

ಅಧಿಕಾರ ಸೂತ್ರ ನಾಲ್ವರ ಮಧ್ಯೆ ಚರ್ಚೆ : ನನಗೇನು ಗೊತ್ತಿಲ್ಲ ಎಂದ ಸಚಿವ ಪ್ರಿಯಾಂಕ್ ಖರ್ಗೆ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಸಚಿವ ಸಂಪುಟ ಪುನಾರಚನೆಯಾಗಲಿ ಅಥವಾ ಮುಖ್ಯಮಂತ್ರಿ ಬದಲಾವಣೆ ಸದ್ಯಕ್ಕೆ ಆಗಲ್ಲ. ಇಂಥ ಯಾವುದೇ ಪ್ರಕ್ರಿಯೆ ನಡೆದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.
ಸಂಪುಟ ಪುನಾರಚನೆ ಬಗ್ಗೆ ನಿರ್ಧರಿಸುವವರು ಸಿಎಂ ಮತ್ತು ಹೈಕಮಾಂಡ್. ಸಿಎಂ ಮತ್ತು ಡಿಸಿಎಂ ದೆಹಲಿಗೆ ಹೋದಾಗ ಹೈಕಮಾಂಡ್ ಭೇಟಿ ಮಾಡುವುದು ಸಹಜ ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ಹೇಳಿದರು.
ಸಿದ್ದರಾಮಯ್ಯ ಐದು ವರ್ಷ ಸಿಎಂ ಅಗಿರಲ್ಲ ಎಂಬ ಸಿಎಂ ಸಲಹೆಗಾರ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ಸಿಎಂ-ಡಿಸಿಎA ಅಧಿಕಾರ ಸೂತ್ರ ಕುರಿತು ವರಿಷ್ಠರಾದ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್ ಈ ನಾಲ್ವರ ಮಧ್ಯೆ ಮಾತ್ರ ಚರ್ಚೆಯಾಗಿದೆ ಹೊರತು, ಮತ್ತಾರಿಗೂ ಏನು ಚರ್ಚೆಯಾಗಿದೆ ಎಂಬುದು ಗೊತ್ತಿಲ್ಲ. ಅಧಿಕಾರ ಸೂತ್ರ ಹಂಚಿಕೆ ಬಗ್ಗೆ ನನಗೇನೂ ಗೊತ್ತಿಲ್ಲ ಎಂದರು.
ಸರ್ಕಾರ ರಚನೆ ಹೊತ್ತಿನಲ್ಲಿ ಏನೇನು ಮಾತುಕತೆಯಾಗಿದೆ ಎಂಬುದು ಆ ನಾಲ್ವರಿಗೆ ಮಾತ್ರ ಗೊತ್ತಿದೆ. ಮುಖ್ಯಮಂತ್ರಿ ಆಯ್ಕೆ ವಿಷಯದಲ್ಲಿ ಹೈಕಮಾಂಡ್ ನಿರ್ಧಾರ ಕೈಗೊಂಡಿದೆ. ಈಗಲೂ ಆ ವಿಷಯದಲ್ಲಿ ವರಿಷ್ಠರ ನಿರ್ಧಾರವೇ ಅಂತಿಮ. ಇಂಥವರೇ ಸಿಎಂ ಎಂದರೆ ಆಯ್ತು ಎನ್ನುವ ಮೂಲಕ ಗುಟ್ಟು ಬಿಟ್ಟುಕೊಡಲಿಲ್ಲ. ಜಾರ್ಖಂಡ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಿಎಂ ಹಾಗೂ ಡಿಸಿಎಂ ದೆಹಲಿಗೆ ಹೋಗಿದ್ದರಿಂದ ವರಿಷ್ಠರ ಭೇಟಿ ಮಾಡಿದ್ದಾರೆ. ಸಂಸದೆ ಪ್ರಿಯಾಂಕಾ ಗಾಂಧಿ ಅವರಿಗೂ ಶುಭ ಕೋರಿದ್ದಾರೆ. ದೆಹಲಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎನ್ನುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದರು.
