

ಹಿರಿಕರ ರವಿ, ಸೋಮವಾರಪೇಟೆ
ತಜ್ಞ ವೈದ್ಯರಿಲ್ಲದ ಹೈಟೆಕ್ ಆಸ್ಪತ್ರೆ ಖ್ಯಾತಿಯ ಸರ್ಕಾರಿ ಸಾರ್ವಜನಿಕ ತಾಲೂಕು ಆಸ್ಪತ್ರೆಯ ನವೀಕರಣ ಕಾಮಗಾರಿ 1.60 ಕೋಟಿ ರೂ.ಗಳ ವೆಚ್ಚದಲ್ಲಿ ನಡೆಯುತ್ತಿದೆ.
ಸರ್ಕಾರ ಆಸ್ಪತ್ರೆ ಅಭಿವೃದ್ಧಿಗೆ ಕೋಟಿ ರೂ. ಲೆಕ್ಕದಲ್ಲಿ ಹಣವನ್ನು ಬಿಡುಗಡೆಗೊಳಿಸುತ್ತಿದೆ. ಆದರೆ ತಜ್ಞವೈದ್ಯರನ್ನು ನೇಮಿಸದೆ ರೋಗಿಗಳು ಸಂಕಷ್ಟಕ್ಕೆ ಸಿಲುಕುವಂತೆ ಮಾಡುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಕಳೆದ ಜೂನ್ 23ರಂದು ಸೋಮವಾರಪೇಟೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಶಾಸಕ ಡಾ.ಮಂತರ್‌ಗೌಡ ಅವರ ಬೇಡಿಕೆಯಂತೆ ಮುಂದಿನ ಒಂದು ತಿಂಗಳಲ್ಲೇ ತಜ್ಞ ವೈದ್ಯರನ್ನು ನೇಮಿಸುವ ಭರವಸೆ ನೀಡಿದ್ದರು. ಆದರೆ ಭರವಸೆ ಹುಸಿಯಾಗಿದೆ. ಈಗಲೂ 4 ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಕಳೆದ 20 ವರ್ಷಗಳಿಂದ ತಜ್ಞ ವೈದ್ಯರಿಲ್ಲದೆ ಆಸ್ಪತ್ರೆ ನರಳುತ್ತಿದೆ. ಕೋಟಿ ರೂ. ವೆಚ್ಚದ 300 ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆ, ತಾಲೂಕಿನ 58 ಗ್ರಾಮಗಳ ರೋಗಿಗಳು ಈ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ. ಪ್ರತಿನಿತ್ಯ 200ರಿಂದ 300 ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಆದರೆ, ತಪಾಸಣೆ ಮಾಡಬೇಕಾದ ತಜ್ಞ ವೈದ್ಯರು ಸಿಗುವುದಿಲ್ಲ. ಕಡ್ಡಾಯ ಗ್ರಾಮೀಣ ಸೇವೆಯ ಎಂಬಿಬಿಎಸ್ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಶಸ್ತ್ರಚಿಕಿತ್ಸಾ ಘಟಕ, ಅಪಘಾತ ಹಾಗೂ ತುರ್ತು ಸೇವಾ ಘಟಕ, ಡಯಾಲಿಸಿಸ್ ಸೇವೆ, ಹೆರಿಗೆ ವಿಭಾಗ, ಶಸ್ತ್ರಚಿಕಿತ್ಸಾ ಕೊಠಡಿ, 10 ಹಾಸಿಗೆಯುಳ್ಳ ತುರ್ತು ಚಿಕಿತ್ಸಾ ಘಟಕ, ಎಕ್ಸ್ ರೇ ಘಟಕ, ಹೈಟೆಕ್ ರಕ್ತ ಪರೀಕ್ಷಾ ಕೇಂದ್ರ ಇದೆ. ವೈದ್ಯರಿಗೆ ಸುಸಜ್ಜಿತ ವಸತಿಗೃಹ ಎಲ್ಲವೂ ಇದೆ. ಆದರೆ, ವೈದ್ಯರು ಮಾತ್ರ ಈ ಆಸ್ಪತ್ರೆಯಲ್ಲಿ ನಿಲ್ಲುತ್ತಿಲ್ಲ. ವರ್ಗಾವಣೆಯಾಗಿ ಬಂದವರು, ಬೆಂಗಳೂರಿನ ಮಟ್ಟದಲ್ಲಿ ರಾಜಕಾರಣಿಗಳಿಗೆ, ಮೇಲಾಧಿಕಾರಿಗಳಿಗೆ ಕೈಬೀಸಿ ಮಾಡಿ ವರ್ಗ ಮಾಡಿಸಿಕೊಂಡು ಹೋಗುತ್ತಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ 95ಲಕ್ಷ ರೂ. ವೆಚ್ಚದಲ್ಲಿ ಅಮ್ಲಜನಕ ಉತ್ಪಾದನಾ ಘಟಕ ಪ್ರಾರಂಭವಾಗಿದೆ. ಈಗ 60 ಲಕ್ಷ ರೂ. ವೆಚ್ಚದಲ್ಲಿ ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್ ಕಾಮಗಾರಿ ಮುಕ್ತಾಯವಾಗಿದ್ದು, ಘಟಕ ಪ್ರಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. 30 ರೋಗಿಗಳಿಗೆ ಏಕಕಾಲದಲ್ಲಿ ಶುದ್ಧ ಆಮ್ಲಜನಕ ಸರಬರಾಜು ಮಾಡಲು ಪೈಪ್‌ಲೈನ್ ಅಳವಡಿಸಲಾಗಿದೆ. ಈಗ 1.60 ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಆಸ್ಪತ್ರೆ ಛಾವಣಿ ರೂಫಿಂಗ್ ಆಗಿದೆ. ಅಪಘಾತ ವಿಭಾಗದ ಕಟ್ಟಡ, ಶೌಚಗೃಹಗಳ ಚರಂಡಿ ದುರಸ್ತಿ ನಡೆಯುತ್ತಿದೆ. ನೆಲಹಾಸು ಹಾಕಲಾಗುತ್ತಿದೆ. ಅಪರೇಷನ್ ಥಿಯೇಟರ್ ನವೀಕರಣಗೊಳಿಸಲಾಗಿದೆ.
