

ರಾಮನಗರ :ರಾಮನಗರ ತಾಲೂಕಿನ ಹರೀಸಂದ್ರ ಬಳಿ ಕಸ ಘಟಕ ನಿರ್ಮಾಣ ವಿರೋಧಿಸಿ ಕಸಬಾ ಹೋಬಳಿ ರೈತ ಮುಖಂಡರು, ವಿವಿಧ ಸಂಘಟನೆ, ಪಕ್ಷಗಳ ಮುಖಂಡರು, ಸಾರ್ವಜನಿಕರು ಭಾನುವಾರ ಹೋಬಳಿ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು
ಅರ್ಕಾವತಿ ನದಿ ಕಲುಷಿತಗೊಂಡರೇ ಪರಿಸರ ಹಾಳಾಗಿ ಸಾಂಕ್ರಾಮಿಕ ರೋಗ ಹರಡುತ್ತದೆ. ರೈತ ವ್ಯವಸಾಯ ಮರೆತು ಬದುಕಿನ ದಾರಿಯಲ್ಲಿ ನೂರೆಂಟು ಸಮಸ್ಯೆ ಎದುರಿಸಬೇಕು. ಕಷ್ಟದ ಜೀವನ ನಡೆಸಬೇಕಾದ ಸ್ಥಿತಿ ನಮಗೆ ಬರುವುದು ಬೇಡ. ಆದ್ದರಿಂದ ಹರೀಸಂದ್ರ ಬಳಿ ಕಸ ಘಟಕ ನಿರ್ಮಾಣ ಬೇಡವೇ ಬೇಡ ಎಂದು ಕಸಬಾ ಹೋಬಳಿ ರೈತ ಮುಖಂಡರು, ವಿವಿಧ ಸಂಘಟನೆ, ಪಕ್ಷಗಳ ಮುಖಂಡರು, ಸಾರ್ವಜನಿಕರು ಭಾನುವಾರ ಕಸಬಾ ಹೋಬಳಿ ಬಂದ್ ಮಾಡಲು ವಿರೋಧ ವ್ಯಕ್ತಪಡಿಸಿ ರಸ್ತೆ ಮಧ್ಯೆ ಪ್ರತಿಭಟನೆ ನಡೆಸಿದರು. ಹರೀಸಂದ್ರದ ಚಿಕ್ಕೇಗೌಡನದೊಡ್ಡಿಯಿಂದ ಹೊರಟ ಪ್ರತಿಭಟನಾಕಾರರು, ಸುಗ್ಗನಹಳ್ಳಿ, ಹರೀಸಂದ್ರ, ಮಾಯಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಸಂಚರಿಸಿ ಕಸ ಘಟಕ ನಿರ್ಮಾಣ ವಿರೋಧಿಸಿ ಘೋಷಣೆ ಕೂಗುತ್ತಾ ಹಳ್ಳಿಮಾಳ ಬಳಿ ರಾಮನಗರ-ಮಾಗಡಿ ರಸ್ತೆ ತಡೆ ಮಾಡುವ ಮೂಲಕ ಆಕ್ರೋಶ ಹೊರಹಾಕಿದರು. ಮುಖಂಡ ಚಂದ್ರಶೇಖರ್ ಮಾತನಾಡಿ, ಕಸಬಾ ಹೋಬಳಿ ಸುಂದರ ಪರಿಸರ, ಉತ್ತಮ ನೀರಾವರಿ ಸೌಲಭ್ಯ ಹೊಂದಿರುವ ಕೇಂದ್ರವಾಗಿದೆ. ಅರ್ಕಾವತಿ ನದಿ ವರ್ಷವೆಲ್ಲ ಹರಿದು ನೀರಿನ ಭವಣೆ ನೀಗಿಸಿದೆ. ಸಾವಿರಾರು ರೈತ ಕುಟುಂಬಗಳು ರೇಷ್ಮೆ, ಮಾವು, ತರಕಾರಿ, ಹೈನುಗಾರಿಕೆಯಲ್ಲಿ ಜೀವನ ಕಟ್ಟಿಕೊಂಡಿದ್ದಾರೆ. ಬೆಂಗಳೂರು