

ಮಕ್ಕಳ ಶಿಕ್ಷಣ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಒಳಗೊಳ್ಳುತ್ತದೆ. ಹೀಗಾಗಿ ಹಲವು ರೀತಿಯಲ್ಲಿ ಅವರ ಶೈಕ್ಷಣಿಕ ಪ್ರಗತಿಗೆ ನೆರವು ನೀಡಲಾಗುತ್ತದೆ. ಆದರೆ ಈ ಯೋಜನೆಗಳು ಕಾಲ ಕಳೆದಂತೆ ಸಂತ್ರಸ್ತರಿಗೆ ಅನುಕೂಲ ಕಲ್ಪಿಸುವುದರಿಂದ ದೂರವೇ ಉಳಿಯುತ್ತವೆ. ಆತ್ಮಹತ್ಯೆಗೆ ಶರಣಾದ ರೈತ ಮಕ್ಕಳು ಹಾಗೂ ಕೋವಿಡ್ನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳು ಸರ್ಕಾರದ ನೆರವಿಗಾಗಿ ಎದುರು ನೋಡುತ್ತಿದ್ದಾರೆ. ಈ ಕುರಿತು ವಿಜಯವಾಣಿ ವರದಿಗಾರರು ರೂಪಿಸಿದ ಸಹಾಯವಾಣಿ ವರದಿಗಳು ಇಲ್ಲಿವೆ.
ಶೈಕ್ಷಣಿಕ ವೆಚ್ಚ ಮರುಪಾವತಿಗೆ ಉದಾಸೀನ
| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಕೃಷಿ ಉದ್ದೇಶಕ್ಕೆ ಸಾಲ ಮಾಡಿ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕೆಂಬ ಕಾರಣಕ್ಕೆ ರೂಪುಗೊಂಡ ಮಹತ್ವಾಕಾಂಕ್ಷಿ ಯೋಜನೆಯೊಂದು ಸರ್ಕಾರದ ಉದಾಸೀನದಿಂದ ಹಳ್ಳ ಹಿಡಿಯುತ್ತಿದೆ.
ಮಕ್ಕಳು ಅನಾಥರಾಗಿ ಶಿಕ್ಷಣ ಮೊಟಕುಗೊಳಿಸಬಾರದು ಎಂಬ ಕಾರಣಕ್ಕೆ ಅವರ ಶಿಕ್ಷಣ ಮತ್ತು ವಸತಿ ಶುಲ್ಕ ಮರು ಭರಿಸಲು ಯೋಜನೆ ರೂಪಿಸಿ, 2015ರ ನವೆಂಬರ್ 13ರಂದು ಆದೇಶ ಹೊರಡಿಸಲಾಗಿತ್ತ್ತು. ಈ ಮೂಲಕ ಅವರಿಗೆ ಅವಕಾಶ ಕಲ್ಪಿಸುವುದು ಪ್ರಧಾನ ಉದ್ದೇಶವಾಗಿತ್ತು. ಅಚ್ಚರಿ ಎಂದರೆ ಕಳೆದ 2-3 ಮೂರು ವರ್ಷಗಳಿಂದ ಈ ಯೋಜನೆ ಬಗ್ಗೆ ಸರ್ಕಾರಕ್ಕೆ ಆಸಕ್ತಿ ಇದ್ದಂತೆ ತೋರುತ್ತಿಲ್ಲ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ರೈತರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ವಾರ್ಷಿಕ ಬೋಧನಾ ಶುಲ್ಕವಾಗಿ 24 ಸಾವಿರ ರೂ. ಮತ್ತು ವಸತಿ ಶುಲ್ಕ ಒಳಗೊಂಡಂತೆ ಒಟ್ಟಾರೆಯಾಗಿ 48 ಸಾವಿರ ರೂ. ಗರಿಷ್ಠ ಮಿತಿಯಲ್ಲಿ ಶುಲ್ಕ ಮರುಪಾವತಿಸುವುದು ಯೋಜನೆಯ ಸಾರವಾಗಿದೆ.
