

ವಿಜಯವಾಣಿ ಸುದ್ದಿಜಾಲ ರಟ್ಟಿಹಳ್ಳಿ
ಪಟ್ಟಣದಲ್ಲಿನ ಪೊಲೀಸ್ ವಸತಿ ಗೃಹಕ್ಕೆ ಸಮರ್ಪಕ ರಸ್ತೆ, ಬೀದಿ ದೀಪ ಹಾಗೂ ಕುಡಿಯುವ ನೀರಿನ ಸೌಲಭ್ಯವಿಲ್ಲದೆ ಪೊಲೀಸ್ ಸಿಬ್ಬಂದಿ ಪರದಾಡುವಂತಾಗಿದೆ.
ಪಟ್ಟಣದ ಸರ್ವೆ ನಂ. 85ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ 5 ಎಕರೆ 5 ಗುಂಟೆ ಜಾಗದಲ್ಲಿ ಹೊಸ ಪೊಲೀಸ್ ಠಾಣೆ ಹಾಗೂ ಗೃಹ ಇಲಾಖೆಯಿಂದ 2018ರಲ್ಲಿ ಮತ್ತು 2019ರಲ್ಲಿ ಸುಸಜ್ಜಿತವಾಗಿ ವಸತಿ ಗೃಹಗಳನ್ನು ನಿರ್ವಿುಸಲಾಗಿದೆ. ಒಂದಂತಸ್ತಿನ 12 ಕಟ್ಟಡಗಳಲ್ಲಿ ಒಟ್ಟು 24 ವಸತಿ ಗೃಹ ನಿರ್ವಿುಸಲಾಗಿದೆ.
ವಸತಿ ಗೃಹಕ್ಕೆ ತೆರಳುವ ರಸ್ತೆ ಸಮರ್ಪಕವಾಗಿಲ್ಲ. ಪೊಲೀಸ್ ಠಾಣೆಯ ಹಿಂಬದಿಯಲ್ಲಿ ಒಂದು ಕಚ್ಚಾ ರಸ್ತೆಯಿದೆ. ಈ ರಸ್ತೆಯ ಮೂಲಕವೇ ಸುಮಾರು ಅರ್ಧ ಕಿ.ಮೀ. ಕ್ರಮಿಸಿ ವಸತಿ ಗೃಹಗಳಿಗೆ ಹೋಗಬೇಕಾಗಿದೆ. ಮಳೆಗಾಲದಲ್ಲಿ ರಸ್ತೆಯು ಕೆಸರುಮಯವಾಗುವುದರಿಂದ ಓಡಾಡಲು ಬಾರದ ಸ್ಥಿತಿಯಿದೆ. ಈ ರಸ್ತೆಯಲ್ಲಿ ಯಾವುದೇ ವಿದ್ಯುತ್ ದೀಪದ ವ್ಯವಸ್ಥೆ ಇಲ್ಲದ್ದರಿಂದ ರಾತ್ರಿ ವೇಳೆ ಸಂಚರಿಸಲು ತೊಂದರೆಯಾಗಿದೆ. ವಿಷಜಂತುಗಳ ಹಾವಳಿ ಇಲ್ಲಿ ಹೆಚ್ಚಾಗಿರುವುದರಿಂದ ಭೀತಿಯಲ್ಲೇ ಓಡಾಡಬೇಕಿದೆ.
ವಸತಿ ಗೃಹಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿಲ್ಲ. ಆವರಣದಲ್ಲಿ ಬೋರ್ವೆಲ್ ಇದ್ದು, ಅದರಲ್ಲಿನ ಫ್ಲೋರೈಡ್ಯುುಕ್ತ ನೀರನ್ನೇ ಪೊಲೀಸ್ ಕುಟುಂಬಗಳು ಅನಿವಾರ್ಯವಾಗಿ ಬಳಸುತ್ತಿದ್ದಾರೆ. ಕಳೆದ 15 ದಿನಗಳಿಂದ ಒಂದು ಬೋರ್ವೆಲ್ ಕೆಟ್ಟಿದ್ದು, ತಾತ್ಕಾಲಿಕವಾಗಿ ಪಕ್ಕದ ಸರ್ಕಾರಿ ಕಾಲೇಜ್ನ ಬೋರ್ವೆಲ್ ನೀರು ಬಳಸಲಾಗುತ್ತಿದೆ.
