ಸಿದ್ದಗಂಗಾ ಶ್ರೀಗಳ ಪುತ್ಥಳಿ ಕಾಮಗಾರಿಗಿಲ್ಲ ಅನುದಾನ, ಆಸಕ್ತಿ

30 RMN-MGD P2
Published on

* ಶಿವಕುಮಾರ ಶ್ರೀಗಳ ಜನ್ಮಸ್ಥಳ ವೀರಾಪುರದಲ್ಲಿ ಅಭಿವೃದ್ಧಿ ಮರೀಚಿಕೆ

* ಸರ್ಕಾರ, ಜನಪ್ರತಿನಿಧಿಗಳ ಹುಸಿ ಭರವಸೆ, ಭಕ್ತರ ಆರೋಪ

ಎಂ.ಎಸ್.ಸಿದ್ದಲಿಂಗೇಶ್ವರ ಮಾಗಡಿ

ತ್ರಿವಿಧ ದಾಸೋಹಿ, ಕರ್ನಾಟಕ ರತ್ನ, ನಡೆದಾಡುವ ದೇವರು ಎಂದು ಜನರ ಮನಸ್ಸಿನಲ್ಲಿ ಉಳಿದಿರುವ ಸಿದ್ಧಗಂಗಾ ಮಠದ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾಗಿ 5 ವರ್ಷ ಸಂದರೂ ಅವರ ಪ್ರತಿಮೆ ನಿರ್ಮಾಣ ಕಾಮಗಾರಿ ವಿಳಂಬವಾಗುತ್ತಿದೆ ಎಂಬುದು ಸಹಸ್ರಾರು ಭಕ್ತರ ಆರೋಪವಾಗಿದೆ.

ಶಿವಕುಮಾರ ಶ್ರೀಗಳ ಜನ್ಮಸ್ಥಳ ಮಾಗಡಿ ತಾಲೂಕಿನ ವೀರಾಪುರದಲ್ಲಿ ಶ್ರೀಗಳ 111 ಅಡಿ ಎತ್ತರದ ಪುತ್ಥಳಿ ಹಾಗೂ ಗ್ರಾಮದ ಅಭಿವೃದ್ಧಿಗೆ ಹಿಂದಿನ ಕಾಂಗ್ರೆಸ್-ಜೆಡಿಎಸ್ ಸಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ 25 ಕೋಟಿ ರೂ. ಅನುದಾನ ಬಜೆಟ್‌ನಲ್ಲಿ ಘೋಷಿಸಿದ್ದರು.

ನಂತರ 2019ರ ನ. 8 ರಂದು ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಪುತ್ಥಳಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ, 2 ವರ್ಷದಲ್ಲಿ ಪ್ರತಿಮೆ ಲೋಕಾರ್ಪಣೆ ಮಾಡಲು 80 ಕೋಟಿ ರೂ. ಅನುದಾನ ನೀಡುವ ಭರವಸೆ ನೀಡಿದ್ದರು. ಆದರೆ, ಸರ್ಕಾರದಿಂದ -್ಝಠಿ;12.50 ಕೋಟಿ ರೂ. ಮಾತ್ರ ಅನುದಾನ ಬಿಡುಗಡೆ ಮಾಡಲಾಯಿತು. ಈ ಅನುದಾನದಿಂದ ಶ್ರೀಗಳ ಪುತ್ಥಳಿ ಕಾಮಗಾರಿ ಕುಂಟುತ್ತಾ ಸಾಗಿತ್ತಾದರೂ, ಈಗ ಕಾಮಗಾರಿಯ ಒಟ್ಟು ಮೊತ್ತ 100 ಕೋಟಿ ರೂ.ಗೆ ಮೀರಿದೆ.

ಸರ್ಕಾರ, ಜನಪ್ರತಿನಿಧಿಗಳಲ್ಲಿ ಇಲ್ಲದ ಆಸಕ್ತಿ 

ಶ್ರೀಗಳು ಲಿಂಗೈಕೈರಾಗಿ 5 ವರ್ಷ ಕಳೆದರೂ ಸರ್ಕಾರವಾಗಲಿ, ಸ್ಥಳೀಯ ಚುನಾಯಿತ ಪ್ರತಿನಿಧಿಗಳಾಗಲಿ ಶ್ರೀಗಳ ಪುತ್ಥಳಿ ಕಾಮಗಾರಿ ಪೂರ್ಣಗೊಳಿಸಲು ಆಸಕ್ತಿ ತೋರಿಸದೆ ಭಕ್ತರಲ್ಲಿ ಬೇಸರ ಮೂಡಿಸಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಪ್ರತಿಮೆ ನಿರ್ಮಾಣಕ್ಕೆ ಮಹತ್ವ ನೀಡಿರಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗದ್ದುಗೆಗೆ ಏರಿದ ಬಳಿಕ ಸಂಸದರು, ಶಾಸಕರನ್ನು ಹೊರತುಪಡಿಸಿದರೆ ಬೇರೆ ಯಾವ ಸಚಿವರಾಗಲಿ, ಶಾಸಕರಾಗಲಿ ಇತ್ತ ಕಣ್ಣು ಹಾಯಿಸಿಲ್ಲ. ಹಾಗೂ ಮುಂದುವರಿದ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡದೇ ಕಾಮಗಾರಿಗೆ ತಂದಿಟ್ಟ ಕಬ್ಬಿಣ ತುಕ್ಕು ಹಿಡಿಯುವಂತಾಗಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.

