ಚೆನ್ನೈ: ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಸುವವರಿಗೆ ಅಮಲಾ ಶಾಜಿ ಬಗ್ಗೆ ಹೆಚ್ಚಾಗಿ ಹೇಳಬೇಕಿಲ್ಲ. ಇನ್ಸ್ಟಾಗ್ರಾಂ ಮತ್ತು ಫೇಸ್ಬುಕ್ ರೀಲ್ಸ್ನಲ್ಲಿ ಹಾಗೂ ಯೂಟ್ಯೂಬ್ ಶಾರ್ಟ್ನಲ್ಲಿ ಅಮಲಾ ಹಾವಳಿ ಜೋರಾಗಿಯೇ ಇರುತ್ತದೆ. ಇನ್ಸ್ಟಾಗ್ರಾಂನಲ್ಲಿ ಬರೋಬ್ಬರಿ 4 ಮಿಲಿಯನ್ಗೂ ಅಧಿಕ ಫಾಲೋವರ್ಸ್ ಹೊಂದಿರುವ ಅಮಲಾ, ಕೇವಲ ರೀಲ್ಸ್ನಿಂದ ಮಾತ್ರವಲ್ಲ ಸಿನಿಮಾ ಪ್ರಚಾರಗಳನ್ನು ಮಾಡುವ ಮೂಲಕ ಹಣ ಸಂಪಾದನೆ ಮಾಡುತ್ತಾರೆ.
ಕೇರಳದ ತ್ರಿವೆಂಡ್ರಮ್ ಮೂಲದ ಅಮಲಾ ಅವರು ಅನೇಕ ಬಾರಿ ಸಿನಿಮಾ ವೇದಿಕೆಗಳಲ್ಲೂ ಕಾಣಿಸಿಕೊಂಡಿದ್ದಾರೆ. ಜಾಲತಾಣದಲ್ಲಿ ಆಕೆಯ ಖ್ಯಾತಿ ಸೆಲೆಬ್ರಿಟಿ ಪಟ್ಟವನ್ನು ತಂದುಕೊಟ್ಟಿದೆ. ಆದರೆ, ಇದೀಗ ಅವರ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವವರು ಹಣ ಪಡೆದು ಪ್ರಮೋಷನ್ ಮಾಡುತ್ತಿರುವುದು ನಿಮಗೆಲ್ಲರಿಗೂ ಗೊತ್ತಿರಬಹುದು. ಆಹಾರ, ಬಟ್ಟೆ, ಸಿನಿಮಾ ಹಾಗೂ ಕಂಪನಿ ಪ್ರಾಡಕ್ಟ್ ಸೇರಿದಂತೆ ಸಾಕಷ್ಟು ಪ್ರಮೋಷನ್ಗಳನ್ನು ಮಾಡುತ್ತಿರುತ್ತಾರೆ. ಕೆಲವರು ಹಣ ಹೂಡಿಕೆ ಮಾಡಿದರೆ ಡಬಲ್ ಆದಾಯ ತೆಗೆಯಬಹುದು ಅಂತಾನೂ ಪ್ರಚಾರ ಮಾಡುತ್ತಾರೆ.
ಇದೇ ರೀತಿ ಅಮಲಾ ಶಾಜಿ ಅವರ ಪ್ರಮೋಷನ್ ನೋಡಿ ಹಣ ಹೂಡಿಕೆ ಮಾಡಿ, ಹಣ ಕಳೆದುಕೊಂಡ ಯುವಕನೊಬ್ಬ ಇದೀಗ ಅಮಲಾ ವಿರುದ್ಧ ಕಿಡಿಕಾರಿದ್ದಾರೆ. ಸಂತ್ರಸ್ತನು ಐಟಿ ಉದ್ಯೋಗಿಯಾಗಿದ್ದು, ಅಮಲಾ ವಿರುದ್ಧ ದೂರು ದಾಖಲಿಸಿದ್ದಾರೆ. ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿರುವ ಸಂತ್ರಸ್ತ, ಸಣ್ಣ ಮೊತ್ತದ ಹಣ ಹೂಡಿಕೆ ಮಾಡಿದರೆ ಒಂದೇ ಗಂಟೆಯಲ್ಲಿ ಹೂಡಿಕೆ ಮಾಡಿದ ಹಣಕ್ಕಿಂತ ಮೂರು ಪಟ್ಟ ಹೆಚ್ಚು ಗಳಿಸಬಹುದು ಎಂದು ಅಮಲಾ ಅವರು ಪ್ರಮೋಷನ್ ನೀಡಿದ್ದರು. ಅದನ್ನು ನಂಬಿ ಹೂಡಿಕೆ ಮಾಡಿ ಹಣ ಕಳೆದುಕೊಂಡೆ ಎಂದು ಆರೋಪ ಮಾಡಿದ್ದಾನೆ.
