ಪ್ರತಿಭಾ ಕಲಾನಿಕೇತನದಿಂದ ಪ್ರಚಂಡ ರಾವಣ ಪೌರಾಣಿಕ ನಾಟಕ ಪ್ರದರ್ಶನ

ravana
Published on

ಬೆಂಗಳೂರು: ಕನ್ನಡದ ಹಲವು ಮಹಾಕಾವ್ಯಗಳನ್ನು ಪೌರಾಣಿಕ ನಾಟಕದ ಮೂಲಕ ಜನಮನಕ್ಕೆ ಮುಟ್ಟಿಸಿದ ಕೀರ್ತಿ ಪ್ರತಿಭಾ ಕಲಾನಿಕೇತನದಂತಹ ಸಂಸ್ಥೆಗಳಿಗೆ ಸಲ್ಲುತ್ತದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜ ಮೂರ್ತಿ ಹೇಳಿದರು.

ಪ್ರತಿಭಾ ಕಲಾನಿಕೇತನ ಸಂಸ್ಥೆಯು ಇತ್ತೀಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಣಗಲ್ ಪ್ರಭಾಕರ ಶಾಸ್ತ್ರಿ ವಿರಚಿತ ಪ್ರಚಂಡ ರಾವಣ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಪೌರಾಣಿಕ ನಾಟಕ ಪ್ರದರ್ಶನಗಳು ಕಡಿಮೆಯಾಗಿವೆ. ಪೌರಾಣಿಕ ನಾಟಕ ಕಂಪನಿಗಳು ಕೂಡಾ ಮುಚ್ಚಿ ಹೋಗಿವೆ. ಇದರಿಂದ ಕಲಾವಿದರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿಂದಿನಿಂದಲೂ ಪೌರಾಣಿಕ ನಾಟಕದ ಮೂಲಕ ಗ್ರಾಮೀಣ ಕಲೆಗಳನ್ನು ಉಳಿಸುವಲ್ಲಿ ಪ್ರತಿಭಾ ಕಲಾನಿಕೇತನ ಸಂಸ್ಥೆ ಅಹರ್ನಿಶಿ ದುಡಿಯುತ್ತಿದೆ ಎಂದರು.

ಕರುನಾಡ ರಂಗಕಲಾವಿದರ ಒಕ್ಕೂಟದ ಅಧ್ಯಕ್ಷ ಜಗದೀಶ್ ಗೌಡ ಮಾತನಾಡಿ, ಪೌರಾಣಿಕ ನಾಟಕ ಪ್ರದರ್ಶನ ಮಾಡಲು ತಂಡವೊಂದಕ್ಕೆ ಕನಿಷ್ಠ ಎರಡು ಲಕ್ಷ ಹಣ ಬೇಕಾಗುತ್ತದೆ. ಆರ್ಥಿಕ ಸಹಕಾರ ಇಲ್ಲದೇ ರಂಗ ಕಲೆಗಳು ಸೊರಗುತ್ತಿವೆ ಎಂದರು.

ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ರಂಗಕರ್ಮಿಗಳನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ರಾವಣನ ಪಾತ್ರಧಾರಿ ಎಸ್.ಆರ್.ಚನ್ನಯ್ಯ, ರಂಗಕರ್ಮಿ ನಾರಾಯಣ್, ಸಂಸ್ಥೆಯ ಕಾರ್ಯದರ್ಶಿ ಪ್ರತಿಭಾ ನಾರಾಯಣ, ಬೆಂಗಳೂರು ರಂಗಕಲಾವಿದರ ವಿವಿದೋದ್ದೇಶ ಸಹಕಾರ ಸಂಘದ ನಿರ್ದೇಶಕ ಆರ್.ವೆಂಕಟರಾಜು ಮತ್ತಿತರರು ಉಪಸ್ಥಿತರಿದ್ದರು. ಸಭೆಯ ನಂತರ ಡಾ. ಕಲ್ಲೂರು ಶ್ರೀನಿವಾಸ ನಿರ್ದೇಶನದಲ್ಲಿ ಪ್ರಚಂಡ ರಾವಣ ನಾಟಕದ ಯಶಸ್ವಿ ಪ್ರದರ್ಶನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net