ರಾಜ್ಯದಲ್ಲಿ ಏರುತ್ತಲೇ ಇದೆ ಡ್ರಗ್ಸ್ ಅಮಲು!

No Drug day
Published on

ಬೆಂಗಳೂರು: ಕೇಂದ್ರ ತನಿಖಾ ಸಂಸ್ಥೆಗಳು ಹಾಗೂ ಸ್ಥಳೀಯ ಪೊಲೀಸರು ಎಷ್ಟೇ ಕಟ್ಟುನಿಟ್ಟಿನ ನಿಗಾವಹಿಸಿದರೂ ಮಾದಕ ವಸ್ತು ಜಾಲಗಳನ್ನು ಹತ್ತಿಕ್ಕಲು ಸಾಧ್ಯವಾಗುತ್ತಿಲ್ಲ. ಹೊಸಹೊಸ ಮಾರ್ಗಗಳಲ್ಲಿ ಡ್ರಗ್ಸ್ ಪೂರೈಕೆಯಾಗುತ್ತಿದೆ. ಕಾನೂನುಬಾಹಿರ ಕೃತ್ಯಗಳಿಗೆ ಬಳಸುವ ಡಾರ್ಕ್‌ವೆಬ್‌ಸೈಟ್ ಮೂಲಕ ವಿದೇಶಗಳಿಂದ ಮಾದಕ ವಸ್ತು ಭಾರತಕ್ಕೆ ಆಮದಾಗುತ್ತಿದೆ.

2021ರ ವರದಿಗಳ ಪ್ರಕಾರ, 15-64 ವಯೋಮಾನದವರಲ್ಲಿ ಸುಮಾರು 296 ದಶಲಕ್ಷ ಜನರು ಮಾದಕ ವ್ಯಸನದ ಬಳಕೆಯಲ್ಲಿ ತೊಡಗಿದ್ದಾರೆ. ಅರಿವು, ಕಾನೂನುಗಳು ಮತ್ತು ನಿಬಂಧನೆಗಳ ಹೊರತಾಗಿಯೂ ಜನರು ಈ ಮಾದಕ ದ್ರವ್ಯಗಳ ಸೇವನೆಗೆ ಒಳಗಾಗುತ್ತಿದ್ದು, ಇದೊಂದು ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದೆ.

ಈ ಪಿಡುಗಿನ ವಿರುದ್ಧ ಹೋರಾಡಲು ಪ್ರತಿ ವರ್ಷ ಜೂನ್ 26ರಂದು ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳಸಾಗಾಣಿಕೆ ವಿರೋಧಿ ದಿನ ಆಚರಿಸಲಾಗುತ್ತಿದೆ. ‘ಮಾದಕವಸ್ತುಗಳ ಬಳಕೆಗೆ ಮಾಡುತ್ತಿದ್ದ ಹೂಡಿಕೆಯನ್ನು ಇನ್ನು ಮುಂದೆ ತಡೆಗಟ್ಟುವಲ್ಲಿ ಮಾಡಿರಿ’ ಎಂಬ ಘೋಷಣೆಯೊಂದಿಗೆ ಈ ವರ್ಷದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳಸಾಗಣಿಕೆ ವಿರೋಧಿ ಸಪ್ತಾಹ ಆಚರಿಸಲಾಗುತ್ತಿದೆ.

