ಕುಶಲಕರ್ಮಿಗಳ ತವರೂರು ನೀಲಸಂದ್ರ !

IMG-20240630-WA0061
Published on

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ನಗರಕ್ಕೆ ಹೊಂದಿಕೊಂಡಿರುವ ನೀಲಸಂದ್ರ ತಾಲೂಕಿನ ವಿಶಿಷ್ಟ ಗ್ರಾಮಗಳಲ್ಲೊಂದು. ನಗರ ಕೇಂದ್ರದಿಂದ ಸುಮಾರು 5 ಕಿ.ಮೀ. ದೂರವಿರುವ ನೀಲಸಂದ್ರ ಹಲವು ವೈಶಿಷ್ಟ್ಯಗಳಿಂದ ತಾಲೂಕಿನ ಇತಿಹಾಸದ ಪುಟದಲ್ಲಿ ದಾಖಲಾಗಿದೆ.

ಈ ಗ್ರಾಮ ಇತಿಹಾಸ ಪ್ರಸಿದ್ಧ ಭೈರವೇಶ್ವರಸ್ವಾಮಿ ನೆಲೆಸಿರುವ ಪುಣ್ಯಭೂಮಿಯಾಗಿದೆ. ಗುಡಿ ಕೈಗಾರಿಕೆಯನ್ನು ನೆಚ್ಚಿಕೊಂಡಿರುವ ಈ ಗ್ರಾಮದಲ್ಲಿ ಮನೆಗೊಬ್ಬರು ಕರಕುಶಲಕರ್ಮಿಗಳಿರುವುದು ವಿಶೇಷ.

ಬಹುತೇಕ ದಲಿತ ಸಮುದಾಯ ವಾಸವಿರುವ ನೀಲಸಂದ್ರ ತಾಲೂಕಿನ ಪುರಾತನವಾದ ಕಂದಾಯ ಗ್ರಾಮವಾಗಿದೆ. 1000ಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಈ ಗ್ರಾಮಕ್ಕೆ ನೀಲಸಂದ್ರ ಎಂಬ ಹೆಸರು ಹೇಗೆ ಬಂತು ಎಂಬುದಕ್ಕೆ ಸೂಕ್ತ ಪುರಾವೆಗಳಿಲ್ಲ. ಹಲವು ವರ್ಷಗಳ ಹಿಂದೆ, ಈ ಗ್ರಾಮದಲ್ಲಿ ಸರ್ವಜಾತಿ ಹಾಗೂ ವಿವಿಧ ಧರ್ಮಗಳ ಜನತೆ ವಾಸವಾಗಿದ್ದರಂತೆ. ಆದರೆ, ಈ ಹಿಂದೆ ಸಾಂಕ್ರಾಮಿಕ ರೋಗವೊಂದು ಗ್ರಾಮಕ್ಕೆ ವ್ಯಾಪಿಸಿದಾಗ ಗ್ರಾಮದಲ್ಲಿದ್ದ ಹಲವು ಕುಟುಂಬಗಳು ವಿವಿಧೆಡೆಗೆ ವಲಸೆ ಹೋದರಂತೆ.

ಗ್ರಾಮದಲ್ಲಿದ್ದ ಅಲ್ಪಸಂಖ್ಯಾತರು ಹೊಂಗನೂರು ಕಡೆಗೆ, ಒಕ್ಕಲಿಗ ಸಮುದಾಯದವರು ತಗಚಗೆರೆ ಕಡೆಗೆ ಹೋಗಿ ನೆಲೆಸಿದರಂತೆ. ಆದರೆ, ಗ್ರಾಮದಿಂದ ಹೊರಹೋಗಲು ದಿಕ್ಕುಕಾಣದ ದಲಿತ ಸಮುದಾಯದವರು ಮಾತ್ರ ‘ಬೋರಪ್ಪ, ನೀನೆ ಕಾಪಾಡಪ್ಪ’ ಎಂದು ಗ್ರಾಮದೇವರಾದ ಭೈರವೇಶ್ವರ ಸ್ವಾಮಿ ನೆನೆದು ಗ್ರಾಮದಲ್ಲೇ ನೆಲೆಸಿದರಂತೆ. ಪ್ರಸುತ್ತ ನಾಲ್ಕೈದು ಕುಟುಂಬಗಳನ್ನು ಹೊರತುಪಡಿಸಿ, ಇಡೀ ಗ್ರಾಮದಲ್ಲಿ ದಲಿತ ಸಮುದಾಯದ ಕುಟುಂಬಗಳು ವಾಸಿಸುತ್ತಿವೆ. ಗ್ರಾಮದಲ್ಲಿ ಇಂದಿಗೂ ಇರುವ ಒಕ್ಕಲಗೇರಿ ಈ ಹಿಂದೆ ಈ ಗ್ರಾಮದಲ್ಲಿ ಒಕ್ಕಲಿಗರು ಇದ್ದರು ಎಂಬುದಕ್ಕೆ ಸಾಕ್ಷಿ ಎನ್ನಬಹುದು.

