

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಮಲ್ಪೆ-ಹೆಬ್ರಿ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಪೆರ್ಡೂರು ಜೋಗಿಬೆಟ್ಟುವಿಲ್ಲಿ ಹೆದ್ದಾರಿಯಿಂದಲೇ ನೇರ ಸಂಪರ್ಕ ರಸ್ತೆ ನಿರ್ಮಿಸಬೇಕು. ಯಾವೂದೇ ಕಾರಣಕ್ಕೂ ಬೈಪಾಸ್ ರಸ್ತೆ ನಿರ್ಮಾಣ ಮಾಡಬಾರದು ಎಂದು ಜೋಗಿಬೆಟ್ಟು ಪರಿಸರದ ಜನತೆ ಒತ್ತಾಯಿಸಿದ್ದಾರೆ.
ಉಡುಪಿಯಿಂದ ಹೆಬ್ರಿಯ ತನಕ ಎಲ್ಲ ಕಡೆಯಲ್ಲೂ ಹೆದ್ದಾರಿಗೆ ನೇರವಾಗಿ ತಾಗಿಕೊಂಡೇ ಬೇರೆಬೇರೆ ಊರುಗಳಿಗೆ ಸಂಪರ್ಕ ರಸ್ತೆ ನಿರ್ಮಿಸಿ ಸಂಚಾರಕ್ಕೆ ಅವಕಾಶ ಮಾಡಲಾಗಿದೆ. ಆದರೆ ಪೆರ್ಡೂರು ಜೋಗಿಬೆಟ್ಟು ಎಂಬಲ್ಲಿ ಮಾತ್ರ ಬೈಪಾಸ್ ರಸ್ತೆ ನಿರ್ಮಾಣ ಮಾಡುವುದು ಸರಿಯಲ್ಲ. ಜೋಗಿಬೆಟ್ಟು ಎಂಬಲ್ಲಿ ಮೊದಲಿದ್ದ ರಸ್ತೆ ಈಗ ಸುಮಾರು 10 ಅಡಿಗೂ ಹೆಚ್ಚು ಆಳದಲ್ಲಿದ್ದು ಜೋಗಿಬೆಟ್ಟು ಕುರ್ಪಾಡಿ ರಸ್ತೆ ಅತಿ ಎತ್ತರವಾಗಿ ಅಪಾಯದಲ್ಲಿದೆ. ಬೈಪಾಸ್ ರಸ್ತೆ ಮಾಡಿದರೇ ಇದರಿಂದ ತುಂಬಾ ಸಮಸ್ಯೆಯಾಗುತ್ತದೆ ಎಂದು ಸ್ಥಳೀಯರು ದೂರಿದ್ದಾರೆ.
ಮಲ್ಪೆ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ಪೆರ್ಡೂರು ಕುರ್ಪಾಡಿ ರಸ್ತೆ ಹೆಬ್ರಿ ಬ್ರಹ್ಮಾವರ ಮುಖ್ಯರಸ್ತೆಗೆ ಸಂಪರ್ಕ ರಸ್ತೆಯಾಗಿದೆ. ಬಸ್ ಸಂಚಾರಿಸುವ ಮುಖ್ಯರಸ್ತೆಯಾಗಿದ್ದು ಕುರ್ಪಾಡಿ, ಸಂತೆಕಟ್ಟೆ, ಕರ್ಜೆ, ಕಳ್ತೂರು, ಕೊಕ್ಕರ್ಣೆ, ಹೆಬ್ರಿ, ಬ್ರಹ್ಮಾವರ, ಮಂದಾರ್ತಿ ಸಹಿತ ಹಲವು ಊರುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ನಿತ್ಯವೂ ಶಾಲಾ ಕಾಲೇಜು, ಉದ್ಯೋಗಕ್ಕೆ ನೂರಾರು ಮಂದಿ ಇದೇ ರಸ್ತೆ ಮೂಲಕ ತೆರಳುತ್ತಾರೆ. ಈ ರಸ್ತೆಗೆ ಹೆದ್ದಾರಿಯಿಂದ ನೇರ ಸಂಪರ್ಕ ಕಲ್ಪಿಸುವ ಬದಲು ಬೈಪಾಸ್ ರಸ್ತೆ ನಿರ್ಮಾಣ ಮಾಡುತ್ತಿರುವುದು ಅನ್ಯಾಯವಾಗಿದೆ.