2022-23 ಮತ್ತು 2023-24ನೇ ಸಾಲಿಗೆ ಸಂಬಂಧಿಸಿದಂತೆ ಜಿಲ್ಲಾ ಹಂತದಿಂದ ಪ್ರಸ್ತಾವನೆ ಪಡೆಯಲು ಕ್ರಮ ವಹಿಸಲಾಗುತ್ತಿದೆ ಎಂಬುದು ಶಿಕ್ಷಣ ಇಲಾಖೆ ವಿವರಣೆ. ಸಾಮಾನ್ಯವಾಗಿ ಮೃತ ರೈತರ ಕುಟುಂಬದ ಮಾಹಿತಿ ಸರ್ಕಾರದ ಬಳಿ ಇರುತ್ತದೆ. ಅವರನ್ನು ಸಂರ್ಪಸುವುದು ಹಾಗೂ ಅವರ ಅವಶ್ಯಕತೆ ಪೂರೈಸುವುದು ಕಷ್ಟವಾಗಲಿಕ್ಕಿಲ್ಲ. ಆದರೆ, ಈ ಕೆಲಸ ಕಷ್ಟ ಎಂದು ಸರ್ಕಾರ ಭಾವಿಸಿದಂತಿದೆ.
ರೈತರು ಮೃತರಾದ ಸಂದರ್ಭದಲ್ಲಿ ಆ ರೈತ ಕುಟುಂಬದ ಸಮಗ್ರ ಮಾಹಿತಿ ಜಿಲ್ಲಾಡಳಿತ, ಕಂದಾಯ ಮತ್ತು ಕೃಷಿ ಇಲಾಖೆ ಬಳಿ ಇರುತ್ತದೆ. ಎಷ್ಟು ಜಮೀನಿತ್ತು? ಎಷ್ಟು ಸಾಲ ಮಾಡಿಕೊಂಡಿದ್ದರು? ಕುಟುಂಬ ಸದಸ್ಯರ ಹಿನ್ನೆಲೆಯ ಮಾಹಿತಿಯೂ ಸರ್ಕಾರದ ಬಳಿ ಸಂಗ್ರಹವಿರುತ್ತದೆ. ಆದರೆ, ರೈತರ ಮಕ್ಕಳ ಶೈಕ್ಷಣಿಕ ಮಾಹಿತಿ ಜಿಲ್ಲಾಮಟ್ಟದಿಂದ ಸಂಗ್ರಹಿಸುವ ಕೆಲಸ ನಡೆದಿದೆ ಎಂಬುದು ಸರ್ಕಾರ ಈಗ ನೀಡುತ್ತಿರುವ ಸಬೂಬು.
ಹೆಚ್ಚುತ್ತಿದೆ ಸಂಖ್ಯೆ
2023ರ ಜೂನ್ನಿಂದ ನವೆಂಬರ್ ಅಂತ್ಯಕ್ಕೆ 456 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ 354 ಅರ್ಹ ಪ್ರಕರಣಗಳಲ್ಲಿ 321 ಪ್ರಕರಣಗಳಿಗೆ 16.05 ಕೋಟಿ ರೂಪಾಯಿ ಪರಿಹಾರ ವಿತರಿಸಲಾಗಿದೆ. ಇನ್ನುಳಿದ 33 ಪ್ರಕರಣಗಳಿಗೆ ಪರಿಹಾರ ವಿತರಿಸಬೇಕಾಗಿದೆ. 52 ಪ್ರಕರಣ ಉಪ ವಿಭಾಗಾಧಿಕಾರಿಗಳ ಸಮಿತಿಯಲ್ಲಿ ತೀರ್ವನಕ್ಕೆ ಬಾಕಿ ಉಳಿದಿದ್ದು, 50 ಪ್ರಕರಣಗಳನ್ನು ಅರ್ಹತೆ ಇಲ್ಲದಿರುವುದರಿಂದ ತಿರಸ್ಕೃತಗೊಳಿಸಲಾಗಿದೆ. ಈ ಅವಧಿಯಲ್ಲಿ ಅತಿ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣಗಳು ಹಾವೇರಿ (62), ಬೆಳಗಾವಿ (56), ಚಿಕ್ಕಮಗಳೂರು (49), ಶಿವಮೊಗ್ಗ (32), ಮೈಸೂರು (30), ವಿಜಯಪುರದಲ್ಲಿ 25 ನಡೆದಿವೆ.