ಪಟೇಲತನ ಮಾಡಿರುವ ದಲಿತರು!

ದಕ್ಷಿಣ ಕರ್ನಾಟಕದಲ್ಲಿಯೇ ಬಹು ಅಪರೂಪ ಎನ್ನಬಹುದಾದ ಪರಿಶಿಷ್ಟ ಜಾತಿಯವರು ಪಟೇಲರಾಗಿರುವುದು ಈ ಗ್ರಾಮದ ಮತ್ತೊಂದು ವಿಶೇಷ. ಬ್ರಿಟಿಷರ ಅವಧಿಯಲ್ಲಿ ಸ್ಥಳೀಯ ಆಡಳಿತ ನಿರ್ವಹಣೆಗಾಗಿ ಪಟೇಲ ಪದ್ಧತಿ ಜಾರಿಯಲ್ಲಿತ್ತು. ಆ ಸಮಯದಲ್ಲಿ ಈ ಗ್ರಾಮದ ಹೊಟ್ಟೆ ಎಂಬುವವರನ್ನು ಪಟೇಲರನ್ನಾಗಿ ಆಯ್ಕೆಮಾಡಲಾಗಿತ್ತು. ಪಟೇಲ್ ಹೊಟ್ಟೆ ಎಂಬುವವರು ಈ ಭಾಗದ ದಲಿತ ಸಮುದಾಯದ ಏಕೈಕ ಪಟೇಲರಾಗಿದ್ದರು. ಇವರ ನಂತರ ಇವರ ಕುಟುಂಬದವರಾದ ಪಟೇಲ್ ಬೋರಯ್ಯ, ಪಟೇಲ್ ನಾಗಬೋರಯ್ಯ, ಪಟೇಲ್ ಹೊಟ್ಟೆ ಬೋರಯ್ಯ ಪಟೇಲರಾಗಿ ಕಾರ್ಯ ನಿರ್ವಹಿಸಿದರು. ಇಂದಿಗೂ ಇವರ ಕುಟುಂಬಸ್ಥರನ್ನು ಪಟೇಲರು ಎಂದೇ ಸಂಬೋಧಿಸಲಾಗುತ್ತದೆ. ಪಟೇಲ್ ಹೊಟ್ಟೆಯವರ ಸಮಾಧಿ ಗ್ರಾಮದಲ್ಲಿದ್ದು, ಇಂದಿಗೂ ಇವರನ್ನು ಪೂಜನೀಯ ಭಾವದಿಂದ ಗ್ರಾಮಸ್ಥರು ಕಾಣುತ್ತಾರೆ. ದಲಿತರಿಗೆ ತುಂಡು ಭೂಮಿ ಇಲ್ಲದ ಆ ಕಾಲದಲ್ಲಿ ಇವರ ಕುಟುಂಬ ನೂರಾರು ಎಕರೆ ಭೂ ಒಡೆಯರಾಗಿದ್ದರು ಎಂಬುದು ವಿಶೇಷ. ನಮ್ಮ ಪೂರ್ವಜರು ಪಟೇಲತನ ಮಾಡಿರುವುದು ನಮಗೆಲ್ಲ ಹೆಮ್ಮೆಯ ವಿಚಾರ ಎನ್ನುತ್ತಾರೆ ಪಟೇಲ್ ವಂಶಸ್ಥ, ತಾಪಂ ಮಾಜಿ ಸದಸ್ಯ ವೀರಭದ್ರಯ್ಯ.

