ಆಂಧ್ರದಲ್ಲಿ ಕನ್ನಡ ಶಾಲೆ ಮುಚ್ಚಲ್ಲ: ಕನ್ನಡ ಮಾಧ್ಯಮ ಯಥಾಸ್ಥಿತಿ, ಬದಲಾದ ಸರ್ಕಾರದ ನಿಲುವು

Aandra
Published on

ಬಳ್ಳಾರಿ: ಆಂಧ್ರದಲ್ಲಿ ಕನ್ನಡ ಮಾಧ್ಯಮ ಸೇರಿ ಎಲ್ಲ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮಗಳನ್ನಾಗಿ ಪರಿವರ್ತಿಸಲು ಮುಂದಾಗಿದ್ದ ಆಂಧ್ರ ಸರ್ಕಾರವು ತನ್ನ ನಿಲುವನ್ನು ಬದಲಿಸಿದೆ. ಬದಲಿಗೆ ಕನ್ನಡ ಶಾಲೆಗಳ ಮುಂದುವರಿಕೆಗೆ ಆದೇಶ ಹೊರಡಿಸಿದೆ. ಈ ಕುರಿತು ಮಾ.18ರಂದೇ ಅಲ್ಲಿನ ಕನ್ನಡ ಶಾಲೆಗಳಿಗೆ ಆದೇಶ ಕಳುಹಿಸಿದೆ.

ಜನವರಿಯಲ್ಲಿ ಆಂಧ್ರ ಸರ್ಕಾರವು ಒಂದರಿಂದ 10ನೇ ತರಗತಿವರೆಗಿನ ಎಲ್ಲ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸುವುದಾಗಿ ತಿಳಿಸಿತ್ತು. ಕನ್ನಡ ಶಾಲೆಗಳಿಗೆ ತೆಲುಗು ಇಲ್ಲವೆ ಇಂಗ್ಲಿಷ್ ಮಾಧ್ಯಮ ಆಯ್ದುಕೊಳ್ಳುವಂತೆ ಜ.22ರಂದು ಡಿಕ್ಲರೇಷನ್ ಪತ್ರ ಸಹ ಕಳುಹಿಸಿತ್ತು. ಈ ಎಲ್ಲ ಬೆಳವಣಿಗೆಗಳ ಕುರಿತು ‘ವಿಜಯವಾಣಿ’ ಜ.23ರಂದು ‘ಆಂಧ್ರದಲ್ಲಿ ಕನ್ನಡ ಶಾಲೆ ಮುಚ್ಚುವ ಆತಂಕ’ ಎನ್ನುವ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ಜ.24 ರಂದು ಆಂಧ್ರ ಸರ್ಕಾರಕ್ಕೆ ಅಲ್ಲಿನ ಕನ್ನಡ ಶಾಲೆಗಳನ್ನು ಮುಚ್ಚದಂತೆ ಒತ್ತಾಯಿಸಿ ಪತ್ರ ಬರೆದಿದ್ದರು. ಇದಾದ ಬಳಿಕ ಅಲ್ಲಿನ ಸರ್ಕಾರ, ಕನ್ನಡ ಶಾಲೆಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿ ಆದೇಶ ನೀಡಿದೆ. ಇದರಿಂದ ಅನಂತಪುರ, ಕರ್ನಲು ಜಿಲ್ಲೆಯಲ್ಲಿದ್ದ 64 ಕನ್ನಡ ಶಾಲೆಗಳು ನಿಟ್ಟುಸಿರು ಬಿಟ್ಟಿವೆ.

ಆಂಧ್ರ ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚುವ ಆದೇಶ ಹಿಂಪಡೆದಿದೆ. ಇದರಿಂದ ನಮಗೆ ಬಹಳಷ್ಟು ಸಂತಸವಾಗಿದೆ. ನಮ್ಮ ಸಮಸ್ಯೆಯನ್ನು ‘ವಿಜಯವಾಣಿ’ ಮುಂದೆ ತೋಡಿಕೊಂಡಿದ್ದೆವು. ಅದರಲ್ಲಿ ವರದಿ ಬಂದ ಹಿನ್ನೆಲೆಯಲ್ಲಿ ಆಂಧ್ರ ಸರ್ಕಾರ ಕನ್ನಡ ಶಾಲೆ ಮುಚ್ಚುವ ಆದೇಶ ಹಿಂಪಡೆದಿದೆ. ಇದರಿಂದ ನಮ್ಮ ಉದ್ಯೋಗ ಉಳಿಯಿತು. | ಜಿ.ದೊಡ್ಡಬಸಪ್ಪ ಸರ್ಕಾರಿ ಪ್ರಾಥಮಿಕ ಶಾಲೆ ಯಳ್ಳಾರ್ತಿ, ಕರ್ನಲು ಜಿಲ್ಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net