2019ರಿಂದ 2021ರ ಅಂತ್ಯದವರೆಗೆ ಕರ್ನಾಟಕದಲ್ಲಿ ಎನ್‌ಸಿಬಿ ಹಾಗೂ ಸ್ಥಳೀಯ ಪೊಲೀಸರು ಬರೋಬ್ಬರಿ 8500 ಪ್ರಕರಣ ದಾಖಲಿಸಿದ್ದಾರೆ. ಇದರಲ್ಲಿ 12607 ಆರೋಪಿಗಳನ್ನು ಬಂಧಿಸಿದ್ದು, 1482 ಕೆಜಿ ಚರಸ್, 12055 ಕೆಜಿ ಮೆಥಂಪೆಟಮೈನ್ ಹಾಗೂ 32 ಸಾವಿರ ಕೆಜಿ ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ. ಮಾದಕ ವಸ್ತು ಪೂರೈಕೆ ವೇಳೆ ಸಿಕ್ಕಿಬೀಳುವ ಆರೋಪಿಗಳ ಚಟುವಟಿಕೆಗಳ ಮೇಲೆ ನಿರಂತರವಾಗಿ ನಿಗಾ ವಹಿಸುವಂತೆ ರಾಜ್ಯದ ಎಲ್ಲ ಪೊಲೀಸ್ ಠಾಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಗಡಿ ಜಿಲ್ಲೆಗಳಾದ ಆಂಧ್ರಪ್ರದೇಶದ ಕರ್ನೂಲ್, ಅನಂತಪುರ, ತಮಿಳುನಾಡಿನ ಕೃಷ್ಣಗಿರಿ, ಒಡಿಶಾ ಮತ್ತು ಗೋವಾದಿಂದ ಬೆಂಗಳೂರಿಗೆ ಗಾಂಜಾ ರವಾನೆಯಾಗುತ್ತಿದೆ. ಆದರೆ, ಎಲ್‌ಎಸ್‌ಡಿ, ಎಂಡಿಎಂಎ, ಮಿಯ್ನಂ, ಕೊಕೇನ್, ಬ್ರೌನ್‌ಶುಗರ್, ಹಾಶಿಸ್‌ನಂತಹ ಡ್ರಗ್ಸ್ ವಿದೇಶಗಳಿಂದ ಬರುತ್ತಿದೆ. ಪಾಕಿಸ್ತಾನ, ಅಪ್ಘಾನಿಸ್ತಾನ, ಇರಾನ್, ಮ್ಯಾನ್ಮಾರ್‌ನಿಂದ ಹೆರಾಯಿನ್, ಅಫೀಮಿನಂಥ ಡ್ರಗ್ಸ್ ರಾಜ್ಯಕ್ಕೆ ಕಾಲಿಡುತ್ತಿದೆ. ಮುಂಬೈ, ಗೋವಾ, ಮಂಗಳೂರು, ಚೆನ್ನೆ ಗೆ ಸಮುದ್ರಮಾರ್ಗದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಹೊಸ ಡ್ರಗ್ಸ್‌ಗಳು ಬರಲಾರಂಭಿಸಿವೆ. ಅಲ್ಲಿಂದ ರೈಲು ಮತ್ತು ಬಸ್‌ಗಳ ಸಹಾಯದಿಂದ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು, ಚಿತ್ರದುರ್ಗ, ಬಳ್ಳಾರಿ, ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಿಗೆ ಪೂರೈಕೆ ಮಾಡಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಟಾರ್ಗೆಟ್ ಯಾರು? ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳು, ಸ್‌ಟಾವೇರ್ ಕಂಪನಿ ಉದ್ಯೋಗಿಗಳು ಹಾಗೂ ಶ್ರೀಮಂತ ವರ್ಗದ ಯುವಕ, ಯುವತಿಯರು ಎಲ್‌ಎಸ್‌ಡಿ, ಕೊಕೇನ್, ಬ್ರೌನ್‌ಶುಗರ್, ಹಾಶಿಸ್‌ನಂತಹ ಬೆಲೆ ಬಾಳುವ ಡ್ರಗ್ಸ್ ಮೈಕ್ರೋ ಗ್ರಾಂ ಲೆಕ್ಕದಲ್ಲಿ ಖರೀದಿಸುತ್ತಿದ್ದಾರೆ. ಪ್ರಮುಖ ನಗರಗಳಲ್ಲಿ ನಡೆಯುವ ಕಿಟ್ಟಿ ಪಾರ್ಟಿಗಳು, ಪಬ್, ಡ್ಯಾನ್ಸ್‌ಬಾರ್‌ಗಳಲ್ಲೂ ಇದರ ಘಾಟು ಹೆಚ್ಚಾಗಿದೆ. ಕೂಲಿಕಾರ್ಮಿಕರು, ಬಡವರ್ಗದ ಯುವಕ-ಯುವತಿಯರು ಗಾಂಜಾ ಖರೀದಿಸಿ ಸೇವಿಸುತ್ತಾರೆ.

ಡಾರ್ಕ್ ವೆಬ್‌ಸೈಟ್ ರಹಸ್ಯ: ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ವಹಿವಾಟು ಬಹುತೇಕ ಡಾರ್ಕ್‌ವೆಬ್‌ಸೈಟ್‌ನಲ್ಲೇ ನಡೆಯುತ್ತಿದೆ. ಡ್ರಗ್ಸ್ ಆರ್ಡರ್ ಮಾಡಿದವರು ಯಾರು? ಎಲ್ಲಿಂದ ಆತ ಆರ್ಡರ್ ಮಾಡಿದ್ದಾನೆ? ಎಂಬ ಮಾಹಿತಿ ಬಹಿರಂಗವಾಗುವುದಿಲ್ಲ. ಡೆಲಿವರಿ ಮಾಡುವ ಸಂದರ್ಭದಲ್ಲಿ ಮಾತ್ರವೇ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬೀಳುತ್ತಿದ್ದಾರೆ. ಡಾರ್ಕ್ ವೆಬ್‌ಸೈಟ್‌ಗೆ ಹೋಗಿ ಡ್ರಗ್ಸ್ ಬುಕ್ ಮಾಡಿದರೆ ಕೊರಿಯರ್ ಮೂಲಕ ಮನೆಬಾಗಿಲಿಗೇ ತಲುಪುತ್ತದೆ.

