

ಅಭ್ಯರ್ಥಿ ಆಯ್ಕೆಗೆ ಗೊಂದಲ
* ತಲೆಬೇನೆ ತಂದ ಮೈತ್ರಿ ಹುರಿಯಾಳು ಆಯ್ಕೆ
ಗಂಗಾಧರ್ ಬೈರಾಪಟ್ಟಣ ರಾಮನಗರ
ಚನ್ನಪಟ್ಟಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡೆಸಿದ ಟೆಂಪಲ್‌ರನ್ ಎನ್‌ಡಿಎ ಮೈತ್ರಿ ಪಾಳಯದಲ್ಲಿ ತಲೆ ಬಿಸಿ ಏರುವಂತೆ ಮಾಡಿದೆ. ಚನ್ನಪಟ್ಟಣ ಉಪಚುಣಾವಣೆಯಲ್ಲಿ ಸ್ಪರ್ಧೆ ಬಗ್ಗೆ ಡಿ.ಕೆ.ಶಿವಕುಮಾರ್ ಸುಳಿವು ನೀಡಿ ಹೋಗಿದ್ದಾರೆ. ಆದರೆ, ಎದುರಾಳಿ ಪಾಳಯ ಇನ್ನೂ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನದಲ್ಲಿಯೇ ಇದ್ದು, ಇದು ಕಾರ್ಯಕರ್ತರಿಗೆ ಆತಂಕ ಹೆಚ್ಚಿಸಿದೆ.
ಡಿ.ಕೆ.ಶಿವಕುಮಾರ್ ಸೇರಿ ಕಾಂಗ್ರೆಸ್ ಪಕ್ಷದಿಂದ ಉಪಚುಣಾವಣೆಯಲ್ಲಿ ಯಾರೇ ಸ್ಪರ್ಧೆ ಮಾಡಿದರೂ ಅವರನ್ನು ಎದುರಿಸುವ ಸಮರ್ಥ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಎನ್ನುವ ಚರ್ಚೆಗಳು ನಡೆದಿವೆ. ಈವರೆವಿಗೂ ಮೈತ್ರಿ ಪಕ್ಷ ಜೆಡಿಎಸ್‌ನಿಂದಾಗಲಿ, ಬಿಜೆಪಿಯಿಂದಾಗಲೀ ಈ ಬಗ್ಗೆ ಸಿಪಿವೈಗೆ ಹರಿಸು ನಿಶಾನೆ ದೊರೆತಿಲ್ಲ. ಆದರೆ ಟಿಕೆಟ್ ನೀಡಿದರೆ ಸ್ಪರ್ಧೆ ಮಾಡುವ ಇಂಗಿತವನ್ನು ಯೋಗೇಶ್ವರ್ ಹೊರ ಹಾಕಿದ್ದಾರಾದರೂ, ಟಿಕೆಟ್ ದೊರೆಯಲಿದೆ ಎನ್ನುವ ಖಾತ್ರಿ ಇಲ್ಲ. ಇದರಿಂದಾಗಿ ಉಪಚುನಾವಣೆಯಲ್ಲಿ ಯೋಗೇಶ್ವರ್‌ಗೆ ಟಿಕೆಟ್ ಒಲಿಯುವುದೇ ಎನ್ನುವ ದೊಡ್ಡ ಪ್ರಶ್ನೆ ಕ್ಷೇತ್ರದಲ್ಲಿ ಹುಟ್ಟಿಕೊಂಡಿದೆ.
ಚನ್ನಪಟ್ಟಣದ ಜೆಡಿಎಸ್ ಶಾಸಕರಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಮಂತ್ರಿ ಆದ ನಂತರ ಶಾಸಕ ರಾಜೀನಾಮೆ ನೀಡರುವುದರಿಂದ ಈ ಸ್ಥಾನಕ್ಕೆ ನಡೆಯುವ ಉಪಚುನಾವಣೆಯಲ್ಲಿ ಜೆಡಿಎಸ್‌ಗೆ ಟಿಕೆಟ್ ದೊರೆಯಬೇಕು ಎನ್ನುವ ಒತ್ತಡವನ್ನು ಸ್ಥಳೀಯ ಜೆಡಿಎಸ್ ಮುಖಂಡರು ಎಚ್.ಡಿ.ಕುಮಾರಸ್ವಾಮಿ ಮೇಲೆ ಹಾಕುತ್ತಲೇ ಇದ್ದಾರೆ. ಒಂದು ವೇಳೆ ಸಿ.ಪಿ.ಯೋಗೇಶ್ವರ್ ಅವರಿಗೆ ಟಿಕೆಟ್ ನೀಡುವುದೇ ಆದರೆ ನಾವು ತಟಸ್ಥವಾಗಿ ಉಳಿದು ಬಿಡುತ್ತೇವೆ ಎನ್ನುವ ಬೆದರಿಕೆ ತಂತ್ರವನ್ನು ಹಾಕಿದ್ದಾರೆ ಎನ್ನಲಾಗಿದೆ. ಸಿಪಿವೈ ಗೆದ್ದರೆ ನಮ್ಮನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎನ್ನುವ ಆತಂಕವೂ ಸ್ಥಳೀಯ ಮುಖಂಡರಿಗೆ ಇರುವ ಹಿನ್ನೆಲೆಯಲ್ಲಿ ಈ ತಂತ್ರ ಅನುಸರಿಸಿದ್ದಾರೆ ಎಂದು ಪಕ್ಷದ ಮೂಗಳಿಂದ ತಿಳಿದು ಬಂದಿದೆ.
