

ಮಾಗಡಿ : ಹೇಮಾವತಿ ನೀರಿಗಾಗಿ ಕಿತ್ತಾಡುವುದು ಬೇಡ. ಈ ಭಾಗಕ್ಕೆ ನೀರು ಯಾವ ರೀತಿ ತರಬೇಕೆಂದು ಸರ್ಕಾರ ಕಾರ್ಯಕ್ರಮ ರೂಪಿಸಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ತಾಲೂಕಿನ ತಿಪ್ಪಸಂದ್ರ ಹೋಬಳಿ ಮುಳಕಟ್ಟಮ್ಮನ ಪಾಳ್ಯದ ಮನೆಯ ದೇವರು ಶ್ರೀ ಮುಳಕಟ್ಟಮ್ಮ ದೇವಿಯ ನೂತನ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಹೇಮಾವತಿ ನೀರನ್ನು ಈ ಭಾಗಕ್ಕೆ ತರಲು ಜನತೆ ಕೇಳಿದ್ದು ಸರ್ಕಾರ ಇದನ್ನು ಪರಿಗಣಿಸಬಹುದು, ನೀರು, ಜಾತಿ, ಧರ್ಮ ಎಲ್ಲವನ್ನೂ ಮೀರಿದೆ, ನೀರು ಎಲ್ಲರಿಗೂ ಅಗತ್ಯ ಎಂದರು.
ಕಾಂಗ್ರೆಸ್ ಸರ್ಕಾರ ಬಡವರ ಧ್ವನಿಯಾಗಿ, ಅಭಿವೃದ್ದಿ, ರೈತ ಪರವಾಗಿ ಕೆಲಸ ಮಾಡುತ್ತಿದ್ದೇವೆ, ಗ್ರಾಮೀಣ ಭಾಗದಲ್ಲಿ ಕೆಲವರು ಸಂಕಷ್ಟದಲ್ಲಿದ್ದು, ಕೂಲಿ ಸಿಗದೆ ಜೀವನ ಸಾಗಿಸಲು ಕಷ್ಟದಲ್ಲಿ ಇರುವರಿಗೆ ಪ್ರತಿ ತಿಂಗಳು 2 ಸಾವಿರ ಸೇರಿ 5 ಗ್ಯಾರಂಟಿಗಳ ಜತೆಗೆ ಕರ್ನಾಟದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದೇವೆ ಎಂದರು.
ಶಾಸಕ ಎಚ್.ಸಿ.ಬಾಲಕೃಷ್ಣ ಭವಿಷ್ಯದ ನಾಯಕ, ತುಮಕೂರಿನ ಸಿದ್ಧಗಂಗಾ ಮಠದಲ್ಲಿ ವಿಜಯೇಂದ್ರ ಅವರು ಭವಿಷ್ಯದ ನಾಯಕ ಎಂದಿದ್ದೆ, ಈಗ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ, ಎಚ್.ಸಿ. ಬಾಲಕೃಷ್ಣ ಭವಿಷ್ಯದ ನಾಯಕ ಎಂದು ತಾಯಿ ಹೇಳಿಸಿದ್ದಾಳೆ. ಅವರಿಗೆ ಶುಭವಾಗಲಿ, ನಾನು ಅವರೊಂದಿಗೆ ಸದಾ ಇರುತ್ತೇನೆ ಎಂದರು.
ಹಳ್ಳಿಗಳ ಸೌಂದರ್ಯದ ಸೊಬಗಲ್ಲಿ ಜಾತ್ರೆಗಳು ಅಡಗಿವೆ. ಈ ಜಾತ್ರೆಗಳನ್ನು ಆತ್ಮತೃಪ್ತಿಯಿಂದ ಆಚರಣೆಮಾಡುವುದು ನಮ್ಮ ಮೇಲಿರುವ ಬಹುದೊಡ್ಡ ಜವಾಬ್ದಾರಿ ಎಂದರು.
ಶಾಸಕ ಎಚ್.ಸಿ. ಬಾಲಕೃಷ್ಣ ಮಾತನಾಡಿ, ಡಾ.ಜಿ.ಪರಮೇಶ್ವರ್ ಮಾಗಡಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದಾರೆ. ಮತ್ತಷ್ಟು ಸಹಕಾರ ನೀಡಲಿ. ಮುಳಟ್ಟಮ್ಮ ದೇವಾಲಯ ತಾಲೂಕಿನಲ್ಲಿ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಶಕ್ತಿದೇವತೆಯ ಆರಾಧನೆಯಿಂದ ತಾಲೂಕು ಮಳೆಬೆಳೆಗಳಿಂದ ಕೂಡಿ ಸಮೃದ್ಧಿಯಾಗಿರಲಿ. ದೇವಾಲಯದ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ ಎಂದರು.
