ದೂರದಿಂದಲೇ ದೂರು ಸ್ವೀಕಾರ

23 RNR- 3
Published on

ವಿಜಯವಾಣಿ ಸುದ್ದಿಜಾಲ ರಾಣೆಬೆನ್ನೂರ

ಕರೊನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇನ್ಮುಂದೆ ಪೊಲೀಸ್ ಠಾಣೆಗಳಿಗೆ ಸಾರ್ವಜನಿಕರು ಮಾತ್ರವಲ್ಲ ಪೊಲೀಸ್ ಕಾನ್​ಸ್ಟೇಬಲ್​ಗಳೂ ಒಳಗೆ ಪ್ರವೇಶ ಮಾಡುವಂತಿಲ್ಲ.

ರಾಜ್ಯದ ವಿವಿಧೆಡೆ ಪೊಲೀಸರಿಗೆ ಸೋಂಕು ತಗಲಿರುವ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆ ಮೇರೆಗೆ ಇಲ್ಲಿಯ ಶಹರ, ಗ್ರಾಮೀಣ, ಸಂಚಾರ, ಹಲಗೇರಿ ಹಾಗೂ ಕುಮಾರಪಟ್ಟಣ ಸೇರಿ 5 ಪೊಲೀಸ್ ಠಾಣೆಗಳ ಒಳಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಅಲ್ಲದೆ, ಕರೊನಾ ಸೋಂಕು ಪ್ರಕರಣ ಕಂಡು ಬಂದ ಪ್ರದೇಶದಲ್ಲಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಠಾಣೆಗೆ ಬರದಂತೆ ಸೂಚಿಸಲಾಗಿದೆ.

ಸಿಬ್ಬಂದಿಗೆ ಕರ್ತವ್ಯದ ವಿವರ ನೀಡುವುದಕ್ಕಾಗಿ ವಾಟ್ಸ್​ಆಪ್ ಗ್ರುಪ್ ಮಾಡಿಕೊಳ್ಳಲಾಗಿದ್ದು, ಸಿಬ್ಬಂದಿಗೆ ವಾಟ್ಸ್​ಆಪ್ ಮೂಲಕವೇ ಯಾವ ಪ್ರದೇಶದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಳ್ಳಬೇಕು ಎಂದು ಸೂಚಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಲ್ಲದೆ, ವಾಟ್ಸ್​ಆಪ್ ಇಲ್ಲದ ಸಿಬ್ಬಂದಿಗಾಗಿ ನೋಟಿಸ್ ಬೋರ್ಡ್ ಮೇಲೆ ಕರ್ತವ್ಯದ ವಿವರ ತಿಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಮೂಲಕ ಸಾಮೂಹಿಕ ಕರ್ತವ್ಯ ನೇಮಿಸುವುದನ್ನು ಕೈ ಬಿಡಲಾಗಿದೆ.

ದೂರು ಪ್ರತಿ ಸಹ ತರುವಂತಿಲ್ಲ: ಸಾರ್ವಜನಿಕರು ಪೊಲೀಸರಿಗೆ ದೂರು ಪ್ರತಿ ಸಹ ನೀಡುವಂತಿಲ್ಲ. ಬದಲಾಗಿ ಠಾಣೆ ಕಾಂಪೌಂಡ್ ಎದುರು ನಿಯೋಜಿಸಲಾದ ಸಿಬ್ಬಂದಿ ಮುಂದೆ ದೂರು-ಅಹವಾಲು ಹೇಳಿಕೊಳ್ಳಬೇಕು. ಪೊಲೀಸರು ವಿಚಾರಣೆ ನಡೆಸಿ, ದೂರು ಸ್ವೀಕಾರ ಮಾಡಬೇಕಾದರೆ ಸ್ಯಾನಿಟೈಸರ್ ಹಾಕಿದ ಪೇಪರ್​ನಲ್ಲಿ ಅವರೇ ದೂರು ಬರೆದುಕೊಳ್ಳುತ್ತಾರೆ.

ಗಂಭೀರ ಪ್ರಕರಣ ಅಥವಾ ತುರ್ತಾಗಿ ದೂರು ದಾಖಲಿಸಿಕೊಳ್ಳಬೇಕಾದ ಸಂದರ್ಭ ಎದುರಾದರೆ ಅಂತಹ ಪ್ರಕರಣಕ್ಕೆ ಸಂಬಂಧಿಸಿದ ಒಬ್ಬರನ್ನು ತಪಾಸಣೆ ನಡೆಸಿ, ಸ್ಯಾನಿಟೈಸರ್ ಹಾಕಿ ಒಳಗಡೆ ಕರೆದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.

ಇಲಾಖೆಯ ಸೂಚನೆ ಮೇರೆಗೆ ಪೊಲೀಸ್ ಠಾಣೆ ಒಳಗೆ ಸಾರ್ವಜನಿಕರ ಪ್ರವೇಶಕ್ಕೆ ತಾತ್ಕಾಲಿಕವಾಗಿ ನಿರ್ಬಂಧ ಹೇರಲಾಗಿದೆ. ಆದರೆ, ದೂರು-ಅಹವಾಲು ಸ್ವೀಕಾರ ನಿತ್ಯದಂತೆ ನಡೆಯುತ್ತದೆ. ಆರೋಗ್ಯದ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕು. | ಟಿ.ವಿ. ಸುರೇಶ, ಡಿವೈಎಸ್ಪಿ, ರಾಣೆಬೆನ್ನೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net