ಮಕ್ಕಳ ತಜ್ಞ, ಮೂಳೆತಜ್ಞ, ನೇತ್ರತಜ್ಞ, ರೇಡಿಯಾಲಜಿಸ್ಟ್, ಅರಿವಳಿಕೆ ತಜ್ಞರಿಲ್ಲದೆ, ಶಸ್ತ್ರಚಿಕಿತ್ಸಾ ಘಟಕದ ಸಲಕರಣೆಗಳು ತುಕ್ಕು ಹಿಡಿಯುತ್ತಿವೆ. ಬಡವರು ಕೆಲ ಚಿಕಿತ್ಸೆಗಳಿಗೆ ಮಡಿಕೇರಿ ಜಿಲ್ಲಾಸ್ಪತ್ರೆಯನ್ನು ಅವಲಂಬಿಸಬೇಕಾಗಿದೆ.
ಸರ್ಕಾರಿ ಆಸ್ಪತ್ರೆಗೆ ಮಂಜೂರಾದ ತಜ್ಞ ವೈದ್ಯರ ಹುದ್ದೆಗಳು 15, ಆದರೆ ಈಗ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳ ಸಂಖ್ಯೆ 4 ಮಾತ್ರ. 11 ಹುದ್ದೆಗಳು ಖಾಲಿಯಾಗಿದ್ದು, ವೈದ್ಯರ ಕೊಠಡಿಗಳಿಗೆ ಬೀಗ ಹಾಕಲಾಗಿದೆ.
ಪ್ರಥಮ ದರ್ಜೆ ಸಹಾಯಕರು 2, ಟೈಪಿಸ್ಟ್, ರೆಕಾರ್ಡ್ ಕೀಪರ್, ಶುಶ್ರೂಷಾ ಅಧೀಕ್ಷಕರು 1, ಕಿರಿಯ ಅರೋಗ್ಯ ಸಹಾಯಕಿಯರು 4, ಪ್ರಯೋಗಶಾಲಾ ತಂತ್ರಜ್ಞ, ಜೂನಿಯರ್ ಫಾರ್ಮಸಿಸ್ಟ್, ಎಲೆಕ್ಟ್ರೀಷಿಯನ್, ಇಸಿಜಿ ತಂತ್ರಜ್ಞ, ವಾಹನ ಚಾಲಕ ಇವೆಲ್ಲಾ ಹುದ್ದೆಗಳು ಖಾಲಿ ಬಿದ್ದು ವರ್ಷಗಳೇ ಕಳೆದಿವೆ. ಗ್ರೂಪ್ ಡಿ 48 ಹುದ್ದೆಗಳು ಖಾಲಿ ಇವೆ. ಹೊರಗುತ್ತಿಗೆ ಆಧಾರದಲ್ಲಿ 24 ಜನ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಬಡರೋಗಿಗಳು ತಾಲೂಕು ಆಸ್ಪತ್ರೆಯಲ್ಲಿ ಎಂತಹ ಚಿಕಿತ್ಸೆ ನಿರೀಕ್ಷೆ ಮಾಡಲು ಸಾಧ್ಯ ಎಂಬುದು ಪ್ರಶ್ನೆಯಾಗಿದೆ.
ರೋಗಿಗಳು ವೈದ್ಯರನ್ನು ಭೇಟಿ ಮಾಡಲು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲಬೇಕು. ರೋಗಿಗಳ ಸಂಖ್ಯೆ ಹೆಚ್ಚಾದಂತೆ, ಇರುವ ವೈದ್ಯರು ಒತ್ತಡದಲ್ಲೇ ಕೆಲಸ ಮಾಡಬೇಕಾದ ಅನಿವಾರ್ಯತೆಯೂ ಇದೆ. ಕೆಲವೊಮ್ಮೆ ನರ್ಸ್‌ಗಳೇ ರೋಗಿಗಳನ್ನು ಸಂಭಾಳಿಸಬೇಕಾಗಿದೆ. ಒಟ್ಟಿನಲ್ಲಿ ಸುಸಜ್ಜಿತ ಕಟ್ಟಡ, ಅಗತ್ಯ ಸಲಕರಣೆ, ಯಂತ್ರೋಪಕರಣ ಇದ್ದರೂ ಅಗತ್ಯ ಸಿಬ್ಬಂದಿ, ವೈದ್ಯರು ಇಲ್ಲದೆ ಜನರು ತಾಲೂಕು ಸಾರ್ವಜನಿಕ ಆಸ್ಪತ್ರೆಯಿಂದ ದೂರವಾಗುತ್ತಿದ್ದಾರೆ.