ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರ ಪೂಜೆ: ಭಕ್ತರಿಗೆ ಪ್ರವೇಶ ಇದೆಯಾ?

chamundi hills
Published on

ಮೈಸೂರು: ಚಾಮುಂಡಿಬೆಟ್ಟದಲ್ಲಿ ಪ್ರತಿವರ್ಷ ನಡೆಯುತ್ತಿದ್ದ ಆಷಾಢ ಶುಕ್ರವಾರ ವಿಶೇಷ ಪೂಜೆಗೆ ಈ ಬಾರಿ ಕರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅಲ್ಲದೇ ಮೆಟ್ಟಲು ಮೂಲಕ ಬೆಟ್ಟ ಹತ್ತಿ ಚಾಮುಂಡೇಶ್ವರಿ ದರ್ಶನ ಪಡೆಯುವುದಕ್ಕೂ ಅವಕಾಶವಿಲ್ಲ.

ಜತೆಗೆ ಆಷಾಢ ಮಾಸದ ಶನಿವಾರ, ಭಾನುವಾರದಂದು ಕೂಡ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ಮಂಗಳವಾರ ಚಾಮುಂಡಿಬೆಟ್ಟದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಅಷಾಢ ಶುಕ್ರವಾರಗಳಲ್ಲಿ ಲಕ್ಷಾಂತರ ಜನರು ಮುಂಜಾನೆಯಿಂದ ಮಧ್ಯರಾತ್ರಿವರೆಗೂ ದೇವರ ದರ್ಶನ ಪಡೆಯುತ್ತಾರೆ. ದರ್ಶನಕ್ಕೆ ಅವಕಾಶ ಮಾಡಿಕೊಟ್ಟರೆ ಜನದಟ್ಟಣೆ ಹೆಚ್ಚಾಗಲಿದ್ದು, ನಿಯಂತ್ರಣ ಸಾಧ್ಯವಾಗುವುದಿಲ್ಲ. ಒಂದೊಮ್ಮೆ ಯಾರಿಂದಲಾದರೂ ಕರೊನಾ ವೈರಸ್ ಹರಡಿದರೆ ಚಾಮುಂಡಿಬೆಟ್ಟಕ್ಕೆ ಕಪ್ಪು ಚುಕ್ಕೆಯಾಗುತ್ತದೆ. ಆದ್ದರಿಂದ ಈ ಬಾರಿ ಎಂದಿನಂತೆ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ಮಾತ್ರ ನೆರವೇರಿಸಿ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ನೀಡಬಾರದೆಂದು ಜಿಲ್ಲಾಡಳಿತ, ದೇವಸ್ಥಾನದ ಅರ್ಚಕರು, ಚಾಮುಂಡಿಬೆಟ್ಟದ ಗ್ರಾಮಸ್ಥರ ಪ್ರತಿನಿಧಿಗಳು, ಪೊಲೀಸರು ಅಭಿಪ್ರಾಯ ಮಂಡಿಸಿದರು.

ಜೂ. 26, ಜುಲೈ 3, ಜುಲೈ 10 ಹಾಗೂ ಜುಲೈ 17ರಂದು ಆಷಾಢ ಮಾಸದ ವಿಶೇಷ ಪೂಜೆ ನೆರವೇರಲಿದೆ. ಆದರೆ ಶುಕ್ರವಾರದ ಬಳಿಕ ಶನಿವಾರ, ಭಾನುವಾರ ರಜೆ ಇರುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದ್ದರಿಂದ ಆಷಾಢ ಮಾಸದಲ್ಲಿ ಶುಕ್ರವಾರವಲ್ಲದೇ, ಶನಿವಾರ, ಭಾನುವಾರದಂದೂ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲು ಸಭೆ ನಿರ್ಧರಿಸಿತು.

ಉಳಿದ ದಿನಗಳಲ್ಲಿ ಎಂದಿನಂತೆ ಪರಸ್ಪರ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ದೇವರ ದರ್ಶನ ಪಡೆಯಲು ಅವಕಾಶವಿದೆ. ಧಾರ್ಮಿಕ ಭಾವನೆ ಜತೆಗೆ ಜೀವನದ ಪ್ರಶ್ನೆಯೂ ಅಗಿರುವುದರಿಂದ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಎಸ್.ಟಿ.ಸೋಮಶೇಖರ್ ಸಾರ್ವಜನಿಕರಲ್ಲಿ ಮನವಿ ಮಾಡಿದರು. ನಿರ್ಬಂಧಿತ ದಿನಗಳಲ್ಲಿ ಬೆಟ್ಟದ ಪ್ರವೇಶದ್ವಾರವನ್ನೇ ಬಂದ್ ಮಾಡಲಾಗುತ್ತಿದ್ದು, ಈ ಸಂದರ್ಭದಲ್ಲಿ ಯಾವುದೇ ವಾಹನ ವ್ಯವಸ್ಥೆ ಇರುವುದಿಲ್ಲ. ಇದಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಸಹ ಒಪ್ಪಿಗೆ ಸೂಚಿಸಿದೆ ಎಂದರು

ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಮಾತನಾಡಿ, ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತೇವೆ. ಆದರೆ ಎಲ್ಲದಕ್ಕಿಂತಲೂ ಮಿಗಿಲಾಗಿ ಸಾರ್ವಜನಿಕರ ಆರೋಗ್ಯ ಹಾಗೂ ಜೀವ ಮುಖ್ಯವಾಗುತ್ತದೆ. ಚಿಕ್ಕಮಕ್ಕಳು, ಗರ್ಭಿಣಿಯರು, ವಯೋವೃದ್ಧರು ದೇವರ ದರ್ಶನಕ್ಕೆ ಬರುತ್ತಾರೆ. ಹಾಗಾಗಿ ಸೋಂಕು ಹರಡುವ ಸಾಧ್ಯತೆ ಬಹಳ ಹೆಚ್ಚಿರುತ್ತದೆ. ಉಳಿದ ದಿನಗಳಲ್ಲೂ ಸಾರ್ವಜನಿಕರಿಗೆ ದೇಗುಲ ಪ್ರವೇಶಕ್ಕೆ ಶಿಸ್ತಿನಿಂದ ನಡೆದುಕೊಳ್ಳಬೇಕು. ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸಿರಬೇಕು. ಅಂತರ ಕಾಪಾಡಿಕೊಳ್ಳದೆ ಸಮಸ್ಯೆ ಮಾಡಿದರೆ, ಬೇರೆ ದಿನಗಳಲ್ಲಿಯೂ ಸಾರ್ವಜನಿಕ ಪ್ರವೇಶವನ್ನು ಸಂಪೂರ್ಣ ನಿಷೇಧ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಆಷಾಢ ಶುಕ್ರವಾರ ಅಲ್ಲದೇ ಜುಲೈ 13ರಂದು ನಡೆಯುವ ಚಾಮುಂಡೇಶ್ವರಿ ವರ್ಧಂತಿ ಉತ್ಸವಕ್ಕೂ ಸಾರ್ವಜನಿಕ ಪ್ರವೇಶ ಇರುವುದಿಲ್ಲ. ವರ್ಧಂತಿಗೂ ಸುಮಾರು ಒಂದು ಲಕ್ಷ ಜನರು ಸೇರುವುದರಿಂದ ಅಂತರ ಕಾಪಾಡಿಕೊಳ್ಳುವುದು ಕಷ್ಟ. ಹಾಗಾಗಿ ವರ್ಧಂತಿಯನ್ನು ಜನರಿಲ್ಲದೇ ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಸೇರಿ ವಿವಿಧ ಧಾರ್ಮಿಕ ಕಾರ್ಯ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net