ಮತ್ತಿಲ್ಲ ಲಾಕ್​ಡೌನ್: ವಿಸ್ತರಣೆ ಬದಲು ಇನ್ಮುಂದೆ ಚಿಕಿತ್ಸೆಗೆ ಸಿಗಲಿದೆ ಒತ್ತು

Lockdown
Published on

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಉಲ್ಬಣಿಸಿರುವ ಕರೊನಾ ಸೋಂಕನ್ನು ಕಟ್ಟಿಹಾಕುವ ಕಾರ್ಯಾಚರಣೆಗೆ ಸ್ಪಷ್ಟ ದಿಕ್ಸೂಚಿ ನೀಡಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಸೋಂಕು ನಿಯಂತ್ರಣಕ್ಕೆ ದಿಗ್ಬಂಧನವೊಂದೇ ಪರಿಹಾರವಲ್ಲ, ಅಂತಹ ಯೋಚನೆಯೂ ಸರ್ಕಾರದ ಮುಂದಿಲ್ಲ ಎನ್ನುವ ಮೂಲಕ ಲಾಕ್​ಡೌನ್ ವಿಸ್ತರಣೆ ಸಾಧ್ಯತೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಚಿಕಿತ್ಸೆಗೆ ಆದ್ಯತೆ ನೀಡುವುದೊಂದೇ ಸರ್ಕಾರದ ಸಂಕಲ್ಪ ಎಂದೂ ಪುನರುಚ್ಚರಿಸಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಬೆಂಗಳೂರಿನ 8 ವಲಯಗಳ ಉಸ್ತುವಾರಿ ಸಚಿವರು ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಸ್ತುಸ್ಥಿತಿ ಅಧ್ಯಯನ ವರದಿ ಮಂಡಿಸಿದ ಮಾತ್ರಕ್ಕೆ ಉಸ್ತುವಾರಿ ತಂಡಗಳ ಜವಾಬ್ದಾರಿ ಮುಗಿದಿಲ್ಲವೆನ್ನುವ ಮೂಲಕ ಸಚಿವರಿಗೆ ಹೊಣೆಗಾರಿಕೆ ನೆನಪಿಸಿದರು.

ವಾರ್ಡ್​ಗೊಬ್ಬ ಸ್ವಯಂಸೇವಕ, 1 ಆಂಬುಲೆನ್ಸ್ ನಿಗದಿ, ಖಾಸಗಿ ಆಸ್ಪತ್ರೆಗಳಿಗೆ ನೋಡಲ್ ಅಧಿಕಾರಿ ನೇಮಕ ಹಾಗೂ ವಲಯವಾರು ಮೇಲ್ವಿಚಾರಣೆ, ಆದ್ಯತೆಯ ಮೇಲೆ ಕೈಗೊಳ್ಳಲೇಬೇಕಾದ ಕ್ರಮಗಳೆಂಬುದನ್ನು ಸಭೆಯ ಗಮನಕ್ಕೆ ತಂದರು. ಚಿಕಿತ್ಸಾ ವ್ಯವಸ್ಥೆಯ ಪ್ರತಿ ಕ್ರಮಗಳ ಮೇಲ್ವಿಚಾರಣೆ ನಡೆಸಿ, ಯಾವುದೇ ತೊಡಕು ಉಂಟಾಗದಂತೆ ನೋಡಿಕೊಳ್ಳುವುದು ಉಸ್ತುವಾರಿ ತಂಡಗಳ ಹೊಣೆ. ಖಾಸಗಿ ಆಸ್ಪತ್ರೆಗಳ ಜತೆಗೆ ಸಮನ್ವಯ ಸಾಧಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಸಿಎಂ ನಿರ್ದೇಶನ ನೀಡಿದರು.

ಪರಿಹಾರಗಳೇನು

  • 65 ವರ್ಷ ಮೇಲ್ಪಟ್ಟವರ ಚಿಕಿತ್ಸೆಗೆ ಆದ್ಯತೆ, ರೋಗ ಲಕ್ಷಣ ಇಲ್ಲದವರೂ ಆರೈಕೆ ಕೇಂದ್ರಕ್ಕೆ
  • ಫಲಿತಾಂಶ ಬಂದ 2 ತಾಸಿನೊಳಗೆ ಹಾಸಿಗೆ ನಿಗದಿ, ಕಲ್ಯಾಣ ಮಂಟಪಗಳಲ್ಲಿಯೂ ಕ್ವಾರಂಟೈನ್
  • ಜನನಿಬಿಡ ಪ್ರದೇಶದಲ್ಲಿ ಪೊಲೀಸರ ನಿಯೋಜನೆ, ಖಾಸಗಿ ಆಸ್ಪತ್ರೆಗೆ ನೋಡಲ್ ಅಧಿಕಾರಿ ನೇಮಕ

ಸಮಸ್ಯೆಗೆ ಪರಿಹಾರ

ರೋಗ ಲಕ್ಷಣ ಇರುವ, 65 ವರ್ಷ ಮೇಲ್ಪಟ್ಟವರಿಗೆ ಮೊದಲ ಆದ್ಯತೆ ಮೇಲೆ ಹಾಸಿಗೆ ಹಂಚಿಕೆ ಮಾಡಬೇಕು. ವೈದ್ಯರ ಕೊರತೆ ನೀಗಿಸಲು ಹುದ್ದೆ ಭರ್ತಿ ಪ್ರಕ್ರಿಯೆ ನಡೆಯುತ್ತಿದೆ. ಪ್ರತಿ ವಾರ್ಡ್ ನಲ್ಲೂ ಸ್ವಯಂಸೇವಕರನ್ನು ಗುರುತಿಸಿ, ಆಂಬುಲೆನ್ಸ್ ನಿಗದಿಪಡಿಸಲಾಗಿದೆ, ಪರೀಕ್ಷೆ ಫಲಿತಾಂಶ ದೊರೆತ 2 ತಾಸಿನೊಳಗೆ ಹಾಸಿಗೆ ಹಂಚಿಕೆ ಮಾಡಿ, ಆಂಬುಲೆನ್ಸ್ನಲ್ಲಿ ಕರೆದೊಯ್ದು ದಾಖಲಿಸುವ ವ್ಯವಸ್ಥೆ ವಿಕೇಂದ್ರೀಕರಿಸಬೇಕು, ಪ್ರತಿ ವಾರ್ಡ್ ನಲ್ಲಿ ಕಲ್ಯಾಣ ಮಂಟಪ, ವಸತಿಗೃಹ ಗುರುತಿಸಲಾಗಿದೆ. ವಾಸಿಸಲು ಪ್ರತ್ಯೇಕ ಕೊಠಡಿಗಳು ಇಲ್ಲದವರ ಕ್ವಾರಂಟೈನ್​ಗೆ ಬಳಸಬೇಕು, ಹಾಗೆಯೇ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಪ್ರದೇಶಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವಂತೆಯೂ ಸಿಎಂ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net