

ಗುತ್ತಲ: ಭವಿಷ್ಯವಾಣಿ ಖ್ಯಾತಿಯ ಮೈಲಾರ ಜಾತ್ರೆಗೆ ಹೊರಗಿನವರಿಗೆ ಪ್ರವೇಶವಿಲ್ಲವೆಂದು ಬಳ್ಳಾರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇದು ಜಾತ್ರೆಗೆ ಹೋಗುವ ಲಕ್ಷಾಂತರ ಭಕ್ತರಿಗೆ ನಿರಾಸೆ ಮೂಡಿಸಿದೆ.
ಮೈಲಾರದಲ್ಲಿ ಮಾ. 1ರಂದು ಕಾರ್ಣಿಕೋತ್ಸವ ಹಾಗೂ 2ರಂದು ಸರಪಳಿ ಪವಾಡ ನಡೆಯಲಿದೆ. ಆದರೆ, ಕರೊನಾ ಮಾರ್ಗಸೂಚಿ ಪಾಲನೆಯನ್ವಯ ಫೆ. 19ರಿಂದ ಮಾ. 3ರವರೆಗೆ ಮೈಲಾರದಲ್ಲಿ 144 ಕಲಂ ಅನ್ವಯ ನಿಷೇಧಾಜ್ಞೆ ಹೇರಲಾಗಿದೆ. ಈ ವೇಳೆ ಧರ್ಮಕರ್ತರು, ಕಾರ್ಣಿಕದ ಗೊರವಯ್ಯ, ಪ್ರಧಾನ ಅರ್ಚಕರು ಹಾಗೂ 26 ವಿವಿಧ ಬಾಬುದಾರರಿಗೆ ಮಾತ್ರ ಮುಕ್ತವಾಗಿ ಸಂಚರಿಸಲು ಜಿಲ್ಲಾಡಳಿತ ವಿಶೇಷ ಅನುಮತಿ ನೀಡಿದೆ. ಗ್ರಾಮಸ್ಥರು ಮಾತ್ರ ಗುಂಪಾಗಿ ಸೇರದೆ ಜಾತ್ರೆಯಲ್ಲಿ ಪಾಲ್ಗೊಳ್ಳಬಹುದು. ಹೊರ ಊರಿನವರಿಗೆ ಮಾತ್ರ ಕಡ್ಡಾಯವಾಗಿ ನಿರ್ಬಂಧ ಹೇರಿದೆ.
ಮೈಲಾರಕ್ಕೆ ಹೊರಗಿನ ಭಕ್ತರು ಆಗಮಿಸದಂತೆ ಫೆ. 19ರಿಂದ ಮಾ. 2ರವರೆಗೆ ಮೈಲಾರಕ್ಕೆ ಸಂರ್ಪಕ ಕಲ್ಪಿಸುವ ಎಲ್ಲ ದಾರಿಗಳನ್ನು ಬಳ್ಳಾರಿ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಬಂದ್ ಮಾಡಲಾಗುತ್ತಿದೆ. ಹಾಗಂತ, ಜಾತ್ರೆ ಪ್ರತಿ ವರ್ಷದಂತೆ ನಡೆಯುವುದಲ್ಲದೆ, ಎಲ್ಲ ಸಂಪ್ರದಾಯ ಬದ್ಧ ಆಚರಣೆಗೆ ಅವಕಾಶವುಂಟು. ಆದರೆ, ಮೈಲಾರದ ಕಾರ್ಣಿಕೋತ್ಸವ ವೀಕ್ಷಿಸಲು ಆಗಮಿಸುತ್ತಿದ್ದ ಲಕ್ಷಾಂತರ ಭಕ್ತರಿಗೆ ಅವಕಾಶ ನಿರಾಕರಿಸಲಾಗಿದೆ.