==========================================================
9 ತಿಂಗಳಿಂದ ದೊರೆಯದ ಅನುದಾನ
| ವಿ.ಕೆ. ರವೀಂದ್ರ ಕೊಪ್ಪಳ
ಅನಾಥರು, ಸಾಮಾಜಿಕ ಸಂಘರ್ಷಕ್ಕೆ ಒಳಗಾದವರು, ಕೋವಿಡ್ನಿಂದ ಏಕ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ನೆರವಾಗಬೇಕಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಹಭಾಗಿತ್ವದ ‘ಪ್ರಾಯೋಜಕತ್ವ’ ಯೋಜನೆ ನಿಷ್ಪ್ರೊಜಕ ಸ್ಥಿತಿ ತಲುಪಿದೆ. ಕಳೆದ 9 ತಿಂಗಳಿಂದ ಅನುದಾನ ಬಿಡುಗಡೆಯಾಗದ ಕಾರಣ ಸಾವಿರಾರು ಅರ್ಹ ಫಲಾನುಭವಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಕ್ಕಳನ್ನು ಕುಟುಂಬ ವ್ಯವಸ್ಥೆಯಲ್ಲಿ ಬೆಳೆಸುವುದು, ಬಾಲಕಾರ್ವಿುಕ ಪದ್ಧತಿ ತಡೆಯುವುದು, ಶಾಲೆ ಬಿಟ್ಟ ಮಕ್ಕಳು ಶಿಕ್ಷಣ ಮುಂದುವರಿಕೆಗೆ ಪ್ರೋತ್ಸಾಹ, ಆರೋಗ್ಯ ರಕ್ಷಣೆ, ಭಿಕ್ಷಾಟನೆಯಲ್ಲಿ ತೊಡಗಿದ, ನಿಂದನೆ, ತುಳಿತಕ್ಕೆ ಒಳಗಾದ ಮಕ್ಕಳ ಭವಿಷ್ಯಕ್ಕೆ ಆಸರೆಯಾಗುವುದು ‘ಪ್ರಾಯೋಜಕತ್ವ’ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಕೋವಿಡ್ನಿಂದಾಗಿ ಏಕ ಪಾಲಕರನ್ನು ಕಳೆದುಕೊಂಡ ಮಕ್ಕಳೊಂದಿಗೆ ವಿಮುಕ್ತ ದೇವದಾಸಿಯರ ಮಕ್ಕಳು, ಸೆರೆಮನೆ ಸೇರಿದ ಪಾಲಕರ ಮಕ್ಕಳು, ಬಾಲಮಂದಿರದ ಬಾಲಕರು ಈ ಯೋಜನೆಯ ಲಾಭ ಪಡೆಯಲು ಅರ್ಹರಾಗಿದ್ದಾರೆ. ಆದರೆ, ಸರ್ಕಾರ ಸಕಾಲಕ್ಕೆ ಅನುದಾನ ಬಿಡುಗಡೆಗೊಳಿಸದ ಕಾರಣ ಮಕ್ಕಳ ಭವಿಷ್ಯ ಮಂಕಾಗುವಂತಾಗಿದೆ. ಗರಿಷ್ಠ ಮೂರು ವರ್ಷ ಇಲ್ಲವೇ 18 ವರ್ಷ ತುಂಬುವವರೆಗೆ ಮಕ್ಕಳು ‘ಪ್ರಾಯೋಜಕತ್ವ’ ಯೋಜನೆಯ ಲಾಭ ಪಡೆಯಬಹುದಾಗಿದೆ. 9 ತಿಂಗಳಿಂದ ದೊರೆಯದ ಅನುದಾನ 2012ರಲ್ಲಿ ಯೋಜನೆ ಆರಂಭವಾಗಿದ್ದು, ಆರಂಭದಲ್ಲಿ ಮಾಸಿಕ ತಲಾ ಒಂದು ಸಾವಿರ ರೂ. ಸಹಾಯಧನ ನೀಡಲಾಗುತ್ತಿತ್ತು. ಪ್ರಸ್ತುತ ಮೊತ್ತವನ್ನು ನಾಲ್ಕು ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ.