ಅನುದಾನಕ್ಕೆ ಸಿಎಂಗೆ ಮನವಿ

ಇತ್ತೀಚೆಗೆ ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ಎಚ್.ಸಿ. ಬಾಲಕೃಷ್ಣ ವೀರಾಪುರ ಗ್ರಾಮ ಹಾಗೂ ಪ್ರತಿಮೆ ನಿರ್ಮಾಣದ ಸ್ಥಳಕ್ಕೆ ಭೇಟಿ ನೀಡಿ, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಅಲ್ಲದೇ ಶ್ರೀಗಳ ಪುತ್ಥಳಿ ಕಾಮಗಾರಿಗೆ ಬೇಕಾದ ಅನುದಾನ ಮಂಜೂರು ಮಾಡಲು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಮಗಾರಿಗೆ ಬೇಕಾದ ಸಂಪೂರ್ಣ ಅನುದಾನವನ್ನು ಬಿಡುಗಡೆ ಮಾಡುವ ಭರವಸೆ ನೀಡಿದ್ದರಾದರೂ ಕಾಮಗಾರಿ ಮಾತ್ರ ಕುಂಟುತ್ತಾ ಸಾಗಿದೆ.

ವೀರಾಪುರ ರಸ್ತೆ ಅಭಿವೃದ್ಧಿ ನನೆಗುದಿಗೆ

ಸಿದ್ದಗಂಗಾ ಶ್ರೀಗಳ ಪ್ರತಿಮೆ ಕಾಮಗಾರಿ 20 ಅಡಿ ಕಟ್ಟಡದ ಮೇಲೆ 70 ಅಡಿ ಎತ್ತರ ಪ್ರತಿಮೆ ನಿರ್ಮಿಸಲಾಗುತ್ತಿದೆ. ಆದರೆ, ಅರಸನಕುಂಟೆಯಿಂದ ವೀರಾಪುರ ಗ್ರಾಮದ 3 ಕಿಮೀ ಉದ್ದದ ರಸ್ತೆ ಸಂಪೂರ್ಣ ಕಿತ್ತುಹೊಗಿದ್ದು, ರಸ್ತೆ ದುರಸ್ತಿಪಡಿಸಲು ಯಾವ ಜನಪ್ರತಿನಿಧಿಗಳಾಗಲಿ, ಲೋಕೋಪಯೋಗಿ ಇಲಾಖೆಯಾಗಲಿ ಮುಂದಾಗಿಲ್ಲ. ಕೆಆರ್‌ಐಡಿಎಲ್‌ನಿಂದ ಗ್ರಾಮವನ್ನು ದತ್ತು ಪಡೆದು ಸಮುದಾಯ ಭವನ ನಿರ್ಮಾಣಕ್ಕೆ ಅಡಿಪಾಯ ಹಾಕಿ ಬಿಡಲಾಗಿದೆ. ಆದರೆ, ಈ ಕಾಮಗಾರಿಯು ಪೂರ್ಣಗೊಳ್ಳದೇ ನಿಂತಲ್ಲೆ ನಿಂತಿದೆ. ಪೂರ್ಣಗೊಳಿಸುವ ಚಿಂತನೆ ಯಾರಿಗೂ ಇಲ್ಲದಂತಾಗಿದೆ ಎಂಬುದು ಭಕ್ತರ ಆರೋಪವಾಗಿದೆ.

ಕಾಮಗಾರಿಗೆ ಬೇಕಾದ ಸಹಕಾರ ನೀಡಲು ಸರ್ಕಾರ ಬದ್ದವಾಗಿದೆ. 2 ವರ್ಷದ ಒಳಗೆ ಕಾಮಗಾರಿ ಪೂರ್ಣಗೊಳಿಸಿ ಸಿಎಂ ಸಿದ್ದರಾಮಯ್ಯ ಅವರಿಂದಲೇ ಉದ್ಘಾಟಿಸಲಾಗುವುದು. ಈಗಾಗಲೆ ಸಂಸದರ ಜತೆಗೆ ನಾನು ಕೂಡ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪ್ರಗತಿ ಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗಿದೆ. ಲೋಕಸಭಾ ಚುನಾವಣೆ ಬಳಿಕ ಶ್ರೀಗಳ ಪುತ್ಥಳಿ ಕಾಮಗಾರಿಗೆ ವೇಗ ನೀಡಲಾಗುವುದು.

ಎಚ್.ಸಿ.ಬಾಲಕೃಷ್ಣ

ಮಾಗಡಿ ಶಾಸಕ

ವೀರಾಪುರ ಗ್ರಾಮವನ್ನು ಸರ್ವತೋಮುಖ ಅಭಿವೃದ್ಧಿ ಮಾಡುವಂತೆ ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಬಳಿ ವೀರಶೈವ ಸಮುದಾಯ ಮನವಿ ಮಾಡಿತ್ತು. ಅದರಂತೆ ಸಂಸದರು, ಶಾಸಕರು ಸ್ಪಂದಿಸಿ ಕಾಮಗಾರಿ ವೇಗಕ್ಕೆ ಶೀಘ್ರವೇ ಚಾಲನೆ ನೀಡಲಿದ್ದಾರೆ.

ಹೊನ್ನಾಪುರ ಶಿವಪ್ರಸಾದ್, ವೀರಶೈವ ಮುಖಂಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net