ಮಣಿ ತಯಾರಿಕೆಗೆ ಹೆಸರುವಾಸಿ

ಗ್ರಾಮದ ಬಹುತೇಕ ಕುಟುಂಬಗಳು ಗುಡಿಕೈಗಾರಿಕೆಯನ್ನು ನೆಚ್ಚಿಕೊಂಡಿದ್ದಾರೆ. ಈ ಹಿಂದೆ ಗ್ರಾಮದ ಜನತೆ ವಿವಿಧ ಕಸುಬುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆದರೆ, ಸುಮಾರು 60 ವರ್ಷದ ಹಿಂದೆ ಹೊರಗಿನ ವ್ಯಕ್ತಿಯೊರ್ವರು ಗ್ರಾಮದಲ್ಲಿ ಆಟಿಕೆ ತಯಾರಿಸುವ ಉದ್ಯಮ ಆರಂಭಿಸಿದರು. ಅಲ್ಲಿಂದ ಆರಂಭಗೊಂಡ ಕರಕುಶಲತೆಯ ನಂಟು ಪ್ರಸುತ್ತ ಇಡೀ ಗ್ರಾಮಕ್ಕೆ ವ್ಯಾಪಿಸಿದೆ. ಗ್ರಾಮದ ಹಲವು ಮನೆಗಳಲ್ಲಿ ಮಕ್ಕಳಿಂದ ಹಿಡಿದು ವೃದ್ದರವರೆಗೆ ಆಟಿಕೆ ತಯಾರಿಕೆ, ಬಣ್ಣ ಹಂಚುವ ಕೆಲಸ ಹೀಗೆ ನಾನಾ ಕರಕುಶಲ ಕಾಯಕದಲ್ಲಿ ತೊಡಗಿದ್ದಾರೆ. ಕಾರುಗಳ ಸೀಟಿನ ಮಣಿ ತಯಾರಿಸುವುದರಲ್ಲಿ ಈ ಗ್ರಾಮ ಸಾಕಷ್ಟು ಹೆಸರುವಾಸಿಯಾಗಿದ್ದು, ಇಲ್ಲಿ ತಯಾರಾಗುವ ಮಣಿಗಳಿಗೆ ಸಾಕಷ್ಟು ಬೇಡಿಕೆಯಿದೆ. ವಿದೇಶಗಳಿಗೂ ಇಲ್ಲಿ ತಯಾರಾಗುವ ವಸ್ತುಗಳು ರ‌್ತಾಗುತ್ತವೆ. ಕೆಲ ಉದ್ಯಮಿಗಳು ಕಚ್ಚಾ ವಸ್ತುಗಳನ್ನು ಮಹಿಳೆಯರಿಗೆ ನೀಡಿ, ಮಣಿ ಕಟ್ಟಿಸುವ ಕೆಲಸ ಮಾಡುತ್ತಾರೆ. ಇದರಿಂದ ಗ್ರಾಮದಲ್ಲಿ ಉದ್ಯೋಗ ಸೃಷ್ಟಿಯೂ ಆಗಿದೆ.

ಭೈರವೇಶ್ವರ ನೆಲೆಸಿರುವ ಪುಣ್ಯಭೂಮಿ!

