ಪಂಚಗಂಗಾ ರೈಲು ಸಂಚಾರ ವೇಳಾಪಟ್ಟಿ ಬದಲಾವಣೆ ಬೇಡ

Indian-Railway-Canceled-30-Train
Published on

ಕುಂದಾಪುರ: ಕರಾವಳಿ ಕರ್ನಾಟಕದ ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿಗೆ ಬೇಡಿಕೆಯಂತೆ ಹೆಚ್ಚುವರಿ ಕೋಚ್‌ಗಳನ್ನು ಅಳವಡಿಕೆ ಮಾಡಲಾಗಿದೆ. ರೈಲು ಸಂಚಾರದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಬಾರದೆಂಬ ಆಗ್ರಹ ಕೇಳಿಬಂದಿದೆ. ರೈಲಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡದೆ ಹೆಚ್ಚುವರಿ ಕೋಚ್ ಅಳವಡಿಸಬೇಕೆಂಬ ಬೇಡಿಕೆ ಇಡುತ್ತಲೇ ಬಂದಿದ್ದ ಉತ್ತರ ಕನ್ನಡ ರೈಲು ಬಳಕೆದಾರರ ಸಮಿತಿ ಹಾಗೂ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಮನವಿಗೆ ನೈಋತ್ಯ ರೈಲ್ವೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಬುಧವಾರದಿಂದ ಸಂಚರಿಸುತ್ತಿರುವ ಪಂಚಗಂಗಾ ರೈಲಿಗೆ ಹೆಚ್ಚುವರಿ 5 ಕೋಚ್ ಅಳವಡಿಸಲಾಗಿದ್ದು 400 ಹೆಚ್ಚುವರಿ ಸೀಟ್‌ಗಳು ಲಭ್ಯವಾಗಿವೆ. ಕಾರವಾರ-ಯಶವಂತಪುರ ರೈಲನ್ನು 6 ತಿಂಗಳು ರದ್ದು ಮಾಡಿರುವುದರಿಂದ ಪರ್ಯಾಯ ಸಾರಿಗೆ ವ್ಯವಸ್ಥೆ ಬೇಕು ಎಂದು ಆಗ್ರಹಿಸಿ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕುಮಟಾ ಶಾಸಕ ದಿನಕಕ ಶೆಟ್ಟಿ ಹೊಸ ರೈಲಿಗೆ ಬೇಡಿಕೆಯಿಟ್ಟಿದ್ದರು. ಹೊಸ ರೈಲಿನ ಬದಲು ಪ್ರಸ್ತುತ ಸಂಚರಿಸುತ್ತಿರುವ ಪಂಚಗಂಗಾ ರೈಲಿಗೆ ಹೆಚ್ಚುವರಿ ಕೋಚ್ ಅಳವಡಿಸಲು ಇಲಾಖೆ ನಿರ್ಧರಿಸಿತ್ತು.

ವೇಳಾಪಟ್ಟಿ ಬದಲಾವಣೆ ಬೇಡ

ಹೆಚ್ಚುವರಿ ಬೋಗಿ ಅಳವಡಿಕೆಯಿಂದ ಪ್ರಯಾಣಿಕರಿಗೆ ಅನುಕೂಲವಾಗಿದೆ. ವೇಳಾಪಟ್ಟಿ ಬದಲಾವಣೆ ಮಾಡಿದರೆ ಬೆಂಗಳೂರು ಅಥವಾ ಕಾರವಾರ ತಲುಪ ಸಮಯದಲ್ಲಿ ವ್ಯತ್ಯಾಸವಾಗುತ್ತದೆ. ಹಾಗಾಗಿ ವೇಳಾಪಟ್ಟಿ ಬದಲಾವಣೆ ಮಾಡದೆ ರೈಲಿನ ವೇಗವನ್ನು ಹೆಚ್ಚಿಸಿ ಪ್ರಯಾಣಿಕರು ಕ್ಲಪ್ತ ಸಮಯಕ್ಕೆ ತಲುಪುವಂತೆ ನೈಋತ್ಯ ರೈಲ್ವೆ ಕ್ರಮ ಕೈಗೊಳ್ಳಬೇಕು ಎಂದು ರೈಲು ಹೋರಾಟ ಸಂಘಟನೆಗಳು ಒತ್ತಾಯಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net