ಕೊಳಚೆ ನೀರು ಹೊರಹೋಗಲು ಗಟಾರ್ ವ್ಯವಸ್ಥೆ ಮಾಡಿಲ್ಲ. ವಸತಿ ಗೃಹದ ಪಕ್ಕದಲ್ಲಿ ಒಂದು ಗುಂಡಿ ನಿರ್ವಿುಸಿದ್ದು, ಅದರಲ್ಲಿ ನೀರು ಸಂಗ್ರಹವಾಗುತ್ತಿದೆ. ಈ ಗುಂಡಿಯು ತುಂಬಿ ದುರ್ವಾಸನೆ ಬೀರುತ್ತಿದ್ದು, ಸುತ್ತಮುತ್ತ ಯಾರೂ ಸಂಚರಿಸದಂತಾಗಿದೆ.
ವೇತನದ ಶೇ. 10ರಷ್ಟು ಬಾಡಿಗೆ ಕಡಿತ: ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಒಬ್ಬ ಪಿಎಸ್ಐ, ಮೂವರು ಎಎಸ್ಐ, 10 ಹೆಡ್ಕಾನ್ಸ್ಟೇಬಲ್ ಮತ್ತು 21 ಪೊಲೀಸ್ ಪೇದೆ ಸೇರಿ ಒಟ್ಟು 35 ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದು ಮಹಡಿಯಲ್ಲಿರುವ 12 ಗೃಹಗಳು ಭರ್ತಿಯಾಗಿವೆ. ಮತ್ತೊಂದು ಮಹಡಿಯಲ್ಲಿ 6 ವಸತಿ ಗೃಹಗಳು ಭರ್ತಿಯಾಗಿ, ಉಳಿದ 6 ಭರ್ತಿಯಾಗಬೇಕಾಗಿದೆ. ಪ್ರತಿ ತಿಂಗಳು ವೇತನದಲ್ಲಿ ಶೇ. 10ರಷ್ಟು ಬಾಡಿಗೆ ಕಡಿತ ಮಾಡಲಾಗುತ್ತಿದೆ. ಇಲ್ಲಿನ ಮೂಲಸೌಕರ್ಯಗಳ ಸಮಸ್ಯೆಯಿಂದಾಗಿ ಕೆಲವು ಪೊಲೀಸ್ ಸಿಬ್ಬಂದಿ ಇನ್ನೂ ಬಾಡಿಗೆ ಮನೆಯಲ್ಲಿಯೇ ವಾಸವಾಗಿದ್ದಾರೆ.
ಗೃಹ ಸಚಿವರು ಗಮನಿಸಲಿ: ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಜಿಲ್ಲೆಯಲ್ಲಿಯೇ ಪೊಲೀಸ್ ವಸತಿ ಗೃಹಕ್ಕೆ ಇಂತಹ ದುಸ್ಥಿತಿ ಇದೆ. ಸಚಿವರು ಇತ್ತ ಗಮನಹರಿಸಿ ಪರಿಹಾರ ಒದಗಿಸಬೇಕು ಎಂಬುದು ಪೊಲೀಸ್ ಕುಟುಂಬದವರ ಒತ್ತಾಸೆಯಾಗಿದೆ.
ರಟ್ಟಿಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ವಸತಿ ಗೃಹಗಳಿಗೆ ಸಂರ್ಪಸುವ ರಸ್ತೆ ನಿರ್ವಣ, ಮೂಲಸೌಕರ್ಯ ಸಮಸ್ಯೆಗಳಿಗೆ ಸಂಭಂದಿಸಿದಂತೆ ಕೆಲವು ದಿವಸಗಳ ಹಿಂದೆ ಪಟ್ಟಣ ಪಂಚಾಯಿತಿ ಗಮನಕ್ಕೆ ತರಲಾಗಿದೆ. ಸಂಬಂಧಿಸಿದ ಅಧಿಕಾರಿಗಳಿಗೆ ಒತ್ತಡ ತರುವುದರ ಮೂಲಕ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು.| ಮಂಜುನಾಥ ಪಂಡಿತ್ ಸಿಪಿಐ ಹಿರೇಕೆರೂರಪೊಲೀಸ್ ವಸತಿ ಗೃಹಗಳಿಗೆ ಅವಶ್ಯವಿರುವ ಕುಡಿಯುವ ನೀರಿನ ಪೈಪ್ಲೈನ್ ವ್ಯವಸ್ಥೆ, ಗಟಾರದ ಸೌಕರ್ಯ ಮತ್ತು ರಸ್ತೆ ಕಲ್ಪಿಸಲು ಗೃಹ ಇಲಾಖೆಯೇ ಯೋಜನೆ ತಯಾರಿಸಿ ಸೌಕರ್ಯ ಒದಗಿಸಬೇಕು. ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದಂತೆ ಕುಡಿಯುವ ನೀರು ಮತ್ತು ಬೀದಿ ದೀಪದ ಸೌಕರ್ಯ ಮಾಡಲಾಗವುದು.| ರಾಜಾರಾಂ ಪವಾರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಟ್ಟಿಹಳ್ಳಿ