

ಬೆಂಗಳೂರು: ಲಾಕ್ಡೌನ್ ಜಾರಿಯಲ್ಲಿ ಇರುವುದರಿಂದ ದೇಶಾದ್ಯಂತ ರಕ್ತದಾನ ಶಿಬಿರಗಳು ನಡೆಯುತ್ತಿಲ್ಲ. ಮತ್ತೊಂದೆಡೆ ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗುತ್ತಿದ್ದವರು ಪೊಲೀಸರ ಲಾಠಿಗೆ ಹೆದರಿ ಮನೆಯಿಂದ ಹೊರ ಬರುತ್ತಿಲ್ಲ. ಹೀಗಾಗಿ ರಾಜ್ಯದೆಲ್ಲೆಡೆ ರಕ್ತದ ಕೊರತೆ ಉಂಟಾಗಿದ್ದು, ನಿರಂತರವಾಗಿ ರಕ್ತಪೂರಣ ಮಾಡಿಸಿಕೊಳ್ಳಬೇಕಾದ ತಲಸ್ಸೆಮಿಯಾ ಪೀಡಿತರು, ಡಯಾಲಿಸಿಸ್ಗೆ ಒಳಪಟ್ಟವರು, ಗರ್ಭಿಣಿಯರೂ ಸೇರಿ ರಾಜ್ಯದ ಸಾವಿರಾರು ರೋಗಿಗಳಿಗೆ ರಕ್ತದ ಅಗತ್ಯವಿದೆ. ರಕ್ತದ ಕೊರತೆಯಿಂದಾಗಿ ಕೆಲ ರೋಗಿಗಳು ಜೀವನ್ಮರಣ ಹೋರಾಟ ನಡೆಡುವ ಸ್ಥಿತಿ ನಿರ್ಮಾಣವಾಗಿದೆ.
ಈ ಹಿಂದೆ ಮಾಸಿಕ 6 ಸಾವಿರ ಯೂನಿಟ್ ರಕ್ತ ಸಂಗ್ರಹವಾಗುತ್ತಿತ್ತು. ಕೆಲ ದಿನಗಳಿಂದ ಅದು 2 ಸಾವಿರ ಯೂನಿಟ್ಗೆ ಇಳಿದಿದೆ. ಲಾಕ್ಡೌನ್ನಿಂದಾಗಿ ರಕ್ತದಾನ ಶಿಬಿರ ಆಯೋಜಿಸುವುದು ಸಾಧ್ಯವಾಗುತ್ತಿಲ್ಲ. ಅಲ್ಲದೆ ರಕ್ತದಾನಿಗಳು ಕರೊನಾ ಸೋಂಕಿನ ಭೀತಿಯಲ್ಲಿ ರಕ್ತದಾನ ಮಾಡಲು ಹಿಂಜರಿಯುತ್ತಿದ್ದಾರೆ. ‘ಈಗ ಕಂಪನಿಗಳು ವರ್ಕ್ ಫ್ರಂ ಹೋಮ್ೆ ಆದೇಶ ನೀಡಿವೆ. ಕಾಲೇಜುಗಳೂ ನಡೆಯುತ್ತಿಲ್ಲ. ಹೀಗಾಗಿ ರಕ್ತದಾನಿಗಳನ್ನು ಗುರುತಿಸಲು ತ್ರಾಸವಾಗುತ್ತಿದೆ. ರಕ್ತದ ಕೊರತೆಯಿಂದಾಗಿ ನಾವು ಸರ್ಕಾರಿ ಸೇರಿ ರಕ್ತ ಸಂಗ್ರಹವಿರುವ ಹಲವು ಆಸ್ಪತ್ರೆಗಳಿಗೆ ರಕ್ತ ಕಳಿಸುವುದನ್ನೂ ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ’ ಎಂದು ರೆಡ್ಕ್ರಾಸ್ ಸಂಸ್ಥೆಯ ಮೂಲಗಳು ತಿಳಿಸಿವೆ. ಸದ್ಯ ಪಾಸಿಟಿವ್ ಫ್ಯಾಕ್ಟರ್ನ ರಕ್ತ ಲಭ್ಯವಿದ್ದರೂ ನೆಗೆಟಿವ್ ಫ್ಯಾಕ್ಟರ್ನ ರಕ್ತಕ್ಕೆ ತೀವ್ರ ಅಭಾವವಿದೆ. ಜತೆಗೆ ಆಸ್ಪತ್ರೆಗಳು ತುರ್ತು ಅಗತ್ಯವಿರುವ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡುತ್ತಿರುವುದರಿಂದ ರಕ್ತದ ಬೇಡಿಕೆಯೂ ತಗ್ಗುತ್ತಿದೆ.