ವಿದೇಶಿ ಪೆಡ್ಲರ್‌ಗಳ ಸವಾಲು: ನೈಜೀರಿಯಾ ಸೇರಿ ಆಫ್ರಿಕಾ ಖಂಡದ ಹಲವು ಪ್ರಜೆಗಳು ರಾಜ್ಯದ ವಿವಿಧೆಡೆ ಸಕ್ರಿಯವಾಗಿ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಕರ್ನಾಟಕದಲ್ಲಿನ ಮಾದಕವಸ್ತುಗಳ ಜಾಲದಲ್ಲಿ ಶೇಕಡ 40ರಷ್ಟು ವಿದೇಶಿಯರ ಪಾತ್ರ ಇದೆ. ಎನ್‌ಸಿಬಿ ಅಧಿಕಾರಿಗಳು 2019ರಲ್ಲಿ 430, 2020ರಲ್ಲಿ 196 ಹಾಗೂ 2021ರಲ್ಲಿ 345 ವಿದೇಶಿ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ.

ವಿದೇಶಿಗರ ಅಕ್ರಮ ವಾಸ: ನೈಜೀರಿಯಾ, ಉಗಾಂಡ, ಕೀನ್ಯಾ, ಘಾನ, ಸೂಡಾನ್, ಲಿಬಿಯಾ ಸೇರಿ ಆಫ್ರಿಕಾ ಮೂಲದ ಪ್ರಜೆಗಳು ಪ್ರವಾಸಿ, ವ್ಯಾಸಂಗ, ಉದ್ಯಮದ ಹೆಸರಿನಲ್ಲಿ ವೀಸಾ ಪಡೆದು ರಾಜ್ಯಕ್ಕೆ ಕಾಲಿಡುತ್ತಾರೆ. ಉತ್ತರ ಭಾರತದಲ್ಲಿರುವ ಕೆಲ ರಾಜ್ಯಗಳಲ್ಲಿರುವ ಪೆಡ್ಲರ್‌ಗಳನ್ನು ಸಂಪರ್ಕಿಸಿ ಕಡಿಮೆ ಬೆಲೆಗೆ ಅವರಿಂದ ಡ್ರಗ್ಸ್ ಖರೀದಿಸಿ ರಾಜ್ಯದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಸಂಪಾದಿಸಿದ್ದಾರೆ. ಬಾಂಗ್ಲಾದೇಶ, ನೇಪಾಳ ಪ್ರಜೆಗಳು ಅಕ್ರಮವಾಗಿ ದೇಶಕ್ಕೆ ನುಸುಳಿ ರಾಜಾರೋಷವಾಗಿ ಡ್ರಗ್ಸ್ ದಂಧೆ ನಡೆಸುತ್ತಿದ್ದಾರೆ.

ಮಾದಕದ್ರವ್ಯ ವ್ಯಸನದ ಆರಂಭ ಹೇಗೆ? ಮೊದಮೊದಲು ಮದ್ಯವನ್ನು ಕುತೂಹಲಕ್ಕಾಗಿ ಸೇವಿಸಲು ಆರಂಭಿಸುವಂತೆ, ಜನರು ತಮ್ಮೊಳಗಿನ ಒತ್ತಡವನ್ನು ಶಮನಗೊಳಿಸಲೆಂದೋ, ಸ್ನೇಹಿತರ ಒತ್ತಾಯಕ್ಕೋ ಮಾದಕದ್ರವ್ಯ ಉಪಯೋಗಿಸಲು ಆರಂಭಿಸುತ್ತಾರೆ. ದುರ್ಬಲ ವ್ಯಕ್ತಿತ್ವ ಹಾಗೂ ಮನೋಸಾಮರ್ಥ್ಯ ಕಡಿಮೆ ಇದ್ದವರು ವ್ಯಸನಿಗಳಾಗುತ್ತಾರೆ.

ಮಾದಕ ವಸ್ತುಗಳು ಯಾವವು? ಧೂಮಪಾನ, ಗಾಂಜಾ ಮುಂತಾದವುಗಳನ್ನು ಸೇದುವುದು, ಇಂಜೆಕ್ಷನ್ ಚುಚ್ಚಿಕೊಳ್ಳುವುದು, ಜಗಿಯುವುದು ಮತ್ತು ಕುಡಿಯುವುದು ಮುಂತಾಗಿ ಅನೇಕ ವಿಧದಲ್ಲಿ ಮಾದಕ ದ್ರವ್ಯಗಳನ್ನು ಬಳಸಲಾಗುತ್ತದೆ. ಭಾರತದಲ್ಲಿ ಮಾರಿಜುವಾನಾ, ಗಾಂಜಾ, ತಂಬಾಕು, ಮತ್ತು ವೈದ್ಯರ ಸಲಹೆ ಪಡೆಯದೆ ಔಷಧಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುವುದು ಮುಂತಾದವು ವ್ಯಸನಿಗಳು ಹೆಚ್ಚಾಗಿ ಬಳಸುವ ಮಾದಕ ದ್ರವ್ಯಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net