

ಪಡುಬಿದ್ರಿ: ಎರಡು ವರ್ಷದ ಅವಧಿಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಸಾವಿರಾರು ಕೋಟಿ ರೂ. ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಈವರೆಗೆ ಕೇವಲ 10.ಶೇಕಡದಷ್ಟು ಅನುದಾನ ಮಂಜೂರಾಗಿದೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ತಿಳಿಸಿದರು.
ಕ್ಷೇತ್ರದ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಉಡುಪಿ ಜಿಲ್ಲೆಯ ಐದು ಕ್ಷೇತ್ರದ ಶಾಸಕರು ಮುಖ್ಯಮಂತ್ರಿ ಸಹಿತ ಸರ್ಕಾರವನ್ನು ಒತ್ತಾಯಿಸಿದರೂ, ಬೇಡಿಕೆಗೆ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ ಎಂದು ಕಾಪುವಿನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
2024-25 ನೇ ಸಾಲಿನಲ್ಲಿ ಕಟಪಾಡಿ-ಶಿರ್ವ-ನಂದಿಕೂರು 5.40 ಕಿ.ಮೀ ವರೆಗೆ ಸಿಆರ್‌ಐಎಫ್ ಫಂಡ್‌ನಿಂದ 6 ಕೋಟಿ ರೂ. ಅನುದಾನ ಬಿಡುಗಡೆಯಾಗಿ ಕೆಲಸ ಪೂರ್ಣಗೊಂಡಿರುತ್ತದೆ. ಹಾಗೆಯೇ ಲೋಕೋಪಯೋಗಿ ಇಲಾಖೆಯ ಅಪೆಂಡಿಕ್ಸ್-ಇ ಅಡಿಯಲ್ಲಿ ರಾಜ್ಯ ಹೆದ್ದಾರಿ ರಸ್ತೆ ನವೀಕರಣ ಕಿ.ಮೀ 5.40 ರಿಂದ ಕಿ.ಮೀ 8.60 ರ ವರೆಗೆ ರಸ್ತೆ ನವೀಕರಣದಡಿಯಲ್ಲಿ 3 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಕಾಮಗಾರಿ ಪೂರ್ಣಗೊಂಡಿರುವುದಾಗಿ ತಿಳಿಸಿದರು.
ಮಳೆಯಿಂದ ಹಾನಿಯಾದ ರಸ್ತೆಗಳ ಅಭಿವೃದ್ದಿಗೆ ಪ.ಜಾತಿ ಸಮುದಾಯಗಳ ರಸ್ತೆಗಳ ಅಭಿವೃದ್ಧಿ, ನಗರೋತ್ಥಾನ ಯೋಜನೆಯಡಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ, ಲೋಕೋಪಯೋಗಿ ಇಲಾಖಾ ವ್ಯಾಪ್ತಿಯ ರಾಜ್ಯ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಸುಧಾರಣೆಗೆ ನದಿದಂಡೆ ಸಂರಕ್ಷಣಾ ರಚನೆಗೆ ಕಾಮಗಾರಿಗೆ ಪಶ್ಚಿಮ ವಾಹಿನಿ ಯೋಜನೆಯಡಿ ಕಿಂಡಿ ಅಣೆಕಟ್ಟುಗಳ ನಿರ್ಮಾಣ ಹಾಗೂ ಮೀನುಗಾರಿಕಾ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಪ್ರಸ್ತಾವನೆ ನೀಡಿದ್ದು, ಯಾವುದೇ ವಿಶೇಷ ಅನುದಾನ ನೀಡಿಲ್ಲವೆಂದು ಶಾಸಕರು ದೂರಿದರು.
ಕಾಪು ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಪಕ್ಷದ ಪ್ರಮುಖರಾದ ಗೋಪಾಲಕೃಷ್ಣ ರಾವ್, ನವೀನ್ ಎಸ್.ಕೆ.ಅನಿಲ್‌ಕುಮಾರ್, ಸೋನು ಪಾಂಗಾಳ ಉಪಸ್ಥಿತರಿದ್ದರು.