

ಶಿಡ್ಲಘಟ್ಟ: ತಾಲೂಕಿನ ಜಂಗಮಕೋಟೆ ಬಳಿ ಕೈಗಾರಿಕಾ ಪ್ರದೇಶ ನಿರ್ಮಾಣ ಮಾಡಲು 2,863 ಎಕರೆ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಗುರುತಿಸಿದ್ದು, ಭೂಸ್ವಾಧೀನಕ್ಕೆ ರೈತರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿ
ವ್ಯಾಪ್ತಿಯಲ್ಲಿ ಕೆಐಎಡಿಬಿಯಿಂದ ಉದ್ದೇಶಿತ ಕೈಗಾರಿಕಾ ಪ್ರದೇಶ ಯೋಜನೆಯ ಅನುಷ್ಠಾನದಲ್ಲಿ ಉಂಟಾಗಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಜಂಗಮಕೋಟೆಯ ಜ್ಯೋತಿ ಶಾಲೆ ಅವರಣದಲ್ಲಿ ಶುಕ್ರವಾರ ರೈತರೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿದರು.
ಜಂಗಮಕೋಟೆ ಹೋಬಳಿ ಪ್ರದೇಶದಲ್ಲಿ 500ಕ್ಕೂ ಹೆಚ್ಚು ಎಕರೆ ಸರ್ಕಾರಿ ಭೂಮಿ ಸೇರಿ ಒಟ್ಟು 2,863 ಎಕರೆ ಜಾಗವನ್ನು ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಗುರುತಿಸಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಸಮೀಪವಿರುವ ಜಂಗಮಕೋಟೆ ಹೋಬಳಿ ಪ್ರದೇಶದ ವ್ಯಾಪ್ತಿಯಲ್ಲಿ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸಿದ್ದೇ ಆದಲ್ಲಿ ಹೂಡಿಕೆದಾರರು ಈ ಭಾಗಕ್ಕೆ ಹೆಚ್ಚಾಗಿ ಬರುವ ನಿರೀಕ್ಷೆ ಇದೆ. ತೆಗೆ ಈ ಭಾಗದ ಜನರಿಗೆ ಅನುಕೂಲವಾಗುವಂತೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಹಲವು ಉದ್ಯೋಗಗಳು ಸೃಷ್ಟಿಯಾಗಲಿವೆ. ಇದು ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಪೂರಕವಾಗಲಿದೆ ಎಂದರು.
ಬಲವಂತ ಮತ್ತು ಒತ್ತಡವಿಲ್ಲ: ಭೂಸ್ವಾಧೀನ ವಿಚಾರದಲ್ಲಿ ಯಾವುದೇ ಬಲವಂತ ಮತ್ತು ಒತ್ತಡದ ಪ್ರಶ್ನೆಯೇ ಇಲ್ಲ. ರೈತರು ತಮ್ಮ ಭವಿಷ್ಯ ಮತ್ತು ಜಿಲ್ಲೆಯ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಕೈಗಾರಿಕಾ ಪ್ರದೇಶಾಭಿವೃದ್ಧಿಗೆ ಸ್ವಯಂಪ್ರೇರಿತರಾಗಿ ಭೂಮಿ ನೀಡಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲಿದ್ದಾರೆ. ಎಲ್ಲ ರೈತರನ್ನೂ ಮತ್ತು ಭೂಮಿ ಹಕ್ಕುದಾರರನ್ನು ವಿಶ್ವಾಸಕ್ಕೆ ಪಡೆದುಕೊಂಡೇ ಸರ್ಕಾರ ಮುಂದಿನ ಹೆಜ್ಜೆ ಇಡಲಿದೆ. ಸಾಧಕ ಬಾಧಕಗಳನ್ನೂ ರೈತರ ಮುಂದಿಡಲಾಗಿದ್ದು, ಇಂದಿನ ಸಭೆಯಲ್ಲಿ ಭೂಮಿ ನೀಡುವವರು ಬಿಳಿ ಹಾಳೆಯ ಮೇಲೆ ಹಾಗೂ ಅದಕ್ಕೆ ಒಪ್ಪಿಗೆ ಇಲ್ಲದವರು ಕೆಂಪು ಹಾಳೆ ಮೇಲೆ ಬರೆದು ಸಹಿ ಹಾಕಿಕೊಟ್ಟಿದ್ದಾರೆ. ಈ ಎಲ್ಲವನ್ನೂ ಸರ್ಕಾರ ಪರಿಶೀಲಿಸಲಿದ್ದು, ಹೆಚ್ಚಿನ ರೈತರು ಯಾವ ಅಭಿಪ್ರಾಯ ವ್ಯಕ್ತಪಡಿಸುತ್ತಾರೋ ಅದರಂತೆ ಕ್ರಮ ವಹಿಸಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳೂ ಪಾರದರ್ಶಕವಾಗಿ ನಡೆಯಲಿವೆ ಎಂದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎನ್.ರವಿಕುಮಾರ್, ಕೆಐಎಡಿಬಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಹೇಶ್, ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ತಹಸೀಲ್ದಾರ್ ಬಿ.ಎನ್. ಸ್ವಾಮಿ, ತಾಪಂ ಇಒ ಹೇಮಾವತಿ ಹಾಗೂ ರೈತ ಸಂಘಟನೆಗಳ ಮುಖಂಡರು ಹಾಜರಿದ್ದರು.