ಲಕ್ಷಾಂತರ ಭಾವುಕ ಭಕ್ತರ ನಂಬುಗೆಯ ಭೈರವೇಶ್ವರ ಅಥವಾ ಬೋರಪ್ಪ ದೇವರು ಈ ಗ್ರಾಮದಲ್ಲಿ ನೆಲೆಸಿದ್ದಾರೆ. ಭೈರವೇಶ್ವರ ಈ ಗ್ರಾಮದಲ್ಲಿ ಬಂದು ನೆಲೆಸಿರುವ ಹಿಂದೆ ರೋಚಕವಾದ ಇತಿಹಾಸವಿದೆ. ಇದು ಚೋಳರ ಕಾಲದ ದೇವಸ್ಥಾನವಾಗಿದ್ದು, ಶ್ರೀ ಆದಿಚುಂಚನಗಿರಿ ಕಾಲಬೈರವೇಶ್ವರ ಹಾಗೂ ನೀಲಸಂದ್ರದ ಶ್ರೀ ಭೈರವೇಶ್ವರ ಸ್ವಾಮಿ ಅಣ್ಣ-ತಮ್ಮಂದಿರು ಎನ್ನಲಾಗುತ್ತದೆ. ಈ ಹಿಂದೆ ಸಂತೇಮೋಗೇನಹಳ್ಳಿ ಗ್ರಾಮದ ಅರ್ಚಕ ಕುಟುಂಬವೊಂದು ದೇವರ ಪೂಜೆ ನಡೆಸಿಕೊಂಡು ಬರುತ್ತಿದ್ದರು. ಅವರು ಆ ಕೆಲಸವನ್ನು ಬಿಟ್ಟು ಹೋದಾಗ, ಪಟೇಲ್ ಬೋರಯ್ಯ ಅವರು ಸಣಬನಹಳ್ಳಿಯ ಕುರುಬ ಸಮುದಾಯದ ವ್ಯಕ್ತಿಯೋರ್ವರಿಗೆ ಲಿಂಗಧಾರಣೆ ಮಾಡಿಸಿ ಅರ್ಚಕ ವೃತ್ತಿಗೆ ನಿಯೋಜಿಸಿದರು. ಅಂದಿನಿಂದ ಇಂದಿನವರೆಗೂ ಸ್ವಾಮಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿಕೊಂಡು ಬರಲಾಗುತ್ತಿದೆ. ಇಂದಿಗೂ ನೀಲಸಂದ್ರದ ಪಟೇಲ್ ಕುಟುಂಬದವರು ದೇವಸ್ಥಾನದ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದಾರೆ. ಗ್ರಾಮದ ಹೊರವಲಯದ ವಿಶಾಲವಾದ ತೋಪಿನಲ್ಲಿ ಸ್ವಾಮಿ ನೆಲೆಯಾಗಿದ್ದು, ಪ್ರತಿ ವರ್ಷ ಯುಗಾದಿ ಹಬ್ಬದ ನಂತರ ಏಳು ದಿನ ಅದ್ದೂರಿ ಜಾತ್ರೆ ನಡೆಯುತ್ತದೆ. ಮೀಸಲು ಊಟ ಹಾಗೂ ಜೋಗನ ಕುಣಿತ ಈ ಜಾತ್ರೆಯ ವಿಶೇಷ. ಭೈರವೇಶ್ವರ ಜತೆಗೆ, ಮಾಯಮ್ಮ, ಮಂಚಮ್ಮ, ಮಾಳಮ್ಮ ದೇವತೆಯನ್ನು ಗ್ರಾಮಸ್ಥರು ಪೂಜಿಸಿಕೊಂಡು ಬರುತ್ತಿದ್ದಾರೆ.

ಜ್ಞಾನ ದೀವಿಗೆಯಾದ ಡಿಜಿಟಲ್ ಗ್ರಂಥಾಲಯ!

ಜಿಲ್ಲೆಯಲ್ಲಿಯೇ ಬಹಳ ಸುಂದರ ಮತ್ತು ವಿಸ್ತಾರವಾದ ಗ್ರಂಥಾಲಯ ಈ ಗ್ರಾಮದಲ್ಲಿದೆ. ಬಯಲು ಗ್ರಂಥಾಲಯ, ಡಿಜಿಟಲ್ ಗ್ರಂಥಾಲಯ, ಟೇರಸ್ ಗ್ರಂಥಾಲಯವನ್ನು ಗ್ರಾಮದಲ್ಲಿ ಕಾಣಬಹುದಾಗಿದೆ. ಬಯಲು ಗ್ರಂಥಾಲಯದಲ್ಲಿ ಪ್ರತಿನಿತ್ಯ ಗ್ರಾಮಸ್ಥರು ಒಂದೆಡೆ ಕೂತು ಪತ್ರಿಕೆಗಳನ್ನು ಓದುತ್ತಾರೆ. ಟೇರಸ್ ಗ್ರಂಥಾಲಯ ಎ್ಲ ಸಮಯದಲ್ಲೂ ಲಭ್ಯವಿದೆ. ವಿಕಲಚೇತನರ ಜ್ಞಾನಾರ್ಜನೆಗೂ ಇಲ್ಲಿ ಅವಕಾಶವಿದೆ. ಉನ್ನತ ಶಿಕ್ಷಣ ವಿದ್ಯಾರ್ಥಿಗಳು ಸೇರಿ ನೂರಾರು ಮಕ್ಕಳಿಗೆ ಗ್ರಾಮದಲ್ಲಿರುವ ಗ್ರಂಥಾಲಯ ಜ್ಞಾನ ದೀವಿಗೆಯಾಗಿದೆ ಎನ್ನುತ್ತಾರೆ ಗ್ರಂಥಾಲಯ ಮೇಲ್ವಿಚಾರಕಿ ಶಿಲ್ಪಾ.

ಇದಲ್ಲದೇ ಪಂಚಾಯಿತಿ ಹೆಡ್ ಕ್ವಾಟರ್ ಸಹ ನೀಲಸಂದ್ರವಾಗಿದೆ. ತಾಲೂಕಿನ ಪ್ರಮುಖ ಪಂಚಾಯಿತಿಗಳ ಸಾಲಿನ ಈ ಗ್ರಾಪಂ ನಿಂತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net