ದೇವಸ್ಥಾನಗಳ ಮೇಲೆ ಸರ್ಕಾರದ ಹಸ್ತಕ್ಷೇಪ ಬೇಡ; ಮಂದಿರ ಅಧಿವೇಶನದಲ್ಲಿ ಒಕ್ಕೊರಲ ಆಗ್ರಹ

mandira
Published on

ಬೆಂಗಳೂರು : ಸಮಾಜದ ವ್ಯವಸ್ಥೆಯಲ್ಲಿ ಜನ ಧರ್ಮವನ್ನು ಆಧಾರವಾಗಿಟ್ಟುಕೊಂಡು ಜೀವನ ನಡೆಸಿದರೆ ಸರ್ವಾಂಗೀಣ ಉನ್ನತಿ ಸಾಧ್ಯ. ಆದ್ದರಿಂದ ಧರ್ಮಕ್ಷೇತ್ರಗಳಾದ ದೇವಾಲಯಗಳು ಸರ್ಕಾರದ ಹಸ್ತಕ್ಷೇಪದಿಂದ ಮುಕ್ತವಾಗಬೇಕೆಂದು ಕೂಡ್ಲಿ ಶೃಂಗೇರಿ ಮಠದ ಶ್ರೀಅಭಿನವ ಶಂಕರ ಭಾರತೀ ಸ್ವಾಮೀಜಿ ಹೇಳಿದ್ದಾರೆ. ದೇವಸ್ಥಾನ ಸಂಸ್ಕೃತಿಯ ರಕ್ಷಣೆಗಾಗಿ ಕರ್ನಾಟಕ ಮಂದಿರ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಜಂಟಿ ಆಶ್ರಯದಲ್ಲಿ ಬಸವೇಶ್ವರನಗರದ ಗಂಗಮ್ಮ ತಿಮ್ಮಯ್ಯ ಕನ್ವೆನ್‌ಷನ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನದ ಎರಡನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು. ಸ್ಕಂದೇಶ್ವರ ಕ್ಷೇತ್ರದ ಶ್ರೀ ಸಿಧ್ಧಲಿಂಗ ಸ್ವಾಮಿಜಿ ಮಾತನಾಡಿ, ಸಂಸ್ಕೃತಿಯನ್ನು ಬೆಳೆಸುವ ಕಾರ್ಯ ದೇವಸ್ಥಾನ ಮಾಡಬಲ್ಲದು. ವೇದ ಪಾರಾಯಣ , ಸಾಮೂಹಿಕ ಪೂಜೆ, ಯಜ್ಞ ಇತ್ಯಾದಿಗಳ ಮೂಲಕ ದೇವಸ್ಥಾನ ಮತ್ತು ಮಠಗಳಲ್ಲಿ ಜಾಗೃತಿ ಕಾರ್ಯ ನಡೆಯುತ್ತದೆ. ಧರ್ಮದಿಂದಲೇ ವಿಶ್ವದ ಶಾಂತಿ, ಮಾನವ ಧರ್ಮದ ಮೌಲ್ಯವನ್ನು ಎತ್ತಿಹಿಡಿದಾಗ ವಿಶ್ವಕಲ್ಯಾಣ ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಸನಾತನ ಪಂಚಾಂಗ ಆ್ಯಂಡ್ರಾಯ್ಡ್ ಆ್ಯಪ್ 2025 ಹಾಗೂ ‘ಆಯುರ್ವೇದ ಪಾಲಿಸಿ ಔಷಧಿಗಳಿಲ್ಲದೇ ಆರೋಗ್ಯವಂತರಾಗಿ’ ಈ-ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಅಧಿವೇಶನದಲ್ಲಿ ಕೈಗೊಂಡ 10 ನಿರ್ಣಯಗಳನ್ನು ಮುಜರಾಯಿ ಇಲಾಖೆಗೆ ಸಲ್ಲಿಸಲಾಯಿತು. ಅಧಿವೇಶನದಲ್ಲಿ ಹರಿಹರಪುರದ ಶಾರದಾ ಲಕ್ಷ್ಮೀನರಸಿಂಹ ಪೀಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೇದಬ್ರಹ್ಮ ಶ್ರೀಇಂದ್ರಾಚಾರ್ಯ, ವಿಜಯವಾಣಿ ಸಹಾಯಕ ಸಂಪಾದಕ ರವೀಂದ್ರ ದೇಶಮುಖ, ಹಿಂದು ಜನಜಾಗೃತಿ ಸಮಿತಿಯ ಮೋಹನ ಗೌಡ ಮತ್ತಿತರರು ಉಪಸ್ಥಿತರಿದ್ದರು.