ಎಥಿಕಲ್ ಹ್ಯಾಕ್‌ಥಾನ್ ಮಾಡುವ ಅಗತ್ಯ
ಇವಿಎಂ ಬಗ್ಗೆ ಜನರಲ್ಲಿ ಇನ್ನೂ ಅನುಮಾನವಿದ್ದು, ಸಂಪೂರ್ಣ ಹೋಗಲಾಡಿಸಲು ಎಥಿಕಲ್ ಹ್ಯಾಕ್‌ಥಾನ್ ಮಾಡುವ ಅಗತ್ಯವಿದೆ. ಚಲಾವಣೆಯಾದ ಮತ್ತು ಮತಯಂತ್ರ ತೋರಿಸುವ ಮತಗಳಲ್ಲಿ ವ್ಯತ್ಯಾಸ ಕಂಡು ಬರುತ್ತಲೇ ಇದೆ. ಇಷ್ಟಕ್ಕೂ ಅದೊಂದು ಸಾಫ್ಟ್ವೇರ್, ದೋಷದ ಬಗ್ಗೆ ವೈಜ್ಞಾನಿಕವಾಗಿ ಚರ್ಚೆ ಆಗಲಿ. ಅದನ್ನು ಬಿಟ್ಟು ಇಲ್ಲದ್ದನ್ನು ಮಾತನಾಡುವುದನ್ನು ಬಿಜೆಪಿಯವರು ನಿಲ್ಲಿಸಲಿ. ಹಿಂದೆ ಮೋದಿಯವರೇ ಗುಜರಾತ್ ಸಿಎಂ ಆಗಿದ್ದಾಗ ಇತರ ಬಿಜೆಪಿ ನಾಯಕರು ಇವಿಎಂ ಬಗ್ಗೆ ಮಾತನಾಡಿದ್ದು ಮರೆತಿರುವಂತಿದೆ.
| ಪ್ರಿಯಾಂಕ್ ಖರ್ಗೆ
ಜಿಲ್ಲಾ ಉಸ್ತುವಾರಿ ಸಚಿವ
ಸಂಸ್ಕೃತಿ ಉತ್ಸವದಲ್ಲಿ ಭಾಗಿಯಾಗಲ್ಲ
ನೆಟೆ ರೋಗವಲ್ಲ, ತೇವಾಂಶ ಕೊರತೆಯಿಂದ ಜಿಲ್ಲೆಯಲ್ಲಿ ತೊಗರಿ ಬೆಳೆಯಲ್ಲಿ ಏರುಪೇರಾಗಿದೆ ಎನ್ನಲಾಗುತ್ತಿದೆ. ಪರಿಶೀಲಿಸಲು ರಾಯಚೂರು ಕೃಷಿ ವಿವಿಗೆ ತಿಳಿಸಿದ್ದು, ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ. ಬೆಳೆ ವಿಮೆ ನೀಡುವಂತೆ ಸೂಚಿಸಲಾಗಿದೆ. ಚಿಂಚೋಳಿ ಸಿದ್ಧಸಿರಿ ಎಥೆನಾಲ್ ಕಾರ್ಖಾನೆಯವರು ರಸ್ತೆಯಲ್ಲಿ ಹೇಳುವುದನ್ನು ಬಿಟ್ಟು ಕೋರ್ಟ್ ಎದುರು ದಾಖಲೆ ಇಡಬೇಕು ಎಂದ ಸಚಿವ ಪ್ರಿಯಾಂಕ್ ಖರ್ಗೆ, ಸೇಡಂನಲ್ಲಿ ನಡೆಯಲಿರುವ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಭಾಗಿ ಸಾಧ್ಯವೇ ಇಲ್ಲ. ಅಧಿಕೃತ ಆಹ್ವಾನ ನೀಡಿಲ್ಲ. ನನ್ನ ಹೆಸರು ಕೇಳಿ ಹಾಕಿಲ್ಲ ಎಂದರು.
ಅಲ್ಲೇ ವಿಜಯೇಂದ್ರ ಹಟಾವೋ
ಬಿಜೆಪಿಯಿಂದ ವಕ್ಫ್ ಕುರಿತು ಇನ್ನೂ ಮೂರ್ನಾಲ್ಕು ತಂಡಗಳು ಜಿಲ್ಲೆ ಸೇರಿ ರಾಜ್ಯಾದ್ಯಂತ ಸಂಚರಿಸಲಿವೆ. ಆದರೆ ಕಮಲ ಚಿಹ್ನೆ ಹಾಕಿಕೊಂಡು ಪ್ರತಿಭಟಿಸುವ ಯತ್ನಾಳ್ ಅವರು ರಾಜ್ಯಾಧ್ಯಕ್ಷರ ಚಿತ್ರವೇ ಬಳಸಲ್ಲ. ವಿಜಯೇಂದ್ರ ಹಟಾವೋ ಅಭಿಯಾನ ಅಲ್ಲೇ ನಡೆದಿದೆ. ಅವನಿಂದ ಸಾಧ್ಯವಿಲ್ಲ ಎಂದು ಏಕವಚನದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಪ್ರಿಯಾಂಕ್ ಹೇಳಿದರು.
=====