

ಬೆಂಗಳೂರು: ಜಗತ್ತಿನಾದ್ಯಂತ ಮಾನಸಿಕ ಆರೋಗ್ಯ ಸಮಸ್ಯೆಗಳು ಸಾಂಕ್ರಾಮಿಕವಾಗುತ್ತಿರುವ ಸಮಯದಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್), ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಮತ್ತು ಸಂಶೋಧನೆಗಳ ಜೊತೆಗೆ ಟೆಲಿ ಮನಸ್ ಸಹಾಯವಾಣಿ ಆರಂಭಿಸಿದ ಎರಡು ವರ್ಷದಲ್ಲಿ ದೇಶಾದ್ಯಂತ 17 ಲಕ್ಷ ಮಂದಿಗೆ ಸೇವೆ ಒದಗಿಸುವ ಮೂಲಕ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ನಾಯಕನಾಗಿ ಹೊರಹೊಮ್ಮಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಂಶಿಸಿದ್ದಾರೆ.
ನಿಮ್ಹಾನ್ಸ್ ಸುವರ್ಣ ಮಹೋತ್ಸವ ಅಂಗವಾಗಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮನೋಚಿಕಿತ್ಸಾ ವಿಶೇಷ ವಿಭಾಗ, ಕೇಂದ್ರೀಯ ಪ್ರಯೋಗಾಲಯ ಸಂಕೀರ್ಣ, ಭೀಮಾ ವಸತಿ ನಿಲಯ, 3ಟಿ ಎಂಆರ್‌ಐ ಸ್ಕ್ಯಾನರ್ ಹಾಗೂ ಡಿಎಸ್‌ಎ ಸಿಸ್ಟಮ್ ಸೇವೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾನಸಿಕ ಆರೋಗ್ಯ ಸೇವೆ ಒದಗಿಸುವಲ್ಲಿ ತಂತ್ರಜ್ಞಾನವನ್ನೂ ಸಮರ್ಪಕವಾಗಿ ಬಳಸಿಕೊಂಡಿರುವ ನಿಮ್ಹಾನ್ಸ್, ಟೆಲಿ ಮನಸ್ ಸೇವೆ ಮೂಲಕ ಮಾನಸಿಕ ಅರೋಗ್ಯ ಸಮಸ್ಯೆ ಹೊಂದಿರುವವರು ತಾವಿರವ ಸ್ಥಳದಿಂದಲೇ ಸೇವೆ ವೈದ್ಯಕೀಯ ಸಲಹೆ ಪಡೆಯುವ ಅವಕಾಶ ಕಲ್ಪಿಸಿದೆ. ದೇಶದಾದ್ಯಂತ ಲಭ್ಯವಿರುವ ಈ ಸೇವೆಯಡಿ, ಜನರು ತಮ್ಮ ಆಯ್ಕೆಯ ಭಾಷೆಯಲ್ಲಿ ತಜ್ಞರ ಸಮಾಲೋಚನೆಗೆ ಒಳಪಡಬಹುದಾಗಿದೆ. ನಿಮ್ಹಾನ್ಸ್‌ನ ಕಾರ್ಯವೈಖರಿಯಿಂದಾಗಿ ಜನರಲ್ಲಿ ಮಾನಸಿಕ ಸಮಸ್ಯೆಗಳ ಬಗೆಗಿನ ಕಳಂಕಗಳೂ ದೂರಾಗಿಸಿ, ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಆರೋಗ್ಯವಂತ ಮನಸ್ಸು ಸ್ವಸ್ಥ ಸಮಾಜದ ಅಡಿಪಾಯ. ಮನುಷ್ಯನಿಗೆ ಎಲ್ಲ ಕಾರ್ಯಗಳಿಗೂ ಮನಸ್ಸೇ ಮೂಲ ಎಂದು ಧರ್ಮಗ್ರಂಥಗಳು ಹೇಳುತ್ತವೆ. ಮಾನಸಿಕ ಮತ್ತು ದೈಹಿಕ ಯಾತನೆಯನ್ನು ನಿವಾರಿಸಲು ಆಧುನಿಕ ಆರೋಗ್ಯ ವ್ಯವಸ್ಥೆಯೊಂದಿಗೆ ಯೋಗ ಸೇರಿ ಸಾಂಪ್ರದಾಯಿಕ ವಿಧಾನಗಳನ್ನು ಯಶಸ್ವಿಯಾಗಿ ಸಂಯೋಜಿಸುವ ಮೂಲಕ ಚಿಕಿತ್ಸೆ ನೀಡುವಲ್ಲಿ ನಿಮ್ಹಾನ್ಸ್ ಯಶಸ್ವಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೋಗಿಗಳ ಸಂಖ್ಯೆ ಏರಿಕೆ:
ನಿಮ್ಹಾನ್ಸ್ ಅಧ್ಯಕ್ಷ ಹಾಗೂ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮಾತನಾಡಿ, ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುವಲ್ಲಿ ಹೆಸಾಗಿರುವ ನಿಮ್ಹಾನ್ಸ್‌ನಲ್ಲಿ ರೋಗಿಗಳ ಸಂಖ್ಯೆ ಐದು ಪಟ್ಟು ಏರಿಕೆಯಾಗಿದೆ. 1970ರ ದಶಕದಲ್ಲಿ 10 ಲಕ್ಷಕ್ಕಿಂತ ಕಡಿಮೆ ಇದ್ದ ರೋಗಿಗಳ ಸಂಖ್ಯೆ, ಕಳೆದ ದಶಕದಲ್ಲಿ 50 ಲಕ್ಷಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಇದು ಅಮೃತ ಕಾಲವಾಗಿದ್ದು, ಸಂಸ್ಥೆಯು ಮುಂದಿನ 25 ವರ್ಷಗಳಿಗೆ ನೀಲನಕ್ಷೆ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ಸಂಸದರಾದ ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ, ಡಾ.ಸಿ.ಎನ್. ಮಂಜುನಾಥ್ ಹಾಗೂ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇತರರು ಉಪಸ್ಥಿತರಿದ್ದರು.
=================
ಪ್ರತಿ ವರ್ಷ 137 ಕೋಟಿ ರೂ.
ನಿಮ್ಹಾನ್ಸ್‌ನ ಮೂಲಸೌಕರ್ಯ ಅಭಿವೃದ್ಧಿ, ಸಂಶೋಧನೆ ಹಾಗೂ ತರಬೇತಿ ಕಾರ್ಯಕ್ರಮಗಳಿಗೆ ಅಗತ್ಯ ನೆರವು ನೀಡಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಮಾನಸಿಕ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು. ನಿಮ್ಹಾನ್ಸ್ ತನ್ನ ಐದು ದಶಕಗಳ ಪಯಣದಲ್ಲಿ ಸಂಶೋಧನೆ ಮತ್ತು ಶಿಕ್ಷಣ ಹಾಗೂ ಮಾನಸಿಕ ಆರೋಗ್ಯ ಕುರಿತಾದ ನೀತಿ ರೂಪಿಸುವಲ್ಲಿ ಮಹತ್ವದ ಸಾಧನೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಯ ಕಾರ್ಯನಿರ್ವಹಣೆಗಾಗಿ ರಾಜ್ಯ ಸರ್ಕಾರ ಪ್ರತಿ ವರ್ಷ 137 ಕೋಟಿ ರೂ. ಒದಗಿಸುತ್ತಿದೆ. ಇದರೊಂದಿಗೆ ಜನರಿಗೆ ಮಾನಸಿಕ ಆರೋಗ್ಯ ಸೇವೆ ಒದಗಿಸಲು ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಆತ್ಮಹತ್ಯೆ ತಡೆ, ದುಶ್ಚಟ ನಿವಾರಣಾ ಕೇಂದ್ರ, ಸಮುದಾಯ ಮಾನಸಿಕ ಆರೋಗ್ಯ ಕಾರ್ಯಕ್ರಮಗಳಿಗೆ ಒತ್ತು ನೀಡಿದೆ ಎಂದವರು ಹೇಳಿದರು.
=================
ಕೋಟ್
ತುರ್ತು ಚಿಕಿತ್ಸೆ, ಸಂಶೋಧನೆ, ಟೆಲಿಮನಸ್ ಸಹಾಯವಾಣಿಯ ಮೂಲಕ ಮಾನಸಿಕ ಸಮಸ್ಯೆಗಳಿಗೆ ವೈದ್ಯಕೀಯ ಸಲಹೆ ಸೇರಿ ಆರೋಗ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ನಿಮ್ಹಾನ್ಸ್ ವಿಶ್ವ ಆರೋಗ್ಯ ಸಂಸ್ಥೆಯಿಂದ ಪ್ರತಿಷ್ಟಿತ ನೆಲ್ಸನ್ ಮಂಡೇಲಾ ಪ್ರಶಸ್ತಿ ಪಡೆದಿದೆ.
ಡಾ. ಪ್ರತಿಮಾ ಮೂರ್ತಿ
ನಿಮ್ಹಾನ್ಸ್ ನಿರ್ದೇಶಕಿ