

ಬೆಂಗಳೂರು: ರಾಜ್ಯ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ವೇತನವನ್ನು ಯಾವುದೇ ಕಾರಣಕ್ಕೂ ಕಡಿತ ಮಾಡುವುದು ಬೇಡವೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ಸಚಿವರ ಜತೆ ಸಭೆ ನಡೆಸಿದ ಸಂದರ್ಭದಲ್ಲಿ, ಹಲವು ರಾಜ್ಯಗಳಲ್ಲಿ ವೇತನ ಕಡಿತ ಮಾಡಿರುವ ರೀತಿಯಲ್ಲಿಯೇ ರಾಜ್ಯದಲ್ಲೂ ಮಾಡೋಣವೆಂದು ಕೆಲ ಸಚಿವರು ಸಲಹೆ ನೀಡಿದಾಗ ಸಿಎಂ ಒಪ್ಪಲಿಲ್ಲ. ವೇತನ ಕಡಿತ ಮಾಡಿದರೆ ತಪು್ಪಸಂದೇಶ ರವಾನೆಯಾಗುತ್ತದೆ, ಸರ್ಕಾರಿ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರೆಂದು ತಿಳಿದುಬಂದಿದೆ.
ಮಾರ್ಚ್ನ ವೇತನ ನೀಡು ವುದಕ್ಕೆ ಯಾವುದೇ ಸಮಸ್ಯೆ ಇಲ್ಲ, ಪರಿಸ್ಥಿತಿ ತೀರಾ ಕೆಟ್ಟಾಗಷ್ಟೇ ವೇತನ ಕಡಿತದ ಬಗ್ಗೆ ಅಲೋಚಿಸೋಣ, ಈಗ ಅದರ ಬಗ್ಗೆ ಚರ್ಚೆ ಮಾಡುವುದು ಬೇಡ, ಏಪ್ರಿಲ್ನಲ್ಲೂ ವೇತನ ನೀಡುವುದಕ್ಕೆ ಸಮಸ್ಯೆ ಇಲ್ಲ, ಅಂತಹ ಪರಿಸ್ಥಿತಿ ಬಹುತೇಕ ಬರುವುದಿಲ್ಲ ಎಂದು ಸಿಎಂ ಹೇಳಿದ್ದಾಗಿ ಸಭೆಯಲ್ಲಿದ್ದ ಸಚಿವರೊಬ್ಬರು ಸ್ಪಷ್ಟಪಡಿಸಿದರು. ವೇತನ ಕಡಿತ ಮಾಡಿದರೆ ಅದರಿಂದ ಉಳಿಯುವ ಹಣವನ್ನು ಕರೊನಾ ನಿಯಂತ್ರಣಕ್ಕೆ ಬಳಸಬಹುದು, ಸುಮಾರು 400 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತ ಲಭ್ಯವಾಗುತ್ತದೆ ಎಂದು ಸಚಿವರು ವಿವರಿಸಿದರೆನ್ನಲಾಗಿದೆ.