ಕುಮಟಾ ಕಾಂಗ್ರೆಸ್‌ ಟಿಕೆಟ್‌ ಘೋಷಣೆ-ಭುಗಿಲೆದ್ದ ಅಸಮಾಧಾನ

Nivedit-Alva-Standing
Published on

ಕಾರವಾರ: ಕಾಂಗ್ರೆಸ್‌ ಪಕ್ಷದ ಕುಮಟಾ ಕ್ಷೇತ್ರದ ಟಿಕೆಟ್‌ ಕೊನೆಗೂ ಘೋಷಣೆಯಾಗಿದೆ.

ಶನಿವಾರ ಬಿಡುಗಡೆಯಾದ ಕಾಂಗ್ರೆಸ್ ಮೂರನೇ ಪಟ್ಟಿಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಿವೇದಿತ ಆಳ್ವಾ ಅವರ ಹೆಸರು ಬಂದಿದೆ. ಜತೆಗೆ ಅಸಮಾಧಾನ ಭುಗಿಲೆದಿದ್ದಿದೆ.
ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಿ ಅತ್ಯಧಿಕ ಆಕಾಂಕ್ಷಿಗಳಿರುವ ಕ್ಷೇತ್ರವಾಗಿ ಕುಮಟಾ ಗುರುತಿಸಿಕೊಂಡಿತ್ತು. ಮಾಜಿ ಶಾಸಕಿ ಶಾರದಾ ಶೆಟ್ಟಿ ಸೇರಿ, ಜಿಪಂ ಸದಸ್ಯರು, ಪಕ್ಷದ ಹಿರಿಯ ಮುಖಂಡರು ಸೇರಿ ಒಟ್ಟು 13 ಜನ ಟಿಕೆಟ್ ಬಯಸಿ ಕೆಪಿಸಿಗೆ ಅರ್ಜಿ ಸಲ್ಲಿಸಿದ್ದರು.

ಎಲ್ಲರೂ ಟಿಕೆಟ್‌ಗಾಗಿ ಲಾಬಿ ಮಾಡುತ್ತಿದ್ದರು. ಕಾಂಗ್ರೆಸ್ ನೆಲೆ ಹೊಂದಿರುವ ಕ್ಷೇತ್ರವಾಗಿರುವುದರಿಂದ ಕೆಪಿಸಿಸಿ ಅಳೆದು, ತೂಗಿ ನೋಡಿತ್ತು. 13 ಜನರನ್ನು ಬಿಟ್ಟು 14 ನೇ ವ್ಯಕ್ತಿಗೆ ಮಣೆ ಹಾಕಿದೆ.
ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಅವರ ಪುತ್ರ ನಿವೇದಿತ ಆಳ್ವಾ. ಮೆಡಿಟೆಕ್ ಎಂಬ ಟಿವಿ ಕಾರ್ಯಕ್ರಮ ನಿರ್ಮಾಣ ಸಂಸ್ಥೆಯ ಎಂಡಿಯಾಗಿದ್ದಾರೆ.

ತಾಯಿ ಮಾರ್ಗರೇಟ್ ಆಳ್ವಾ ಉತ್ತರ ಕನ್ನಡದ ಸಂಸದರಾಗಿದ್ದರು. ಅವರ ಸಂಪರ್ಕದ ಹಿನ್ನೆಲೆಯಲ್ಲೇ ನಿವೇದಿತ್ ಉತ್ತರ ಕನ್ನಡದ ರಾಜಕೀಯಕ್ಕೆ ಬಂದಿದ್ದರು.

ಸಿದ್ದರಾಮಯ್ಯ ಸರ್ಕಾರದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಸದ್ಯ ಅವರು ಕೆಪಿಸಿಸಿ ವಕ್ತಾರರಾಗಿ, ಎಐಸಿಸಿ ಸದಸ್ಯರಾಗಿದ್ದಾರೆ. ಪಕ್ಷದಲ್ಲಿ ಹಲವು ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ.

ಶಿರಸಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು ಕ್ಷೇತ್ರದಲ್ಲಿ ಕೆಲವು ಸೇತುವೆಗಳನ್ನು ನಿರ್ಮಿಸಿದ್ದರು. ಕ್ಷೇತ್ರದಲ್ಲಿ  ಓಡಾಟ ನಡೆಸಿದ್ದರು. ಆದರೆ, ನಂತರ ಪಕ್ಷದ ವರಿಷ್ಠರ ಸೂಚನೆಯ ಮೇರೆಗೆ ಎರಡು ತಿಂಗಳ ಹಿಂದೆ ಕುಮಟಾಕ್ಕೆ ಶಿಫ್ಟ್ ಆಗಿದ್ದರು.

ನಿವೇದಿತ್ ಬರುತ್ತಾರೆ ಎಂದು ಸುಳಿವು ತಿಳಿದಾಗ ಕುಮಟಾದಲ್ಲಿ ಮೊದಲೇ ಟಿಕೆಟ್‌ಗಾಗಿ ಚಾಪೆ ಹಾಸಿ ಕುಳಿತಿದ್ದ ಆಕಾಂಕ್ಷಿಗಳಿಂದ ಭಾರಿ ವಿರೋಧ ವ್ಯಕ್ತವಾಗಿತ್ತು.

ಗೋ ಬ್ಯಾಕ್ ನಿವೇದಿತ್ ಆಳ್ವಾ ಎಂದು ಹ್ಯಾಶ್ ಟ್ಯಾಗ್ ಅಭಿಯಾನ ಆರಂಭಿಸಿದ್ದರು. ಎಲ್ಲರನ್ನೂ ವೈಯಕ್ತಿಕವಾಗಿ ಭೇಟಿಯಾದ ನಿವೇದಿತ್ ಬೆಂಬಲ ಕೋರಿದ್ದರು. ಸದ್ಯ ಒಂದಿಬ್ಬರನ್ನು ಬಿಟ್ಟು ಉಳಿದೆಲ್ಲರೂ ನಿವೇದಿತ್ ಜತೆ ಸೇರಿಕೊಂಡಿದ್ದಾರೆ.

ತ್ರಿಕೋನ ಸ್ಪರ್ಧೆ

ಬಿಜೆಪಿ ಯಿಂದ ಹಾಲಿ ಶಾಸಕ ದಿನಕರ ಶೆಟ್ಟಿ, ಜೆಡಿಎಸ್‌ನಿಂದ ಸೂರಜ್ ನಾಯ್ಕ ಸೋನಿ ಅವರ ಹೆಸರು ಈಗಾಗಲೇ ಘೋಷಣೆಯಾಗಿದೆ. ಈಗ ಕಾಂಗ್ರೆಸ್ ಟಿಕೆಟ್ ಕೂಡ ಅಂತಿಮವಾಗಿದ್ದರಿಂದ ತ್ರಿಕೋನ ಸ್ಪರ್ಧೆ ಖಚಿತವಾಗಿದೆ. ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಟ್ಟಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಕಣ್ಣೀರು ಹಾಕಿದ ಶಾರದಾ

ಟಿಕೆಟ್ ಕೈ ತಪ್ಪುತ್ತಿದ್ದಂತೆ `ವಿಜಯವಾಣಿ, ದಿಗ್ವಿಜಯ ನ್ಯೂಸ್' ಜತೆ ದೂರವಾಣಿ ಮೂಲಕ ಪ್ರತಿಕ್ರಿಯಿಸಿರುವ ಶಾರದಾ ಶೆಟ್ಟಿ ಕಣ್ಣೀರು ಹಾಕಿದ್ದಾರೆ.

