ಇಲ್ಲದ ಕೊಳವೆಬಾವಿಗೆ ವಿದ್ಯುತ್ ಸಂಪರ್ಕ!

25 SDLP 02
ತಿಮ್ಮನಾಯಕನಹಳ್ಳಿಯಲ್ಲಿ ರೈತರೊಬ್ಬರ ಜಮೀನಿನಲ್ಲಿ ಗಂಗಾಕಲ್ಯಾಣ ಯೋಜನೆಯಡಿ ಕೊರೆಸಿದೆ ಎನ್ನಲಾದ ಕೊಳವೆಬಾವಿಗೆ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಸುತ್ತಿರುವುದು.
Published on

ಗಂಗಾಕಲ್ಯಾಣ ಯೋಜನೆಯಲ್ಲಿ ಧೋಖಾ? -ಅನುಮಾನಗೊಂಡ ಗ್ರಾಮಸ್ಥರಿಂದ ಬೆಸ್ಕಾಂ ಅಧಿಕಾರಿಗಳಿಗೆ ಮೌಖಿಕ ಮನವಿ

ಶಿಡ್ಲಘಟ್ಟ: ಇಲ್ಲದ ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ತಾಲೂಕಿನ ತಿಮ್ಮನಾಯಕನಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಸದೆ, ಕೊಳವೆ ಬಾವಿ ಕೊರೆಸಿದಂತೆ ಕೇಸಿಂಗ್ ಪೈಪ್ ಇಟ್ಟು ಸುತ್ತಲೂ ಮರಳು ಸುರಿದು ವಿದ್ಯುತ್ ಸಂಪರ್ಕ ನೀಡಿ ಸರ್ಕಾರಕ್ಕೆ ವಂಚಿಸಲಾಗುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿರುವ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಮೌಖಿಕವಾಗಿ ದೂರು ನೀಡಿದ್ದಾರೆ.

ಗ್ರಾಮದ ರೈತರೊಬ್ಬರಿಗೆ ಗಂಗಾಕಲ್ಯಾಣ ಯೋಜನೆಯಡಿ ಕೊಳವೆಬಾವಿ ಮಂಜೂರಾಗಿದೆ. ಆದರೆ, ಕೊಳವೆಬಾವಿ ಕೊರೆಸದೆ ಕೇವಲ ಕೇಸಿಂಗ್ ಪೈಪ್ ಇಟ್ಟು ಕೊಳವೆಬಾವಿ ಕೊರೆಸಿದಂತೆ ಬಿಂಬಿಸಿ ಸುತ್ತಲೂ ಮರಳು ಸುರಿಯಲಾಗಿದೆ. ಇದಕ್ಕೆ ಬೆಸ್ಕಾಂನಿಂದ ಟ್ರಾನ್ಸ್‌ಫಾರ್ಮರ್ (ವಿದ್ಯುತ್ ಸ್ಥಾವರ) ಅಳವಡಿಸಿ ವಿದ್ಯುತ್ ಸಂಪರ್ಕ ನೀಡಲಾಗುತ್ತಿದೆ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.

ಈ ಜಮೀನಿನ ಪಕ್ಕದಲ್ಲೇ ಇದೇ ರೈತನ ಮತ್ತೊಂದು ಜಮೀನಿದ್ದು, ಅಲ್ಲಿ ಕೊಳವೆಬಾವಿ ಇದೆ. ಅದಕ್ಕೆ ವಿದ್ಯುತ್ ಸ್ಥಾವರದ ಸಂಪರ್ಕವೂ ಇದೆ. ಆದರೆ, ಈಗ ಗಂಗಾ ಕಲ್ಯಾಣ ಯೋಜನೆಯಲ್ಲಿ ವಿದ್ಯುತ್ ಟ್ರಾನ್‌ಸ್ಾರ್ಮರ್ ಅಳವಡಿಸುತ್ತಿರುವ ಕೊಳವೆಬಾವಿ ಕೊರೆಸಿರುವುದೇ ಅನುಮಾನ. ಹೀಗಾಗಿ ಬೆಸ್ಕಾಂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು ಎಂದು ಬೆಸ್ಕಾಂನ ಚಿಂತಾಮಣಿ ವಿಭಾಗದ ಇಇ, ಶಿಡ್ಲಘಟ್ಟ ವೃತ್ತದ ಎಇಇ, ದಿಬ್ಬೂರಹಳ್ಳಿ ವಿಭಾಗದ ಎಸ್‌ಒ ಅವರಿಗೆ ಗ್ರಾಮಸ್ಥರು ಮೌಖಿಕವಾಗಿ ದೂರವಾಣಿ ಮೂಲಕ ಮನವಿ ಮಾಡಿದ್ದಾರೆ.


ಗಂಗಾಕಲ್ಯಾಣ ಯೋಜನೆಯಡಿ ತಿಮ್ಮನಾಯಕನಹಳ್ಳಿಯ ರೈತ ನಾರಾಯಣಸ್ವಾಮಿ ಎಂಬುವರಿಗೆ ಕೊಳವೆಬಾವಿ ಮಂಜೂರಾಗಿದೆ. ಅದಕ್ಕೆ ವಿದ್ಯುತ್ ಸಂಪರ್ಕ ನೀಡುವಂತೆ ಕಳೆದ ಫೆಬ್ರವರಿಯಲ್ಲಿಯೇ ಮಂಜೂರಾತಿ ಆದೇಶದ ಕಡತ ಬಂದಿತ್ತು. ಅದರಂತೆ ವಿದ್ಯುತ್ ಸಂಪರ್ಕ ನೀಡುವ ಕೆಲಸ ಮಾಡುತ್ತಿದ್ದೇವೆ. ಈ ಮಧ್ಯೆ ಗ್ರಾಮಸ್ಥರು ಕೊಳವೆಬಾವಿಯನ್ನೇ ಕೊರೆಸಿಲ್ಲ, ಕೊರೆಸಿದಂತೆ ಬಿಂಬಿಸಲಾಗಿದೆ ಎಂದು ದೂರಿದ್ದಾರೆ. ಈ ಬಗ್ಗೆ ತನಿಖೆ ಮಾಡುವಂತೆ ನನಗೂ ಹಾಗೂ ಹಿರಿಯ ಅಧಿಕಾರಿಗಳಿಗೂ ಮನವಿ ಮಾಡಿದ್ದಾರೆ. ದೂರಿನ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಸತ್ಯಾಸತ್ಯತೆ ಬಗ್ಗೆ ಪರಿಶೀಲಿಸಲಾಗುವುದು.
- ಎಂ.ಮುನಿರಾಜು, ಜೆಇ, ಬೆಸ್ಕಾಂನ ದಿಬ್ಬೂರಹಳ್ಳಿ ವೃತ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net