

ಸುಭಾಸ ಧೂಪದಹೊಂಡ ಕಾರವಾರ
ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳಲ್ಲಿ ಜನಪ್ರತಿನಿಧಿಗಳಿಲ್ಲದೇ ಅಧಿಕಾರಿಗಳ ಆಡಳಿತ ಪ್ರಾರಂಭವಾಗಿ 2 ವರ್ಷ ಸಮೀಪಿಸುತ್ತಿದೆ. ಪರಿಣಾಮ ಜಿಲ್ಲೆಯ ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಧ್ವನಿಯೇ ಇಲ್ಲವಾಗಿದೆ. ವಿಧಾನಸಭೆ ಚುನಾವಣೆ ಎದುರಿಗಿರುವುದರಿಂದ ಸದ್ಯಕ್ಕಂತೂ ಈ ಸಂಸ್ಥೆಗಳಿಗೆ ಜನಪ್ರತಿನಿಧಿಗಳ ಆಡಳಿತ ಕಾಣುವ ಲಕ್ಷಣಗಳಿಲ್ಲ.
2021 ರ ಏಪ್ರೀಲ್‌ನಲ್ಲಿ ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ, ಮಾರ್ಚ್ ಅಂತ್ಯಕ್ಕೆ ವಿವಿಧ ತಾಪಂಗಳ ಆಡಳಿತ ಸಮಿತಿಗಳ ಅಧಿಕಾರಾವಧಿ ಮುಕ್ತಾಯವಾಗಿತ್ತು. ಜಿಪಂ ಹಾಗೂ ತಾಪಂ ಕ್ಷೇತ್ರಗಳ ಮರು ವಿಂಗಡನೆ, ಮೀಸಲಾತಿ ನಿಗದಿ ವಿವಾದ ವಿವಿಧ ಹಂತಗಳಲ್ಲಿ ನ್ಯಾಯಾಲಯದಲ್ಲಿ ಇದುವರೆಗೂ ವಿಚಾರಣೆಯಲ್ಲಿರುವುದರಿಂದ ಚುನಾವಣೆ ನಡೆದು ನೂತನ ಸದಸ್ಯರ ಆಯ್ಕೆಯಾಗಿಲ್ಲ.
ಜಿಲ್ಲಾ ಪಂಚಾಯಿತಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯನ್ನು ಹಾಗೂ 11 ತಾಪಂಗಳಿಗೆ ವಿವಿದ ಇಲಾಖೆಗಳ ಎ' ದರ್ಜೆಯ ಅಧಿಕಾರಿಗಳನ್ನು ಆಡಳಿತಾಧಿಕಾರಿಗಳನ್ನಾಗಿ ಸರ್ಕಾರ ನೇಮಿಸಿದೆ. ಅವರ ಉಸ್ತುವಾರಿಯಲ್ಲೇ ಪ್ರಗತಿ ಪರಿಶೀಲನಾ ಸಭೆಗಳು, ಬಜೆಟ್ ಮಂಡನೆ, ಅನುದಾನ ಹಂಚಿಕೆ, ಫಲಾನುಭವಿಗಳ ಆಯ್ಕೆ, ಮುಂತಾದ ಕಾರ್ಯಗಳು ನಡೆಯುತ್ತಿವೆ.