`ಕೊನೆಯ ಅವಧಿಗೆ ನನ್ನ ಸ್ಪರ್ಧೆಗೆ ಅವಕಾಶ ನೀಡಿ ಎಂದು ವರಿಷ್ಠರ ಬಳಿ ಕೇಳಿಕೊಂಡಿದ್ದೆ. ಆದರೆ, ಮೇಲ್ಮಟ್ಟದಲ್ಲೇ ನನ್ ವಿರುದ್ಧ ಷಡ್ಯಂತ್ರ ನಡೆದಿತ್ತು. ಪಕ್ಷ ನನಗೆ ಅನ್ಯಾಯ ಮಾಡಿದೆ' ಎಂದು ಬೇಸರ ವ್ಯಕ್ತಪಡಿಸಿದರು.

ನನ್ನ ಪತಿ ದಿ.ಮೋಹನ ಶೆಟ್ಟಿ ಅವರ ಕಾಲದಿಂದ 25 ವರ್ಷಗಳಿಂದ ಕಾಂಗ್ರೆಸನ್ನು ಕಟ್ಟಿ ಬೆಳೆಸಿಕೊಂಡು ಬಂದಿದ್ದೇವೆ. ನನಗೂ ಒಂದು ಅವಧಿಗೆ ಅವಕಾಶ ಸಿಕ್ಕಿತ್ತು.

ಕಳೆದ ಅವಧಿಯಲ್ಲಿ ಪರೇಶ ಮೇಸ್ತ ಸಾವಿನ ವಿಚಾರವನ್ನಿಟ್ಟು ಬಿಜೆಪಿ ಅಪ ಪ್ರಚಾರ ನಡೆಸಿದ್ದು, ನನ್ನ ಸೋಲಿಗೆ ಕಾರಣವಾಯಿತು. ಆದರೆ, ಸೋಲಿನ ನಂತರವೂ ನಾನು ಪಕ್ಷ ಸಂಘಟನೆಯಿಂದ, ಜನಸಂಪರ್ಕದಿಂದ ದೂರವಾಗಿಲ್ಲ.

ನನಗೇ ಟಿಕೆಟ್ ಸಿಗಲಿದೆ ಎಂದು ಕೊನೆಯ ಕ್ಷಣದವರೆಗೂ ಕಾದೆ. ಆದರೆ, ಪಕ್ಷ ನನ್ನನ್ನು ನಡೆಸಿಕೊಂಡಿದ್ದು ನೋಡಿ ಬೇಸರವಾಗಿದೆ. ಇನ್ನೆರಡು ದಿನದಲ್ಲಿ ಕಾರ್ಯಕರ್ತರ ಸಭೆ ನಡೆಸಿ, ನನ್ನ ಮುಂದಿನ ನಡೆ ನಿರ್ಧರಿಸಲಿದ್ದೇನೆ ಎಂದು ತಿಳಿಸಿದರು.

ರಾಜೀನಾಮೆ:

ಕುಮಟಾ ವಿಧಾನಸಭಾ ಕ್ಷೇತ್ರದ ಪ್ರಮುಖ ಟಿಕೆಟ್ ಆಕಾಂಕ್ಷಿಯಾಗಿದ್ದ ಉತ್ತರ ಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಕಿಸಾನ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸಚಿನ್ ಮಿಗಾ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ.

ಈ ಹಿಂದೆ ಕಿಸಾನ್ ಕಾಂಗ್ರೆಸ್ ಸಮಿತಿಗೆ ನನ್ನನ್ನು ನೇಮಕ ಮಾಡಿದ್ದೀರಿ. ಕಿಸಾನ್ ಘಟಕವನ್ನು ಉತ್ತಮವಾಗಿ ನಡೆಸಿದ್ದಲ್ಲದೆ, ತಾವು ಹೇಳಿದಂತೆ ಎಲ್ಲ ಕಾರ್ಯಗಳನ್ನು ಸಮರ್ಥವಾಗಿ ನೆರವೇರಿಸಿದ್ದೇನೆ ಎಂಬ ತೃಪ್ತಿ ನನಗಿದೆ.