ಉಡುಪಿಯಿಂದ ಹೆಬ್ರಿ ತನಕ ಎಲ್ಲಿಯೂ ಬೈಪಾಸ್ ರಸ್ತೆ ಮಾಡದೆ ಜೋಗಿಬೆಟ್ಟಿನಲ್ಲಿ ಮಾಡುತ್ತಿರುವುದು ನಮಗೆ ಮಾಡುತ್ತಿರುವ ಘೋರ ಅನ್ಯಾಯ, ನಿತ್ಯ ಸಂಚಾರ ಮಾಡುವವರಿಗೆ ತುಂಬಾ ಸಮಸ್ಯೆಯಾಗುತ್ತಿದೆ, ಬೈಪಾಸ್ ಮಾಡದೆ ಹೆದ್ದಾರಿಯಿಂದಲೇ ನೇರ ರಸ್ತೆ ಸಂಪರ್ಕ ಮಾಡಿಸಿಕೊಡಿ ಎಂದು ಸ್ಥಳೀಯರಾದ ಪ್ರವೀಣ್ ಶೆಟ್ಟಿ ಹೇಳಿದ್ದಾರೆ. ಸಮಸ್ತ ನಾಗರಿಕರು ತಮ್ಮೂರಿನ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಬ್ಯಾನರ್ ಹಾಕಿ ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಪೆರ್ಡೂರು ಕುರ್ಪಾಡಿಗೆ ಹೋಗುವ ಕ್ರಾಸ್‌ನಲ್ಲಿ ಅನಗತ್ಯವಾಗಿ ಬೈಪಾಸ್ ರಚಿಸಲು ಪ್ರಯತ್ನ ನಡೆಯುತ್ತಿದೆ. ಈ ಹುನ್ನಾರದ ವಿರುದ್ಧ ನಾವು ಎಚ್ಚೆತ್ತುಕೊಂಡಿದ್ದೇವೆ. ತಕ್ಷಣವೇ ಹೆದ್ದಾರಿ ಇಲಾಖೆ ಅಧಿಕಾರಿಗಳು ನಮ್ಮ ಸಮಸ್ಯೆ ಆಲಿಸಿ ಬಗೆಹರಿಸುವಂತೆ ಮನವಿ ಮಾಡುತ್ತೇವೆ. ಇಲ್ಲದಿದ್ದಲ್ಲಿ ಹೆದ್ದಾರಿ ಕೆಲಸಕ್ಕೆ ತಡೆಯೊಡ್ಡಿ ತುರ್ತು ಕುರ್ಪಾಡಿ ಕ್ರಾಸ್ ಆಸ್ಪತ್ರೆಗೆ ಹೋಗುವ ಸಂಪರ್ಕ ರಸ್ತೆ ತುರ್ತು ಮಾಡಲು ಕ್ರಮಕೈಗೊಂಡ ಬಳಿಕ ಹೆದ್ದಾರಿ ಕೆಲಸ ಮುಂದುವರಿಸಬೇಕು, ಇಲ್ಲದಿದ್ದಲ್ಲಿ ತೀವ್ರವಾಗಿ ಹೋರಾಟ ಮಾಡುತ್ತೇವೆ.ಜಯಪಾಲ ಶೆಟ್ಟಿ, ಸ್ಥಳೀಯರು
ಈ ವಿಷಯ ನನ್ನ ಗಮನಕ್ಕೆ ಬಂದಿದೆ. ಸುರಕ್ಷತೆ ದೃಷ್ಟಿಯಲ್ಲಿ ಪಕ್ಕದಲ್ಲಿ ಬೈಪಾಸ್ ರಸ್ತೆ ಮಾಡಲಾಗಿದೆ. ಅತೀ ಅಗತ್ಯ ಎನಿಸಿದರೆ, ಮುಂದಿನ ದಿನಗಳಲ್ಲಿ ಸಮಾಲೋಚನೆ ನಡೆಸಿ ಜನರ ಬೇಡಿಕೆಯಂತೆ ರಸ್ತೆ ನಿರ್ಮಾಣ ಮಾಡುತ್ತೇವೆ. ಬೈಪಾಸ್ ಮಾಡುವ ಉದ್ದೇಶವೆಂದರೆ ಅಪಘಾತ ತಪ್ಪಿಸುವುದಾಗಿದೆ.ಮಂಜುನಾಥ್ ನಾಯ್ಕ, ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್