ರಾಜ್ಯ ಬೆಸ್ಕಾಂ ಮಾಜಿ ನಿರ್ದೇಶಕ ಬಿ.ವಿ. ಜಯರಾಮು ಮಾತನಾಡಿ, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಉಪಮುಖ್ಯಮಂತ್ರಿಯಾಗಿ ಈ ನಾಡಿಗೆ ನೀಡಿದ ಸೇವೆಯನ್ನು ಮರೆಯುವಂತಿಲ್ಲ. ಅವರು ಮುಖ್ಯಮಂತ್ರಿಯಾಗಿ ನಾಡಿನ ಸೇವೆ ಮಾಡಲು ತಾಯಿ ಮುಳಕಟ್ಟಮ್ಮ ದೇವಿ ಅವಕಾಶ ಕಲ್ಪಿಸಲಿ. ಕಾಂಗ್ರೆಸ್ ಹೈಕಮಾಂಡ್ ಈ ಭಾರಿ ಮುಖ್ಯಮಂತ್ರಿ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು.
ದೇಗುಲದಲ್ಲಿ ಅನ್ನಛತ್ರ, ಸಮುದಾಯಭವನ, ಯಾತ್ರಿ ನಿವಾಸ ಸೇರಿ ಸಾರ್ವಜನಿಕರಿಗೂ ಅನುಕೂಲಕರವಾಗುವ ಭವ್ಯ ದೇಗುಲವಾಗಿದೆ, ಗೃಹ ಸಚಿವರು ದೇವಾಲಯದ ಬಳಿ 6 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ, ಶೌಚಗೃಹ, ಗರುಡ ಗಂಭ, ಹೈಮಾಸ್ಟ್, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದರು.
ಜಿ. ಪರಮೇಶ್ವರ್ ಪತ್ನಿ ಕನ್ನಿಕಾ ಪರಮೇಶ್ವರಿ ಅವರೊಂದಿಗೆ ಜಾತ್ರೆಯ ಕಳಸ ಪೂಜೆ ನೆರವೇರಿಸಿ ಜಾತ್ರಾಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾತ್ರಿ ಕಳಸ ಸ್ಥಾಪನೆಯ ನಂತರ ಮಡೆ ಆರತಿ ಹಾಗೂ ಮುತ್ತಿನ ಪಲ್ಲಕ್ಕಿ, ರಥೋತ್ಸವ ಕಾರ್ಯಕ್ರಮ ನೆರವೇರಿತು. ದೇವಾಲಯದ ಸಮೀಪ ರಸಮಂಜರಿ ಕಾರ್ಯಕ್ರಮದ ಆಯೋಜನೆ ಮಾಡಲಾಗಿತ್ತು. ಮತ್ತು ಜಾತ್ರೆಯ ಭಕ್ತರಿಗೆ ಅನ್ನದಾಸೋಹದ ವ್ಯವಸ್ಥೆ ಆಯೋಜನೆಯಾಗಿತ್ತು. ಚಲನ ಚಿತ್ರ ನಟ, ನಟಿಯರು ಭಾಗವಹಿಸಿದ್ದರು.
ತಾಲೂಕು ಟಿಎಪಿಸಿಎಂಎಸ್ ಅಧ್ಯಕ್ಷ ಹೊನ್ನಾಪುರ ಶಿವಪ್ರಸಾದ್, ಗುತ್ತಿಗೆದಾರ ಚಿದಾನಂದ್, ಜಯಚಂದ್ರ, ಕನಕಪುರ ಜಗದೀಶ್, ಬ್ಯಾಲದ ಕೆರೆ ಚಿಕ್ಕರಾಜು, ತಾಪಂ ಮಾಜಿ ಅಧ್ಯಕ್ಷ ಶಿವರಾಜು, ಕಂಬದ ರಂಗಯ್ಯ, ಸಿದ್ದಾಪ್ಪಾಜಿ ಇತರರು ಇದ್ದರು.