ಆದರೆ, ಇತ್ತೀಚಿನ ಬೆಳವಣಿಗೆಗಳಿಂದ ನನ್ನ ಮನಸ್ಸಿಗೆ ನೋವಾಗಿದೆ. ಕಾಂಗ್ರೆಸ್ ಬಿ ಫಾರ್ಮ್ಗೆ ನನ್ನನ್ನೂ ಸೇರಿ ಹಲವರು ಅರ್ಜಿ ಸಲ್ಲಿಸಿದ್ದರು. ಪಕ್ಷ ಸಂಘಟನೆಗೆ ಎಲ್ಲರೂ ದುಡಿದಿದ್ದರು.

ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿ, ಸ್ಥಳೀಯರನ್ನು ನಿರ್ಲಕ್ಷಿಸಿ, ಹೊರಗಿನವರಾದ ನಿವೇದಿತ ಆಳ್ವಾ ಅವರಿಗೆ ಬಿ ಫಾರ್ಮ್ ನೀಡಿರುವುದು ನನ್ನ ಮನಸ್ಸಿಗೆ ತೀರಾ ನೋವಾಗಿದೆ.

ಅನೇಕ ಕಾರ್ಯಕರ್ತರು ಇದನ್ನು ಪ್ರತಿಭಟಿಸಿದ್ದಾರೆ. ಇದರಿಂದ ಇನ್ನು ಕಿಸಾನ್ ಕಾಂಗ್ರೆಸ್ ಘಟಕದಲ್ಲಿ ಕಾರ್ಯನಿರ್ವಹಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಮಗನ ಗೆಲ್ಲಿಸಲು ಕಣಕ್ಕಿಳಿದ ತಾಯಿ


ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ತಮ್ಮ ಮನಗನ್ನು ಗೆಲ್ಲಿಸಲು ಅಖಾಡಕ್ಕೆ ಇಳಿದಿದ್ದಾರೆ. ನಿವೇದಿತ ಆಳ್ವಾ ಮೊರಬಾದಲ್ಲಿ ಮನೆಯೊಂದನ್ನು ಪಡೆದಿದ್ದು, ಮಾರ್ಗರೇಟ್ ಕೂಡ ಅಲ್ಲೇ ಬಂದು ವಾಸ್ತವ್ಯ ಹೂಡಿದ್ದಾರೆ.

ಶುಕ್ರವಾರ ಮಾರ್ಗರೇಟ್ ಅವರ ಹುಟ್ಟಿದ ಹಬ್ಬವನ್ನು ಮೊರಬಾ ನಿವಾಸಲ್ಲೇ ನಡೆಸಲಾಯಿತು. ತಮ್ಮ ಹಿಂದಿನ ಸಂಪರ್ಕದ ಆಧಾರದ ಮೇಲೆ ಅವರು ಮತ್ತೆ ಮುಖಂಡರನ್ನು ಕರೆಸಿ ಮಗನ ಪರವಾಗಿ ಕಾರ್ಯನಿರ್ವಹಿಸುವಂತೆ ಕೇಳಿಕೊಂಡಿದ್ದಾರೆ.

ಒಂದಿಬ್ಬರನ್ನು ಬಿಟ್ಟು ಉಳಿದೆಲ್ಲ ಆಕಾಂಕ್ಷಿಗಳೂ ನನ್ನ ಜತೆಗೇ ಇದ್ದಾರೆ. ಈಗ ತಕ್ಷಣ ಬೆಂಗಳೂರಿಗೆ ಹೊಗಿ `ಬಿ'ಫಾರ್ಮ್ ತರುವೆ. ೧೯ ರಂದು ನಾಮಪತ್ರ ಸಲ್ಲಿಸುವೆ. ಎರಡು ದಿನದಲ್ಲಿ ಎಲ್ಲವೂ ಸರಿಯಾಗಲಿದೆ ಎಂಬ ವಿಶ್ವಾಸವಿದೆ. ಖಂಡಿತವಾಗಿ ನೇವೆ ಗೆಲ್ಲುತ್ತೇವೆ.ನಿವೇದಿತ ಆಳ್ವಾಕುಮಟಾ ಕಾಂಗ್ರೆಸ್ ಅಭ್ಯರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net