ಇದರ ನಡುವೆ ಚನ್ನಪಟ್ಟಣಕ್ಕೆ ಯೋಗೇಶ್ವರ್ ಅವರಿಗೆ ಟಿಕೆಟ್ ಬೇಡ ಎನ್ನುತ್ತಿರುವ ಜೆಡಿಎಸ್‌ನ ಸ್ಥಳೀಯ ಮುಖಂಡರು, ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕೆ ಇಳಿಸಿ ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎನ್ನುವ ಸಂದೇಶವನ್ನು ನಾಯಕರಿಗೆ ನೀಡಿದ್ದಾರೆ. ನಿಖಿಲ್ ಯುವಕರಾಗಿರುವ ಕಾರಣ ಮತ್ತು ಎರಡು ಚುನಾವಣೆಯಲ್ಲಿ ಸೋಲು ಕಂಡಿರುವ ಹಿನ್ನೆಲೆಯಲ್ಲಿ ಅವರು ಚನ್ನಪಟ್ಟಣದಿಂದ ಸ್ಪರ್ಧೆ ಮಾಡಿದರೆ ಅವರಿಗೆ ಗೆಲುವು ಸಿಗಲಿದೆ ಎನ್ನುವ ಆತ್ಮವಿಶ್ವಾಸವನ್ನು ಎಚ್.ಡಿ.ಕೆ. ಕುಟುಂಬದಲ್ಲಿ ತುಂಬುವ ಕೆಲಸವನ್ನು ಸ್ಥಳೀಯ ಮುಖಂಡರು ಮಾಡಿದ್ದಾರೆ.
ಲಭ್ಯ ಮಾಹಿತಿ ಪ್ರಕಾರ ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ವಿಚಾರದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಗೊಂದಲದಲ್ಲಿ ಸಿಲುಕಿದ್ದಾರೆ. ಚನ್ನಪಟ್ಟಣವನ್ನು ಗೆಲ್ಲಿಸಿಕೊಳ್ಳಲೇಬೇಕಿರುವ ಅನಿವಾರ್ಯತೆ ಎಚ್‌ಡಿಕೆ ಅವರಿಗೆ ಇದೆ. ಆದರೆ ಇದಕ್ಕಾಗಿ ಪುತ್ರನನ್ನು ಕಣಕ್ಕೆ ಇಳಿಸಿ ಪರೀಕ್ಷಿಸಲು ಅವರು ಸಿದ್ಧರಿಲ್ಲ. ಒಂದು ವೇಳೆ ಸೋಲು ಕಂಡರೆ ನಿಖಿಲ್ ರಾಜಕೀಯ ಜೀವನದ ಜತೆಗೆ ಪಕ್ಷದ ಸಂಘಟನೆಗೂ ಹೊಡೆತ ಬೀಳಲಿದೆ. ಮತ್ತೊಂದೆಡೆ ಸಿ.ಪಿ.ಯೋಗೇಶ್ವರ್ ಅವರನ್ನು ಕಣಕ್ಕೆ ಇಳಿಸಿದರೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ‘ಕೈ’ ತಪ್ಪುವ ಆತಂಕ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಬಿಜೆಪಿ ಹೊರತಾಗಿ ಬೇರೆ ಪಕ್ಷದ ಕಡೆಗೆ ಮುಖ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸಿ.ಪಿ.ಯೋಗೇಶ್ವರ್ ತಾವು ಸ್ಪರ್ಧೆಗೆ ಸಿದ್ಧ ಎನ್ನುವ ಸಂದೇಶವನ್ನು ನೀಡಿದ್ದಾರಾದರೂ, ಪಕ್ಷ ಮತ್ತು ಮೈತ್ರಿ ಮಾತುಕತೆ ವೇಳೆ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿ ಇರಲು ನಿರ್ಧರಿಸಿದ್ದಾರೆ. ಒಂದು ವೇಳೆ ಸ್ಪರ್ಧೆಗೆ ಸೂಚನೆ ನೀಡಿದರೆ ಸ್ಪರ್ಧಿಸುತ್ತೇನೆ, ಇಲ್ಲವೇ ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇನೆ ಎನ್ನುವ ಮೂಲಕ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.