ಪ್ರತಿವರ್ಷ ಜಾತ್ರೆ ವೇಳೆ ತುಂಗಭದ್ರಾ ನದಿ ತಟದಿಂದ ಆರಂಭವಾಗುತ್ತಿದ್ದ ದೀರ್ಘದಂಡ ನಮಸ್ಕಾರ, ಜೌವುಳ, ದೇವರ ಹೊರೆ ಹೊತ್ತಕೊಳ್ಳುವುದು, ಕುದರಿ ಚಾಕರಿ, ಭಕ್ತರು ಮೀಸಲು ಬುತ್ತಿಯನ್ನು ತಂದು ದೋಣಿಯಲ್ಲಿ ಹಾಕಿ ಮೈಲಾರಲಿಂಗೇಶ್ವರನಿಗೆ ಪ್ರಾರ್ಥಿಸುವ ಕಾರ್ಯಗಳಿಗೆ ಕಡಿವಾಣ ಬಿದ್ದಿದೆ. ಇದು ಭಕ್ತರಿಗೆ ತೀವ್ರ ನಿರಾಸೆ ತಂದಿದೆ. ಮೈಲಾರಲಿಂಗೇಶ್ವರನಿಗೆ ಬೇಡಿಕೊಂಡಿದ್ದ ಹರಕೆ ಸಲ್ಲಿಸುವಲ್ಲಿ ವಚನ ತಪ್ಪಿ ದೇವರ ಶಾಪಕ್ಕೆ ಗುರಿಯಾಗಬೇಕಾಗುತ್ತದೆ ಎಂಬ ಭಾವನೆ ಭಕ್ತರಲ್ಲಿ ಮೂಡಿದೆ.
ಜಾತ್ರೆ ನೆಚ್ಚಿಕೊಂಡಿದ್ದ ಸಾವಿರಾರು ವ್ಯಾಪಾರಿಗಳು, ನಾಟಕ ಕಂಪನಿಗಳು, ಸರ್ಕಸ್ಗಳು, ಮಕ್ಕಳ ವಿವಿಧ ಆಟಿಕೆಗಳನ್ನು ಸ್ಥಾಪಿಸಿ ವ್ಯಾಪಾರ ಮಾಡುತ್ತಿದ್ದವರಿಗೆ ತೀವ್ರ ನಿರಾಸೆಯಾಗಿದೆ. ಕರೊನಾ ವೈರಸ್ ಹಾವಳಿ ಕಡಿಮೆಯಾಗಿದ್ದು, ರಾಜ್ಯದ ವಿವಿಧೆಡೆ ಜಾತ್ರೆಗಳು, ಸಮಾವೇಶಗಳು ನಡೆಯುತ್ತಿವೆ. ಎಲ್ಲೂ ಇರದ ನಿಯಮಗಳು ಮೈಲಾರ ಜಾತ್ರೆಗೆ ಏಕೆ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ತನ್ನ ನಿರ್ಧಾರ ಮರು ಪರಿಶೀಲನೆ ಮಾಡಬೇಕು ಎಂಬುದು ಮೈಲಾರಲಿಂಗೇಶ್ವರನ ಭಕ್ತರ ಕೋರಿಕೆಯಾಗಿದೆ.
ಜಾತ್ರೆಯಲ್ಲಿ ಮೈಲಾರಲಿಂಗೇಶ್ವರನಿಗೆ ವಿವಿಧ ಸೇವೆ ಕೈಗೊಳ್ಳಬೇಕಿದ್ದ ಭಕ್ತರು ಜಾತ್ರೆಯ ತರುವಾಯ ಸೇವೆ ಮಾಡಲು ಅವಕಾಶವಿದೆ. ಈ ವರ್ಷ ಸುಧಾರಿಸಿಕೊಳ್ಳಬೇಕು.| ಅನಿಲ ದಳವಾಯಿ, ಸರಪಳಿ ಪವಾಡದ ಬಾಬುದಾರ, ಮೈಲಾರ
ಮೈಲಾರಲಿಂಗೇಶ್ವರನ ಜಾತ್ರೆಗೆ ಹೊರಗಿನ ಭಕ್ತರಿಗೆ ನಿಷೇಧ ಹೇರಿದ್ದು ನೋವಾಗಿದೆ. ಕರೊನಾ ಹಾವಳಿ ಕಡಿಮೆಯಾಗಿದೆ. ಎಲ್ಲೆಡೆ ಜಾತ್ರೆ ಹಾಗೂ ಸಮಾವೇಶಗಳಿಗೆ ಅನುಮತಿ ಇದ್ದರೂ, ಮೈಲಾರ ಹಾಗೂ ಕುರವತ್ತಿಗೆ ಜಾತ್ರೆಗಳಿಗೆ ನಿಷೇಧ ಎಷ್ಟು ಸಮಂಜಸ. ಈ ಬಗ್ಗೆ ಬಳ್ಳಾರಿ ಜಿಲ್ಲಾಡಳಿತ ಮರು ಪರಿಶೀಲನೆ ಮಾಡಿ ಜಾತ್ರೆಗೆ ಎಲ್ಲರಿಗೂ ಅನುಮತಿ ನೀಡಿದರೆ ಉತ್ತಮ.| ಮಾಲತೇಶ ಶಿ. ಬನ್ನಿಮಟ್ಟಿ, ನಿರ್ದೇಶಕ ಹರ ಸೊಸೈಟಿ ಗುತ್ತಲ