ರಕ್ತದ ಕೊರತೆ ಹೋಗಲಾಡಿಸುವ ನಿಟ್ಟಿನಲ್ಲಿ ರಾಷ್ಟ್ರೋತ್ಥಾನ ಪರಿಷತ್ತು ಹೊಸ ಕಾರ್ಯತಂತ್ರ ರೂಪಿಸಿದೆ. ರಕ್ತದಾನ ಮಾಡಲು ಆಸಕ್ತಿ ಇರುವವರು ಪರಿಷತ್ ಅಭಿವೃದ್ಧಿಪಡಿಸಿರುವ ವೆಬ್ಸೈಟ್ ಮೂಲಕ ಹೆಸರು, ಫೋನ್ ನಂಬರ್, ರಕ್ತದ ಗುಂಪು ಸೇರಿ ಇನ್ನಿತರ ಮಾಹಿತಿ ನೀಡಬಹುದು. ಸಿಬ್ಬಂದಿ ಅದನ್ನು ಪರಿಶೀಲಿಸಿ ಅಪೂ›ವಲ್ ನೀಡಿದ ಕೂಡಲೇ ರಕ್ತದಾನಿಗಳ ಮೊಬೈಲ್ಫೋನ್ಗೆ ಸಂದೇಶ ಬರುತ್ತದೆ. ರಕ್ತ ನೀಡಲು ಬರುವ ವೇಳೆ ಪೊಲೀಸರು ತಡೆ ಹಿಡಿದರೆ ಈ ಸಂದೇಶ ತೋರಿಸಬಹುದು. ಆಸಕ್ತರು http://app.rashtrotthana.org/blood-donors-passನಲ್ಲಿ ಡೋನರ್ ಪಾಸ್ ಪಡೆಯಬಹುದು. ಹೆಚ್ಚಿನ ಮಾಹಿತಿಗೆ 080 29747870/26608870 ಸಂರ್ಪಸಬಹುದು.
ಪ್ರತಿ ತಿಂಗಳು ರಕ್ತದಾನ ಶಿಬಿರಗಳ ಮೂಲಕ 2500ರಿಂದ 3000 ರಕ್ತದಾನಿ ಗಳಿಂದ ರಕ್ತ ಸಂಗ್ರಹಿಸಲಾಗುತ್ತಿತ್ತು. ಆದರೆ ಇತ್ತೀಚೆಗೆ ಕರೊನಾ ಆತಂಕದಿಂದ ಯಾರೂ ಮನೆಯಿಂದ ಹೊರಬರದೆ ರಕ್ತದ ಕೊರತೆ ಉಂಟಾಗುತ್ತಿದೆ. | ಜೆ. ಅನುರಾಧಾ ಟೆಕ್ನಿಕಲ್ ಸೂಪರ್ವೈಸರ್, ರಾಷ್ಟ್ರೋತ್ಥಾನ ರಕ್ತನಿಧಿ, ಬೆಂಗಳೂರು
| ಅವಿನಾಶ್ ಮೂಡಂಬಿಕಾನ