ಹತ್ತಿರವಿದ್ದರೂ ಉದ್ಯೋಗಕ್ಕಾಗಿ ವಲಸೆ ಹೋಗದೆ ಕೃಷಿ ಕಾಯಕದಲ್ಲಿ ನಿರತರಾಗಿದ್ದಾರೆ. ಇಂತಹ ಕೇಂದ್ರದಲ್ಲಿ ಹರೀಸಂದ್ರ ಬಳಿ ಸರ್ಕಾರಿ ಗೋಮಾಳ ಜಮೀನು ಸಿಕ್ಕಿದೆ ಎಂದು ಬಿಡದಿ ಮತ್ತು ರಾಮನಗರದ ಕಸ ವಿಲೇವಾರಿಗೆ 20 ಎಕರೆ ಜಮೀನಿನಲ್ಲಿ ಕಸ ಘಟಕ ನಿರ್ಮಾಣ ಮಾಡಲು ಹೊರಟಿದೆ. ಈಗಾಗಲೇ 2 ಸಾವಿರಕ್ಕೂ ಹೆಚ್ಚಿನ ಜನರು ಕಳೆದವಾರ ಪ್ರತಿಭಟನೆ ನಡೆಸಿ ಎಚ್ಚರಿಸಿದಾಗ ಕೆಲಸ ನಿಲ್ಲಿಸಿದ್ದರು. ಇದೀಗ ಮತ್ತೆ ಕೆಲಸ ಪ್ರಾರಂಭಿಸಿದ್ದಾರೆ. ಕೂಡಲೇ ಕಸ ಘಟಕ
ಬಂದ್ ಆಗಬೇಕು ಎಂದು ಆಗ್ರಹಿಸಿದರು.
ಕಸಕ್ಕೆಂದೇ ಸೂಕ್ತ ಸ್ಥಳವಿರುತ್ತದೆ. ಆದರೆ, ಇಂತಹ ಹಸಿರು ಪ್ರದೇಶ ಅದರಲ್ಲೂ ಅರ್ಕಾವತಿ ನದಿ ತೀರದ ರೇಷ್ಮೆ, ಕೃಷಿ, ಹೈನುಗಾರಿಕೆಯಲ್ಲಿ ಜೀವನ ಮಾಡುತ್ತಿರುವ ರೈತರ ಬದುಕಿಗೆ ಬರೆ ಎಳೆಯಲು ಜಾಗ ಸಿಕ್ಕಿದೆ ಎಂದು ಕಸ ಘಟಕ ನಿರ್ಮಾಣ ಮಾಡಲು ಹೊರಟು ಜನರ ಬದುಕಿಗೆ ಮುಳ್ಳಾಗುತ್ತಿರುವುದು ಸರಿಯೇ ? ಜನರ ಆಶಯದಂತೆ ಕೂಡಲೇ ಕಸ ಘಟಕ ಇಲ್ಲಿಂದ ತೆರವಾಗಬೇಕು. -ಸಬ್ಬಕೆರೆ ಶಿವಲಿಂಗಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ, ರಾಮನಗರ ಯಾರ ಹಂಗಿಲ್ಲದೆ ಕೃಷಿಯಲ್ಲಿ ಉತ್ತಮ ಬದುಕು ಕಟ್ಟಿಕೊಂಡ ಕಸಬಾ ಜನರ ಮೇಲೆ ತಲೆ ಭಾಗದಿಂದ ಕಸ ಸುರಿದು ಎದೆ ಮೇಲೆ ಕಸ ಹಾಕಲು ಮುಂದಾಗಿದ್ದಾರೆ. ಜನರ ಕಣ್ಣೋರೆಸಬೇಕಾದವರು ಜನರನ್ನು ಕಸದ ಕಣ್ಣೀರಿಗೆ ನೂಕುತ್ತಿದ್ದಾರೆ. ಕಸ ಘಟಕ ನಿರ್ಮಾಣಕ್ಕೆ ಜನರ ವಿರೋಧವಿದೆ. ಹಾಗೇನಾದರೂ ಕಸ ಘಟಕ ನಿರ್ಮಾಣಕ್ಕೆ ಮುಂದಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. - ಚಂದ್ರಶೇಖರ್ ಮುಖಂಡ.