ಕೇಂದ್ರ ಸರ್ಕಾರದ ಮಿಷನ್ ವಾತ್ಸಲ್ಯ ಯೋಜನೆಯಡಿ ಕಾರ್ಯಕ್ರಮ ಜಾರಿಗೊಳಿಸಿದ್ದು, ಶೇ.60 ಕೇಂದ್ರ ಹಾಗೂ ಶೇ.40 ಅನುದಾನ ರಾಜ್ಯ ಸರ್ಕಾರ ಭರಿಸುತ್ತಿದೆ. ಕೋವಿಡ್ನಿಂದಾಗಿ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳಿಗೆ ಪಿಎಂ ಕೇರ್ಸ್ ಮೂಲಕ ನೆರವು ಕಲ್ಪಿಸಿದರೆ ಏಕ ಪಾಲಕರನ್ನು ಕಳೆದುಕೊಂಡವರನ್ನು ‘ಪ್ರಾಯೋಜಕತ್ವ’ ಯೋಜನೆಗೆ ಒಳಪಡಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಕ್ಕಳ ರಕ್ಷಣಾ ಘಟಕದ ಮೂಲಕ ಯೋಜನೆ ಅನುಷ್ಠಾನಗೊಳಿಸುತ್ತಿದ್ದು, ಫಲಾನುಭವಿಗಳ ಆಯ್ಕೆಗೆ ಸಮಿತಿ ರಚಿಸಲಾಗಿದೆ. ಕೇಂದ್ರ ಸರ್ಕಾರದ ಪಾಲು ಬಿಡುಗಡೆಯಾಗದ ಕಾರಣ ರಾಜ್ಯ ಸರ್ಕಾರವೂ ಅನುದಾನ ಒದಗಿಸಿಲ್ಲ.
ಅನಾಥರು, ಕೋವಿಡ್ನಿಂದಾಗಿ ಪಾಲಕರನ್ನು ಕಳೆದುಕೊಂಡವರು ಮತ್ತು ಸಾಮಾಜಿಕ ಸಂಘರ್ಷಕ್ಕೆ ಒಳಗಾದ ಮಕ್ಕಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿವೆ. ‘ಪ್ರಾಯೋಜಕತ್ವ’ ಯೋಜನೆಯ ಬಾಕಿ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು.
| ಬಸವರಾಜ ಶೀಲವಂತರ ಸಾಮಾಜಿಕ ಕಾರ್ಯಕರ್ತ
ರಾಜ್ಯದಲ್ಲಿದ್ದಾರೆ 8,768 ಫಲಾನುಭವಿಗಳು
ಒಂದು ಸಾವಿರ ರೂ. ನೀಡುತ್ತಿದ್ದಾಗ ಅರ್ಜಿ ಸಲ್ಲಿಸಿದ ಎಲ್ಲರನ್ನೂ ಪರಿಗಣಿಸಲಾಗುತ್ತಿತ್ತು. ಸಹಾಯಧನ ಮೊತ್ತ ನಾಲ್ಕು ಸಾವಿರ ರೂ.ಗೆ ಹೆಚ್ಚಿಸಿದ ಬಳಿಕ ಫಲಾನುಭವಿಗಳ ಆಯ್ಕೆಗೆ ಸಮಿತಿ ರಚಿಸಲಾಗಿದೆ. ಅರ್ಜಿದಾರರ ಸ್ಥಿತಿಗತಿ ನೋಡಿ ಅನುದಾನ ಬಿಡುಗಡೆ ಮಾಡುವಂತೆ ಫರ್ವನು ಹೊರಡಿಸಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಒಂಬತ್ತು ತಿಂಗಳು ಕಳೆದಿದ್ದು, ಈವರೆಗೆ ಅನುದಾನ ಬಿಡುಗಡೆಯಾಗಿಲ್ಲ. ರಾಜ್ಯದಲ್ಲಿ 8,768 ಫಲಾನುಭವಿಗಳಿದ್ದು, ನಿತ್ಯ ಕಚೇರಿ ಅಲೆಯುವಂತಾಗಿದೆ.
‘ಪ್ರಾಯೋಜಕತ್ವ’ ಯೋಜನೆಗೆ ಆಯ್ಕೆಯಾದವರ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ರಾಜ್ಯದ ಪಾಲಿನ ಅನುದಾನ ಬಿಡುಗಡೆ ಕೋರಿ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಶೀಘ್ರ ಅನುದಾನ ಬಿಡುಗಡೆ ಮಾಡುವ ವಿಶ್ವಾಸ ಇದೆ.
| ತಿಪ್ಪಣ್ಣ ಸಿರಸಗಿ ಕೊಪ್ಪಳದ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