"ದೇವಸ್ಥಾನಗಳ ಜಮೀನು ವಕ್ಫ್ ಬೋರ್ಡ್‌ನ ವಶವಾಗುತ್ತಿವೆ. ಕೇವಲ ಒಂದು ನೋಟಿಸ್ ಮೂಲಕ ಭೂಮಿ ವಶಪಡಿಸಿಕೊಳ್ಳುವ ರಾಕ್ಷಸಿ ಕಾನೂನು ಇದಾಗಿದ್ದು, ರಾಜ್ಯದ ಸುಮಾರು 25 ಸಾವಿರ ಎಕರೆ ಭೂಮಿಯ ಮೇಲೆ ವಕ್ಫ್ ದಾವೆ ಹೂಡಿದೆ. ಭಾರತದಲ್ಲಿ 9.5 ಲಕ್ಷ ಎಕರೆ ಜಮೀನು ವಕ್ಫ್ ಬೋರ್ಡ್ ಸ್ವಾಧೀನದಲ್ಲಿದೆ. ದೇವಸ್ಥಾನಕ್ಕೆ ಸಂಬಂಧಿಸಿದ ಕಾಗದಪತ್ರಗಳನ್ನು ನವೀಕರಿಸಿ ವಕ್ಫ್ ಸಂಕಟದಿಂದ ಮುಕ್ತಗೊಳಿಸಬೇಕು."  -ಸುನೀಲ್ ಘನವಟ್, ಮಂದಿರ ಮಹಾಸಂಘದ ಮುಖಂಡ

ಅಧಿವೇಶನದಲ್ಲಿ ಕೈಗೊಳ್ಳಲಾದ 10 ನಿರ್ಣಯಗಳು

*ರಾಜ್ಯದ ಐತಿಹಾಸಿಕ ಮತ್ತು ಪುರಾತನ ದೇವಾಲಯಗಳ ಜೀರ್ಣೋದ್ಧಾರಕ್ಕೆ ಅಗತ್ಯ ಅನುದಾನ ನೀಡುವುದು*ಹಿಂದೂ ದೇವಲಯಗಳಲ್ಲಿ ಸಂಗ್ರಹವಾಗುವ ಹಣವನ್ನು ಹಿಂದು ಧಾರ್ಮಿಕ ಉದ್ದೇಶಕ್ಕೆ ಮಾತ್ರ ಉಪಯೋಗಿಸುವುದು*ಧಾರ್ಮಿಕ ದತ್ತಿ ಇಲಾಖೆಯಿಂದ ಹಿಂದು ಧರ್ಮ ಶಿಕ್ಷಣ ನೀಡಲು ಕ್ರಮಕೈಗೊಳ್ಳಬೇಕು. *ಪ್ರಮುಖ ಧಾರ್ಮಿಕ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಆಗುತ್ತಿರುವ ಅನ್ಯಮತೀಯರ ಅತಿಕ್ರಮಣವನ್ನು ನಿಯಂತ್ರಿಸಬೇಕು.*ಧಾರ್ಮಿಕ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮಧ್ಯ, ಮಾಂಸ ಮಾರಾಟವನ್ನು ನಿಷೇಧಿಸಬೇಕು. *ನ್ಯಾಯಾಲಯಗಳ ತೀರ್ಪಿನ ಅನ್ವಯ ಖಾಸಗಿ ದೇವಾಲಯಗಳನ್ನು ಸರ್ಕಾರ ಮರಳಿ ಹಿಂದಿರುಗಿಸಬೇಕು. *ಸಿ ಗ್ರೇಡ್ ದೇವಾಲಯಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಗೊಳಿಸಲು ಸರಳ ನಿಯಮ ರೂಪಿಸಬೇಕು. * ಧಾರ್ಮಿಕ ಜಾತ್ರೆ, ಉತ್ಸವಗಳಲ್ಲಿ ಅನ್ಯಮತೀಯರ ವ್ಯಾಪಾರ-ವಹಿವಾಟು ನಿಷೇಧಿಸಬೇಕು. * ಕೆಲ ದೇವಾಲಯಗಳ ಪೂಜಾ-ಪದ್ಧತಿಗಳಿಗೆ ಅರಣ್ಯ ಇಲಾಖೆಯಿಂದ ಆಗುತ್ತಿರುವ ಅಡಚಣೆಯನ್ನು ನಿವಾರಿಸಬೇಕು. * ದೇವಾಲಯಗಳ ನಿರ್ವಹಣೆಗೆ ಪೂರಕವಾಗಿ ಸನಾತನ ಹಿಂದು ಬೋರ್ಡ್ ಸ್ಥಾಪಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net