ಜನರ ಸಮಸ್ಯೆ ಆಲಿಸುವವರಿಲ್ಲ:
ಜಿಪಂ ಜಿಲ್ಲೆಯ ವಿಧಾನಸಭೆಯಂತೆ ಕಾರ್ಯನಿರ್ವಹಿಸಿತ್ತಿತ್ತು. ಜಿಪಂ, ತಾಪಂ ಸದಸ್ಯರು ಗ್ರಾಮೀಣ ಭಾಗದ ಸಮಸ್ಯೆಗಳನ್ನು ಜಿಲ್ಲಾ ಮಟ್ಟದಲ್ಲಿ ಪ್ರತಿಬಿಂಬಿಸುವ ರೂವಾರಿಗಳಾಗಿದ್ದರು. ತಳ ಹಂತದಲ್ಲಿ ನಡೆಯುವ ಅವ್ಯವಹಾರಗಳು, ಗ್ರಾಮೀಣ ಜನರ ನಿಜವಾದ ಬೇಡಿಕೆಗಳ ಬಗ್ಗೆ ಕನಿಷ್ಠ ಎರಡು ತಿಂಗಳಗೊಮ್ಮೆ ನಡೆಯುವ ಸಾಮಾನ್ಯ ಸಭೆಗಳಲ್ಲಿ ಪ್ರತಿಬಿಂಬಿತವಾಗುತ್ತಿದ್ದವು. ಬಿಸಿಯೂಟಕ್ಕೆ ಕಳಪೆ ಬೇಳೆ ಪೂರೈಕೆ, ಹೈಸ್ಕೂಲ್‌ಗಳಿಗೆ ಕಳಪೆ ಡೆಸ್ಕ್ ಬೆಂಚ್ ಹಂಚಿಕೆ, ಕಳಪೆ ಜೇನು ಪೆಟ್ಟಿಗೆ ವಿತರಣೆ, ಮುಂತಾದ ಹಗರಣಗಳ ಬಗ್ಗೆ ಉಕ ಜಿಲ್ಲಾ ಪಂಚಾಯಿತಿ ಸಭೆಗಳಲ್ಲಿ ಗಂಭೀರ ಚರ್ಚೆಗಳಾಗಿದ್ದವು. ಕೆಲವು ಅಕ್ರಮಗಳ ಬಗ್ಗೆ ಅಽಕಾರಿಗಳ ಮೇಲೆ ಕ್ರಮವಾದ ಉದಾಹರಣೆಯಿದೆ. ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಸಭೆಯ ಶಿಫಾರಸನ್ನು ಪರಿಗಣಿಸಿ ಸರ್ಕಾರ ಯೋಜನೆ ಜಾರಿಗೆ ತಂದ ಉದಾಹರಣೆಯೂ ಇದೆ. ಆದರೆ, ಈಗ ಜನರ ಕೂಗಿಗೆ ಜಿಲ್ಲಾ ಮಟ್ಟದಲ್ಲಿ ಧ್ವನಿಯಾಗುವವರೇ ಇಲ್ಲವಾಗಿದ್ದಾರೆ. ಜಿಲ್ಲಾ ಪಂಚಾಯಿತಿ ಆಡಳಿತಾಽಕಾರಿಯಾಗಿ ನೇಮಕವಾಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಬೆಂಗಳೂರಿನಲ್ಲಿ ಕುಳಿತೇ ವಿಡಿಯೋ ಸಂವಾದದ ಮೂಲಕ ಜಿಪಂ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಅಲ್ಲಿಂದಲೇ ಸಭೆ ನಡೆಸಿ ಅಧಿಕಾರಿಗಳು ಹೇಳುವ ಅಂಕಿ, ಸಂಖ್ಯೆಗಳ ವರದಿಯನ್ನೇ ನಂಬುತ್ತಿದ್ದಾರೆ. ಸರ್ಕಾರದ ಅನುದಾನ ಸಮರ್ಪಕವಾಗಿ ಖರ್ಚಾಗುತ್ತಿದೆಯೇ ಎಂದು ಸ್ಥಳ ಪರಿಶೀಲನೆ ನಡೆಸಿ ನೋಡುವವರಿಲ್ಲ.
ಸ್ಥಾಯಿ ಸಮಿತಿಗಳು
ಜಿಪಂ ಸಾಮಾನ್ಯ ಸಮಿತಿಯ ಜತೆಗೆ 5 ಸ್ಥಾಯಿ ಸಮಿತಿಗಳಿರುತ್ತಿದ್ದವು. ಜಿಪಂ ಅಡಿ ಬರುವ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ, ಅನುದಾನ ಬಿಡುಗಡೆ ಹಂಚಿಕೆಗಳ ಬಗ್ಗೆ ಈ ಸಭೆಗಳಲ್ಲಿ ನಿರ್ಣಯವಾಗುತ್ತಿತ್ತು. ಸಾಮಾನ್ಯ ಸ್ಥಾಯಿ ಸಮಿತಿ, ಹಣಕಾಸು ಮತ್ತು ಲೆಕ್ಕಪರಿಶೋಧನೆ ಮತ್ತು ಯೋಜನಾ ಸಮಿತಿ, ಸಾಮಾಜಿಕ ನ್ಯಾಯ ಸಮಿತಿ, ಶಿಕ್ಷಣ ಮತ್ತು ಆರೋಗ್ಯ ಸಮಿತಿ, ಕೃಷಿ ಮತ್ತು ಕೈಗಾರಿಕಾ ಸಮಿತಿಗಳು ಕಾರ್ಯನಿರ್ವಹಣೆ ಮಾಡುತ್ತಿದ್ದವು.
