

ಹೆಬ್ರಿ: ಹಿರಿಯಡಕ- ಪೆರ್ಡೂರು- ಹೆಬ್ರಿ ರಾಷ್ಟ್ರೀಯ ಹೆದ್ದಾರಿ 1609ಎ ಕಾಮಗಾರಿ ಪ್ರಗತಿಯಲ್ಲಿದ್ದು, ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಇಲಾಖಾಧಿಕಾರಿಗಳೊಂದಿಗೆ ಕೊಡಿಬೆಟ್ಟು, ಹಿರಿಯಡಕ, ಪೆರ್ಡೂರು ಭಾಗದಲ್ಲಿ ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲಿಸಿದರು.
ಬಳಿ ಮಾತನಾಡಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕೆಲದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಅಸಮರ್ಪಕ ಚರಂಡಿಯಿಂದ ಮನೆಗಳಿಗೆ ನೀರು ನುಗ್ಗಿದೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥಿತವಾದ ಚರಂಡಿಯನ್ನು ತಕ್ಷಣವೇ ನಿರ್ಮಿಸಬೇಕು. ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಕಿರುರಸ್ತೆಗಳು ಹಾಳಾಗಿದ್ದು ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಕೂಡಲೇ ದುರಸ್ತಿ ಮಾಡಬೇಕು ಎಂದು ಸೂಚಿಸಿದರು.
ಕೊಡಿಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂದೀಪ್ ಮಡಿವಾಳ, ಉಪಾಧ್ಯಕ್ಷೆ ಇಂದಿರಾ ಕೆ., ಪೆರ್ಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೇತನಾ ಶೆಟ್ಟಿ, ಉಪಾಧ್ಯಕ್ಷ ದೇವು ಪೂಜಾರಿ, ಬೊಮ್ಮರಬೆಟ್ಟು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹರೀಶ್ ಸಾಲಿಯಾನ್, ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಮಂಜುನಾಥ್ ನಾಯಕ್, ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.