

ಬೆಂಗಳೂರು: ಮಾನಸಿಕ ಆರೋಗ್ಯ ಹಾಗೂ ರೋಗಿಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ದೂರವಾಗಿಸಲು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್) 28ರಂದು ‘ವಾಕಿಂಗ್ ಟೂರ್ ಆಫ್ ನಿಮ್ಹಾನ್ಸ್ ಅಭಿಯಾನ’ ಆಯೋಜಿಸಿದೆ. ಸಂಸ್ಥೆಯ ಡಾ. ಎಂ.ವಿ. ಗೋವಿಂದಸ್ವಾಮಿ ಕೇಂದ್ರದಲ್ಲಿ ಅಂದು ಬೆಳಗ್ಗೆ 8.45ಕ್ಕೆ ಆರಂಭವಾಗುವ ನಡಿಗೆಯಲ್ಲಿ ಸುಮಾರು 300 ಎಕರೆ ವಿಸ್ತೀರ್ಣದಲ್ಲಿರುವ ನಿಮ್ಹಾನ್ಸ್ ಆವರಣದ ವಿಶೇಷತೆಗಳನ್ನು ಸಂಸ್ಥೆಯ ವೈದ್ಯರು ಪರಿಚಯಿಸಲಿದ್ದಾರೆ. ಈ ವೇಳೆ ಮಾನಸಿಕ ರೋಗಿಗಳ ಸಾಮಾನ್ಯ ವಾರ್ಡ್, ವಿಶೇಷ ವಾರ್ಡ್‌ಗಳಿಗೆ ಭೇಟಿ ನೀಡುವುದರ ಜತೆಗೆ ವೈದ್ಯರು ಹಾಗೂ ರೋಗಿಗಳ ಜೊತೆಗೆ ಸಮಾಲೋಚನೆ ನಡೆಸಬಹುದು. ಚಿಕಿತ್ಸೆ ಕುರಿತು ಮಾಹಿತಿ ಪಡೆಯಬಹುದಾಗಿದೆ. ಮಾನಸಿಕ ರೋಗಿಗಳ ಪುನರ್ವಸತಿ ಕೇಂದ್ರ, ಚಿಕಿತ್ಸಾ ವಿಭಾಗ, ಮ್ಯೂಸಿಯಂ, ಯೋಗ ಸೇರಿ ವಿವಿಧ ಕೇಂದ್ರಗಳನ್ನು ವೀಕ್ಷಿಸಬಹುದು. ಆಸಕ್ತರು ಜೂ. 16ರೊಳಗೆ 500 ರೂ. ಶುಲ್ಕ ಪಾವತಿಸಿ ಹೆಸರು ನೋಂದಾಯಿಸಬೇಕು. ಸಂಸ್ಥೆಯು 2019ರಿಂದ ಈ ಅಭಿಯಾನ ನಡೆಸುತ್ತಿದೆ. ವಿವರಕ್ಕೆ ದೂ: 080- 2699 5156 ಸಂಪರ್ಕಿಸಿ.