ಕೋಟಿ ಅನುದಾನವೂ ಇಲ್ಲ
ಜಿಪಂ ಅಧ್ಯಕ್ಷರಿಗೆ ಕ್ಯಾಬಿನೆಟ್ ಸಚಿವರ ಸ್ಥಾನ ನೀಡಿದ ಬಳಿಕ ಅವರಿಗೆ ವರ್ಷಕ್ಕೆ 2 ಕೋಟಿ ರೂ. ವಿವೇಚನಾನುದಾನ ನೀಡುಲಾಗುತ್ತಿತ್ತು. ತಾಪಂ ಅಧ್ಯಕ್ಷರಿಗೆ 1 ಕೋಟಿ ರೂ. ಬಿಡುಗಡೆಯಾಗುತ್ತಿತ್ತು. ಈಗ ಎರಡು ವರ್ಷಗಳಿಂದ ಆ ಅನುದಾನ ಬಿಡುಗಡೆಯಾಗಿಲ್ಲ ಎನ್ನುತ್ತಾರೆ ಜಿಪಂ ಉಪ ಕಾರ್ಯದರ್ಶಿ ಡಿ.ಎಂ.ಜಕ್ಕಪ್ಪಗೋಳ.
ಅನುಕೂಲವಾಗಿದೆ ಮಾರಾಯ್ರೆ
ಹಿಂದೆ ಫಲಾನುಭವಿಗಳ ಆಯ್ಕೆಯಾದಾಗ ನಮಗೆ ತಿಳಿಸಿಲ್ಲ. ಕಾರ್ಯಕ್ರಮಗಳಿಗೆ ನಮಗೆ ಕರೆದಿಲ್ಲ ಎಂದು ಜಿಪಂ ತಾಪಂ ಸದಸ್ಯರಿಂದ ಕಾಯಂ ಆಕ್ಷೇಪ ಇದ್ದೇ ಇರುತ್ತಿತ್ತು. ಅಗತ್ಯವಿದ್ದಲ್ಲಿ ಅನುದಾನ ಹಂಚಿಕೆ ಸಾಧ್ಯವಾಗುತ್ತಿರಲಿಲ್ಲ. ಕ್ಷೇತ್ರವಾರು ಅನುದಾನ ಹಂಚಬೇಕಿತ್ತು. ಇಲ್ಲದೇ ಇದ್ದರೆ ಸಭೆಗಳಲ್ಲಿ ದೊಡ್ಡ ರಾದ್ಧಾಂತವಾಗುತ್ತಿತ್ತು. ಈಗ ಎರಡು ವರ್ಷಗಳಿಂದ ನಿರಾಳವಾಗಿದ್ದೇವೆ ಮಾರಾಯ್ರೆ' ಎಂದು ಜಿಪಂ ಅಡಿ ಕಾರ್ಯನಿರ್ವಹಿಸುತ್ತಿರುವ ಹೆಸರು ಹೇಳಲಿಚ್ಛಿಸದ ಅಽಕಾರಿಯೊಬ್ಬರು ಸಮಾಧಾನ ಹಂಚಿಕೊAಡರು.
…………..
ಜಿಪಂ ತಾಪಂ ಸದಸ್ಯರು ಇಲ್ಲದ ಕಾರಣ ಶಾಸಕರನ್ನು ಬಿಟ್ಟರೆ ಕೆಳ ಹಂತದಲ್ಲಿ ಕಳೆದ ಎರಡು ವರ್ಷಗಳಿಂದ ಜನರ ಸಮಸ್ಯೆಗಳನ್ನು ಕೇಳುವವರೇ ಇಲ್ಲವಾಗಿದ್ದಾರೆ. ಅಧಿಕಾರಿಗಳು ಆಡಿದ್ದೇ ಆಟವಾಗಿದೆ. ಆಡಳಿತ ವ್ಯವಸ್ಥೆ ಕುಸಿದಿದೆ.
ಶಿವಾನಂದ ಹೆಗಡೆ ಕಡತೋಕ
ಉಕ ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