ಕೆಲವರಿಂದ ಸಕಾರಾತ್ಮಕ ಸ್ಪಂದನೆ
ಈಗಾಗಲೇ ಸ್ವಯಂಪ್ರೇರಿತರಾಗಿ ಭೂಮಿ ನೀಡಿ ಅಭಿವೃದ್ಧಿಗೆ ಸಹಕರಿಸುವಂತೆ ರೈತರಿಗೆ ಮನವಿ ಮಾಡಿ ಮನವೊಲಿಸುವ ಪ್ರಯತ್ನಗಳು ನಡೆದಿವೆ. ಆದರೆ, ರೈತರ ನಿರ್ಧಾರವೇ ಅಂತಿಮವಾಗಿದ್ದು, ಕೆಲವು ರೈತರು ಭೂಮಿ ನೀಡಲು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಇನ್ನು ಹಲವು ರೈತರು ಭೂಮಿ ನೀಡುವುದಿಲ್ಲ. ಜೀವನೋಪಾಯ ಹಾಗೂ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಭೂಮಿಯನ್ನು ಬಿಟ್ಟುಕೊಡಲು ಆಗುವುದಿಲ್ಲವೆಂಬ ಅಭಿಪ್ರಾಯ ಮುಂದಿಟ್ಟಿದ್ದಾರೆ. ಈ ಭಾಗದ ಭೂಸ್ವಾಧೀನ ವಿಚಾರವಾಗಿ ಸರ್ಕಾರ ಎಲ್ಲಾ ಆಯಾಮಗಳಿಂದಲೂ ಪರಿಶೀಲಿಸಿ ರೈತರಿಗೆ ತೊಂದರೆಯಾಗದಂತೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.
ಅಭಿವೃದ್ಧಿಗೆ ಪೂರಕ
ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಕೈಗಾರಿಕಾ ಪ್ರದೇಶಾಭಿವೃದ್ಧಿಯೂ ಮುಖ್ಯವಾಗಿದೆ. ಕೈಗಾರಿಕೆಗೆ ಭೂಮಿ ನೀಡುವುದರಿಂದ ರೈತರಿಗೆ ಆರ್ಥಿಕವಾಗಿ ದೊರೆಯುವ ಪ್ರಯೋಜನಗಳ ತೆಗೆ, ಅವರ ಕುಟುಂಬದ ಸದಸ್ಯರೊಬ್ಬರಿಗೆ ಉದ್ದೇಶಿತ ಕೈಗಾರಿಕೆಗಳಲ್ಲಿ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ನೀಡುವ ವಿಚಾರವನ್ನೂ ಮುಂದಿಡಲಾಗಿದೆ. ಅಂತಿಮವಾಗಿ ತೀರ್ಮಾನ ಅವರಿಗೇ ಬಿಡಲಾಗಿದೆ. ಈಗಾಗಲೇ ಈ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳು ಪ್ರವೇಶಿಸಿ ರೈತರನ್ನು ದಿಕ್ಕುತಪ್ಪಿಸಿ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸರ್ಕಾರ ಮುಂದಿನ ಹೆಜ್ಜೆ ಇಡಲಿದೆ. ಭೂಮಿಯ ಅಧಿಕೃತ ಮಾಲೀಕರನ್ನು ಗುರುತಿಸಿ ಹಂತ ಹಂತವಾಗಿ ಸಭೆಗಳನ್ನು ನಡೆಸಿ ಚರ್ಚಿಸಿ ಮುಕ್ತ ಅಭಿಪ್ರಾಯ ಪಡೆಯಲಾಗುತ್ತಿದೆ ಎಂದು ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದರು.