬ್ಲಾಕ್ ತಾಂತ್ರಿಕ ಸಂಯೋಜಕರು ಮತ್ತು ಕ್ಲಸ್ಟರ್ ತಾಂತ್ರಿಕ ಸಂಯೋಜಕರಯೊಂದಿಗೆ ಸಮನ್ವಯಗೊಳಿಸುವುದು. ರೈತರ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ಮಣ್ಣು ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಿ, ಫಲಿತಾಂಶ ವಿತರಿಸಲು ಸಹಕರಿಸುವುದು. ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಫಲಾನುಭವಿಗಳ ಕುಟುಂಬದ ಸದಸ್ಯರಿಗೆ ಅಗತ್ಯ ಮಾರ್ಗದರ್ಶನ ಮತ್ತು ಸಹಾಯವನ್ನು ಒದಗಿಸುವುದು. ಬೆಳೆ ವಿಮೆ ಮಾಹಿತಿ ನೀಡುವುದು. ರೈತ ಸಂಪರ್ಕ ಕೇಂದ್ರ ಮತ್ತು ಕೃಷಿ ಯಂತ್ರೋಪಕರಣ ಕೇಂದ್ರಗಳ ಅರಿವು ಮೂಡಿಸುವುದು. ಉತ್ಪಾದಕ ಗುಂಪುಗಳನ್ನು ಸ್ಥಾಪಿಸಲು ಸಹಾಯ ಮಾಡುವುದು. ಹಿತ್ತಲಿನಲ್ಲಿ ಅಥವಾ ಹೊಲಗಳಲ್ಲಿ ಆಗಿ ನ್ಯೂಟ್ರಿ ಗಾರ್ಡನ್ ಕಿಚನ್ ಗಾರ್ಡನ್‌ಗಳನ್ನು ಸ್ಥಾಪಿಸಲು ಪ್ರತಿ ಮಹಿಳಾ ರೈತರಿಗೆ ಪ್ರೋತ್ಸಾಹಿಸಿ ಮತ್ತು ತಾಂತ್ರಿಕ ಮಾರ್ಗದರ್ಶನವನ್ನು ಒದಗಿಸುವುದು ಸಖಿಯರ ಕಾರ್ಯವಾಗಿದೆ.
................
ಈ ಬಗ್ಗೆ ಸಮರ್ಪಕ ಮಾಹಿತಿ ಪಡೆದು ಶೀಘ್ರ ಹಣ ಬಿಡುಗಡೆಗೆ ಕ್ರಮ ವಹಿಸಲಾಗುವುದು.

ಈಶ್ವರ ಕಾಂದೂ
ಜಿಪಂ ಸಿಇಒ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net