ಬೈಂದೂರಿನಲ್ಲಿ 800 ಹಕ್ಕುಪತ್ರ ವಿತರಣೆ

BYN
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಬೈಂದೂರು ವಿಧಾನಸಭಾ ಕ್ಷೇತ್ರದ ವಂಡ್ಸೆ ಹಾಗೂ ಬೈಂದೂರು ಹೋಬಳಿಯ ಅರ್ಹ ಫಲಾನುಭವಿಗಳ 94ಸಿ ಅರ್ಜಿ ವಿಲೇ ಮಾಡಲಾಗಿದೆ. ಎರಡು ವರ್ಷಗಳಲ್ಲಿ 800 ಹಕ್ಕು ಪತ್ರಗಳನ್ನು ವಿತರಿಸಲಾಗಿದೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.

ತಾಲೂಕು ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ವಂಡ್ಸೆ ಹೋಬಳಿಯ 94ಸಿ ಕಡತಗಳ ಬಗ್ಗೆ ಚರ್ಚೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಡೀಮ್ಡ್ ವ್ಯಾಪ್ತಿಯಲ್ಲಿ ವಂಡ್ಸೆ ಹೋಬಳಿಯ 460, ಬೈಂದೂರು ಹೋಬಳಿಯ 117 ಅರ್ಜಿಗಳು, ಕುಮ್ಕಿ ವ್ಯಾಪ್ತಿಯ ವಂಡ್ಸೆ ಹೋಬಳಿಯಲ್ಲಿ 936 ಹಾಗೂ ಬೈಂದೂರು ಹೋಬಳಿಯಲ್ಲಿ 248 ಅರ್ಜಿಗಳು ಸಲ್ಲಿಕೆಯಾಗಿವೆ. ಭಾಗಶಃ ಡೀಮ್ಡ್ ಫಾರೆಸ್ಟ್ ಅರ್ಜಿಗಳನ್ನು ಅರಣ್ಯ ಇಲಾಖೆಯ ಜಂಟಿ ಸರ್ವೇ ಮೂಲಕ ವಿಲೇವಾರಿ ಮಾಡುವ ಪ್ರಕ್ರಿಯೆಗೆ ವೇಗ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕುಮ್ಕಿ ವ್ಯಾಪ್ತಿಯಲ್ಲಿನ 94ಸಿ ಅರ್ಜಿಗಳ ವಿಲೇಗೆ ಕಾನೂನು ತೊಡಕು ಇರುವುದರಿಂದ ತಕ್ಷಣದ ಕ್ರಮ ಸಾಧ್ಯವಿಲ್ಲ ಎಂದರು.

ಕುಮ್ಕಿ ಭೂಮಿಯಲ್ಲಿ ಕನಿಷ್ಟ ಜಾಗದಲ್ಲಿ ಹಲವಾರು ವರ್ಷಗಳಿಂದ ವಾಸಿಸುತ್ತಿರುವ ಬಡವರಿಗೆ ವಿಶೇಷ ನೆಲೆಯಲ್ಲಿ ಮನೆ ಅಡಿ ಜಾಗಕ್ಕೆ ಸಂಬಂಧಿಸಿ ಹಕ್ಕುಪತ್ರ ಒದಗಿಸುವಂತೆ ಕಂದಾಯ ಸಚಿವರಿಗೆ ಈಗಾಗಲೇ ಮನವಿ ಮಾಡಲಾಗಿದ್ದು, ಮುಂದೆಯೂ ಸಚಿವರಿಗೆ ಒತ್ತಡ ಹಾಕಿ ಅಂತಹ ಅರ್ಜಿಗಳನ್ನು ಪುರಸ್ಕರಿಸಿ ಅರ್ಹರಿಗೆ ಹಕ್ಕು ಪತ್ರ ನೀಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಕುಂದಾಪುರ ತಹಸೀಲ್ದಾರ್ ಪ್ರದೀಪ್ ಕುರುಡೇಕರ್, ಉಪ ತಹಸೀಲ್ದಾರ ಪ್ರಕಾಶ್, ಕಂದಾಯ ನಿರೀಕ್ಷಕ ರಾಘವೇಂದ್ರ ಹಾಗೂ ವಂಡ್ಸೆ ಹೋಬಳಿಯ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.

ಬೈಂದೂರಿನಲ್ಲಿ ಮಂಡಲ ಕಾರ್ಯಾಗಾರ ಸಭೆ

ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಹಾಗೂ ಗಾಂಧಿಜಯಂತಿ ಆಚರಣೆ ನಿಮಿತ್ತ ಬಿಜೆಪಿ ಬೈಂದೂರು ಮಂಡಲದ ವತಿಯಿಂದ ಸೇವಾ ಪಾಕ್ಷಿಕ ಅಭಿಯಾನದ ಮಂಡಲ ಕಾರ್ಯಾಗಾರ ಸಭೆ ಉಪ್ಪುಂದ ಬಿಜೆಪಿ ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು. ಶಾಸಕ ಗುರುರಾಜ್ ಗಂಟಿಹೊಳೆ ಮಾರ್ಗದರ್ಶನ ನೀಡಿದರು. ಮಂಡಲ ಅಧ್ಯಕ್ಷೆ ಅನಿತಾ ಆರ್. ಕೆ, ಜಿಲ್ಲಾ ಕಾರ್ಯದರ್ಶಿ, ಸೇವಾ ಪಾಕ್ಷಿಕದ ಸಹ ಸಂಚಾಲಕ ಶ್ರೀಕಾಂತ್ ನಾಯಕ್, ಮಂಡಲ ಪ್ರಧಾನ ಕಾರ್ಯದರ್ಶಿ ಕರಣ್ ಪೂಜಾರಿ, ಗೋಪಾಲ ಪೂಜಾರಿ, ಶ್ರೀಗಣೇಶ್ ಗಾಣಿಗ, ಶಿಲ್ಪಾ ಶೆಟ್ಟಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net