ಮೃತದೇಹಗಳ ಹೆಸರಲ್ಲೂ ಭ್ರಷ್ಟಚಾರ ನಡೆಸಿದ ಬಿಜೆಪಿಗರನ್ನು ಯಾವ ದೇವರೂ ಕ್ಷಮಿಸಲ್ಲ: CM Siddaramaiah

CM Siddaramaiah d
Published on

ಬಳ್ಳಾರಿ: ಬಿಜೆಪಿ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಮತ್ತು ಆರೋಗ್ಯ ಮಂತ್ರಿ ಶ್ರೀರಾಮುಲು ಇಬ್ಬರೂ ಕೋವಿಡ್ ಸಂದರ್ಭದಲ್ಲಿ ಚೀನಾದಿಂದ ಪಿಪಿಇ ಕಿಟ್ ತರಿಸಿ ಭ್ರಷ್ಟಾಚಾರ ನಡೆಸಿದ್ದಾರೆ. ಇವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ನ್ಯಾ.ಮೈಕೆಲ್ ಕುನ್ಹಾ ತನಿಖಾ ಆಯೋಗ ಪತ್ತೆ ಹಚ್ಚಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ನುಡಿದರು.

ಸಂಡೂರು ವಿಧಾನಸಭಾ ಕ್ಷೇತ್ರದ ಮೆಟ್ರಿಕಿ ಗ್ರಾಮದಲ್ಲಿ ಶನಿವಾರ (ನ.09) ಬೃಹತ್ ಜನಸಮಾವೇಶವದಲ್ಲಿ ಮಾತನಾಡಿದರು.

ಕೋವಿಡ್ ಸಂದರ್ಭದಲ್ಲಿ ಇಡೀ ರಾಜ್ಯದ ಜನತೆ ಭಯ, ಆತಂಕದಲ್ಲಿ ದೇವರ ಪ್ರಾರ್ಥನೆ ಮಾಡುತ್ತಿದ್ದಾಗ ಬಿಜೆಪಿ ಸರ್ಕಾರ ಮತ್ತು ಸಚಿವ ಶ್ರೀರಾಮುಲು ಹಣ ಲೂಟಿ ಮಾಡುವುದರಲ್ಲಿ ಮುಳುಗಿದ್ದರು. ನಮ್ಮ ಜನರ ಮೃತದೇಹಗಳ ಹೆಸರಲ್ಲೂ ಭ್ರಷ್ಟಚಾರ ನಡೆಸಿದ ಬಿಜೆಪಿ ಯವರನ್ನು ಯಾವ ದೇವರೂ ಕ್ಷಮಿಸಲ್ಲ. ನೀವೂ ಕ್ಷಮಿಸಬೇಡಿ ಎಂದು ಜನರಿಗೆ ಕರೆ ನೀಡಿದರು.

ಬಿಜೆಪಿ ಶ್ರೀಮಂತರ ಮತ್ತು ಮೇಲ್ವರ್ಗದವರ ಪಕ್ಷ. ಕಾಂಗ್ರೆಸ್ ಜಾರಿ ಮಾಡುವ ಎಲ್ಲಾ ಬಡವರ ಪರವಾದ ಕಾರ್ಯಕ್ರಮಗಳನ್ನು ವಿರೋಧಿಸುತ್ತದೆ. ಅಪಪ್ರಚಾರ ಮಾಡುತ್ತದೆ. ಆಗ ಇಂದಿರಾಗಾಂಧಿಯವರ 20 ಅಂಶಗಳ ಕಾರ್ಯಕ್ರಮಗಳನ್ನು ಬಿಜೆಪಿ ವಿರೋಧಿಸಿ ಅಪಪ್ರಚಾರ ಮಾಡಿತ್ತು. ಈಗ ನಮ್ಮ‌ ಸರ್ಕಾರದ ಐದು ಗ್ಯಾರಂಟಿಗಳನ್ನು ವಿರೋಧಿಸಿ ಅಪಪ್ರಚಾರ ಮಾಡುತ್ತಿದೆ. ಇದೇ ಬಿಜೆಪಿಯ ಜಾಯಮಾನ ಎಂದು ಟೀಕಿಸಿದರು.

ಪಿಪಿಇ ಕಿಟ್ ತರಿಸಿ ಭ್ರಷ್ಟಾಚಾರ ನಡೆಸಿದ ಕುರಿತು ನ್ಯಾ.ಕುನ್ಹಾ ತನಿಖಾ ಆಯೋಗ ಪತ್ತೆ ಹಚ್ಚಿದೆ. ಹಿಂದೆ ಜನಾರ್ದನರೆಡ್ಡಿಯವರ ಟೀಮು ನಡೆಸಿದ್ದ ಭ್ರಷ್ಟಾಚಾರವನ್ನು ಲೋಕಾಯುಕ್ತ ಸಂತೋಷ್ ಹೆಗ್ಡೆ ಬಯಲಿಗೆ ಎಳೆದಿದ್ದರು. ಇವರು ಅಧಿಕಾರಕ್ಕೆ ಬರೋದೇ ಲೂಟಿ ಮಾಡೋದಕ್ಕೆ. ಆದ್ದರಿಂದ, ಸಂಡೂರಿನಲ್ಲಿ ಅನ್ನಪೂರ್ಣ ತುಕಾರಾಮ್ ಗೆಲ್ಲಿಸಿ ಅಭಿವೃದ್ಧಿಗೆ ನಿಮ್ಮ ಬೆಂಬಲ ನೀಡಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net