

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (ಬಿಡಿಎ) ಕಾರ್ಯನಿರ್ವಹಿಸುತ್ತಿರುವ ಡೇಟಾ ಆಪರೇಟರ್ ಗಳಿಗೆ ಪ್ರಸಕ್ತ ತಿಂಗಳ ವೇತನ ಬಟವಾಡೆ ಆಗದೆ ಗಣೇಶ ಹಬ್ಬ ಆಚರಿಸಲು ಪರಿತಪಿಸುವಂತಾಗಿದೆ.
ಸರ್ಕಾರಿ ಹಾಗೂ ಖಾಸಗಿ ಕಂಪನಿಗಳ ನೌಕರರು ಹಬ್ಬದ ಖುಷಿಯಲ್ಲಿದ್ದರೂ, ಬಿಡಿಎ ಡೇಟಾ ಆಪರೇಟರ್‌ಗಳಿಗೆ ಸಕಾಲದಲ್ಲಿ ಸಂಬಳ ಪಾವತಿಸದ್ದರಿಂದ ಗಣಪತಿ ಹಬ್ಬ ಸಂಭ್ರಮದಿಂದ ವಂಚಿತರಾಗಿದ್ದಾರೆ. ಹೊರಗುತ್ತಿಗೆ ಅಡಿಯಲ್ಲಿ 130ಕ್ಕೂ ಹೆಚ್ಚು ಡೇಟಾ ಆಪರೇಟರ್‌ಗಳು ಕೆಲಸ ಮಾಡುತ್ತಿದ್ದಾರೆ. ಪ್ರತಿ ತಿಂಗಳೂ ಮೊದಲ ವಾರದಲ್ಲಿ ವೇತನ ನೀಡುವ ಪದ್ಧತಿ ಇದೆ. ಆದರೆ, ಸಂಬಂಧಿಸಿದ ಅಧಿಕಾರಿಗಳು ಇವರಿಗೆ ಸಂಬಳದ ಬಿಲ್ ಮಾಡಿ ಅದರ ಕಡತವನ್ನು ವಿಲೇವಾರಿ ಮಾಡದ ಕಾರಣ ಈ ತಿಂಗಳ ವೇತನ ಪಾವತಿ ಆಗಿಲ್ಲ. ಅಧಿಕಾರಿಗಳ ಅಸಡ್ಡೆಯಿಂದ ಕೆಳ ಹಂತದ ಸಿಬ್ಬಂದಿಗೆ ಪಗಾರ ಸಿಕ್ಕಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಕೆಲ ತಿಂಗಳಿಂದ ಡೇಟಾ ಆಪರೇಟರ್‌ಗಳಿಗೆ ಸಮಯಕ್ಕೆ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ. ತಿಂಗಳ ಮೂರನೇ ಅಥವಾ ನಾಲ್ಕನೇ ವಾರ ಸಂಬಳ ನೀಡುವ ವಿಳಂಬ ಪ್ರವೃತ್ತಿ ಇದೆ. ಪ್ರತಿ ತಿಂಗಳೂ ವೇತನದ ಕಡತ ವಿಲೇವಾರಿ, ಮೇಲಾಧಿಕಾರಿಗಳ ಸಹಿ ಮಾಡದ ಕಾರಣ ಸಿಬ್ಬಂದಿಗಳಿಗೆ ತೊಂದರೆ ಆಗುತ್ತಿದೆ ಎಂಬ ಆರೋಪ ಇದೆ. ಈ ಬಾರಿ ಗಣಪತಿ ಹಬ್ಬಕ್ಕಾದರೂ ಸಕಾಲದಲ್ಲಿ ವೇತನ ಆಗುತ್ತದೆ ಎಂದು ನಿರೀಕ್ಷಿಸಿದ್ದ ಸಿಬ್ಬಂದಿಗೆ ನಿರಾಸೆಯಾಗಿದೆ.