ಒಂದು ಗಂಟೆಯಲ್ಲಿ 15 ಸಾವಿರ ಕೊಟ್ಟರೆ 55 ಸಾವಿರ ಸಿಗುತ್ತದೆ ಎಂಬ ಪ್ರಮೋಷನ್ ವಿಡಿಯೋ ನಂಬಿ ಹಣ ಐಟಿ ಉದ್ಯೋಗಿ ಹಣ ಹೂಡಿದ್ದ. ವಕೀಲ ವಿಘ್ನೇಶ್ ಮುತ್ತುಕುಮಾರ್ ಎಂಬುವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಸಂತ್ರಸ್ತನ ಹೇಳಿಕೆಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಆದರೆ, ಸಂತ್ರಸ್ತ ಮುಖವನ್ನು ಬ್ಲರ್ ಮಾಡಲಾಗಿದೆ.
ಹಣ ಪಡೆದ ಅಮಲಾ ಶಾಜಿ ಯಾವುದೇ ಪ್ರತಿಕ್ರಿಯೆ ನೀಡದೆ ತಾಂತ್ರಿಕ ದೋಷ ಎಂಬ ಸಬೂಬು ನೀಡಿ ಹಣ ದೋಚಲು ಯತ್ನಿಸಿದ್ದಾರೆ ಎಂದು ಸಂತ್ರಸ್ತ ಅಳಲು ತೋಡಿಕೊಂಡಿದ್ದಾನೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಅಮಲಾ ಶಾಜಿಯನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್‌ಸ್ಟಾಗ್ರಾಮ್‌ನ ಹಲವು ನಟಿಯರು ಈ ಸೋಪ್ ಖರೀದಿಸಿ, ಈ ಕ್ರೀಮ್ ಖರೀದಿಸಿ ಅಂತ ಜಾಹೀರಾತು ಹಗರಣಗಳಲ್ಲಿ ಮುಳುಗಿದ್ದರೆ, ಅಮಲಾ ಕೂಡ ಹಣದ ಹಗರಣದಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಅವರು ವಿವರಣೆ ನೀಡುವರೇ? ಅಥವಾ ತನಿಖೆಯಲ್ಲಿ ಏನು ಹೊರಬೀಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇದೇ ಅಮಲಾ ಶಾಜಿ ಈ ಹಿಂದೆ ತಮಿಳು ನಿರ್ದೇಶಕನ ಬಳಿ 30 ನಿಮಿಷದ ಸಿನಿಮಾ ಪ್ರಚಾರದ ವಿಡಿಯೋಗೆ 2 ಲಕ್ಷ ರೂ. ಕೇಳಿ ಕೆಂಗಣ್ಣಿಗೆ ಗುರಿಯಾಗಿದ್ದರು. ಸಾಮಾಜಿಕ ಜಾಲತಾಣದಲ್ಲೂ ಈ ವಿಚಾರ ಬಹಳಷ್ಟು ಚರ್ಚೆಯಾಗಿತ್ತು. (ಏಜೆನ್ಸೀಸ್)
30 ಸೆಕೆಂಡ್ ಸಿನಿಮಾ ಪ್ರಚಾರಕ್ಕೆ ರೀಲ್ಸ್ ಸ್ಟಾರ್ ಅಮಲಾ ಕೇಳಿದ ಸಂಭಾವನೆ ಕೇಳಿ ಶಾಕ್ ಆದ ನಿರ್ದೇಶಕ!