

ರಾಮನಗರ ಜೆಡಿಎಸ್ನಲ್ಲಿ ಅಸಮಾಧಾನದ ಕಿಡಿ
ಕಾರ್ಯಕರ್ತರ ಕಥೆ ಏನು ಎನ್ನುವ ಪ್ರಶ್ನೆ
ಗಂಗಾಧರ್ ಬೈರಾಪಟ್ಟಣ ರಾಮನಗರ
ಚನ್ನಪಟ್ಟಣ ಉಪಚುನಾವಣೆಗೆ ನ.3ರಂದು ಚುನಾವಣೆ ನಿಗದಿಯಾದ ಬೆನ್ನಲ್ಲೇ ಕ್ಷೇತ್ರದಲ್ಲಿ ರಾಜಕೀಯ ರಂಗೇರಿದ್ದು, ಎಲ್ಲರ ಚಿತ್ತ ಚನ್ನಪಟ್ಣಣದತ್ತ ನೆಟ್ಟಿದೆ. ಅದರಲ್ಲೂ ಎನ್ಡಿಎ ಮೈತ್ರಿ ಅಭ್ಯರ್ಥಿ ಚರ್ಚೆ ಸಂಚಲ ಸೃಷ್ಟಿಸಿದೆ. ಇದರ ನಡುವೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಾರೆ ಎನ್ನುವ ಸುದ್ದಿಯೊಂದು ರಾಮನಗರ ಜೆಡಿಎಸ್ ವಲಯದಲ್ಲಿ ಬೇಸರ ಕಿಡಿ ಹೊತ್ತಿಸಿದೆ.
ಹೌದು. ಕಳೆದ ವಿಧಾನಸಭೆ ಚುನಾವಣೆವರೆಗೂ ಸುಮಾರು 30 ವರ್ಷ ಜೆಡಿಎಸ್ ರಾಮನಗರದಲ್ಲಿ ಹಿಡಿತ ಹೊಂದಿತ್ತು. ಕಳೆದ ಬಾರಿ ನಿಖಿಲ್ ಸೋಲು ಕಂಡ ಬಳಿಕ ಇಲ್ಲಿನ ಕಾರ್ಯಕರ್ತರು ಅತಂತ್ರರಾಗಿದ್ದಾರೆ. ನಿಮ್ಮೊಂದಿಗೆ ನಾನು ಇರುತ್ತೇನೆ ಎಂದು ಹೇಳಿ ಧೈರ್ಯ ತುಂಬುವ ಕೆಲಸ ಮಾಡಿದ್ದ ನಿಖಿಲ್, ಈಗ ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ ಎನ್ನುವ ವಿಚಾರ ಕಾರ್ಯಕರ್ತರ ನಿದ್ದೆಗೆಡಿಸಿದ್ದು, ಇದು ಕುಮಾರಸ್ವಾಮಿ ಮತ್ತು ನಿಖಿಲ್ ವಿರುದ್ಧ ಸಣ್ಣ ಅಸಮಾಧಾನಕ್ಕೂ ಕಾರಣವಾಗಿದೆ.
ನಮ್ಮ ಕಷ್ಟ ಕೇಳೋರು ಯಾರು?
ಜೆಡಿಎಸ್ ಪಾಲಿಗೆ ರಾಮನಗರ ಭದ್ರಕೋಟೆ. ಕಳೆದ ವಿಧಾನಸಭೆ ಚುನಾವಣೆ ಸೋಲು ನಾಯಕರನ್ನು ಮಾತ್ರವಲ್ಲ ಕಾರ್ಯಕರ್ತರನ್ನು ಅಧೀರರನ್ನಾಗಿಸಿತು. ಈಗ, ನಿಖಿಲ್ ಚನ್ನಪಟ್ಟಣದಿಂದ ಸ್ಪರ್ಧೆ ಮಾಡಿದರೆ ಇಲ್ಲಿ ನಮ್ಮ ಕಷ್ಟ ಕೇಳೋರು ಯಾರು ಎನ್ನುವ ದೊಡ್ಡ ಆತಂಕದ ಪ್ರಶ್ನೆ ಕಾರ್ಯಕರ್ತರನ್ನು ಕಾಡುತ್ತಿದೆ. ರಾಮನಗರವನ್ನು ಬಿಟ್ಟು ಎಲ್ಲೂ ಹೋಗಲ್ಲ. ನಿಮ್ಮೊಂದಿಗೆ ನಾನು ಸದಾಕಾಲ ಇಲ್ಲೇ ಇರುತ್ತೇನೆ. ಕಳೆದುಕೊಂಡಲ್ಲಿಯೇ ಅದನ್ನು ಪಡೆಯುತ್ತೇನೆ ಎಂದಿದ್ದ ನಿಖಿಲ್ ಚನ್ನಪಟ್ಟಣಕ್ಕೆ ಹೋದರೆ ಇಲ್ಲಿ ನಾವೇನು ಮಾಡಬೇಕು?, ಪಕ್ಷ ಸಂಟನೆ ಹೇಗೆ ? ಎನ್ನುವ ಹಲವು ಪ್ರಶ್ನೆಗಳು ಸ್ಥಳಿಯ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಎದ್ದಿವೆ.
ಇಲ್ಲಿಗೆ ಯಾರು?
ದೇವೇಗೌಡರು ಮತ್ತು ಕುಮಾರಸ್ವಾಮಿ ಪಕ್ಷದ ಶಕ್ತಿ, ಇವರಿಗೆ ರಾಮನಗರದಲ್ಲಿ ಕಾರ್ಯಕರ್ತರು ಬೆನ್ನೆಲುಬಾಗಿ ಪಕ್ಷ ಸಂಟನೆಗೆ ಮಾಡಿದ್ದೇವೆ. ಆದರೆ, ನಾಯರು 2018ರ ಚುನಾವಣೆಯಿಂದಲೂ ಕಾರ್ಯಕರ್ತರ ಒಳಿತಿನ ಬಗ್ಗೆ ಯೋಚನೆ ಮಾಡಲೇ ಇಲ್ಲ. ಚನ್ನಪಟ್ಟಣ ಮತ್ತು ರಾಮನಗರ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಕುಮಾರಸ್ವಾಮಿ ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ನೀಡಿದರು. ಆನಂತರ ಅನಿತಾ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡಿದಾಗಲೂ ಕಾರ್ಯಕರ್ತರು ಉತ್ಸಾಹದಿಂದಲೇ ಕೆಲಸ ಮಾಡಿದರು. ಬಳಿಕ ಸ್ಪರ್ಧಿಸಿದ ನಿಖಿಲ್ ಕುಮಾರಸ್ವಾಮಿ ಅವರ ಸೋಲಿಗೆ ಪಕ್ಷದ ಕೆಲವರ ಎಡವಟ್ಟು ಕಾರಣ. ಇದರಲ್ಲಿ ಕಾರ್ಯಕರ್ತರ ತಪ್ಪೇನು?, ಈಗ ಮತ್ತೆ ಚನ್ನಪಟ್ಟಣಕ್ಕೆ ನಿಖಿಲ್ ಹೋದರೆ ರಾಮನಗರದ ಜೆಡಿಎಸ್ಗೆ ಯಾರು ಸಾರಥಿ ಎನ್ನುವುದು ಮುಖಂಡರ ಪ್ರಶ್ನೆಯಾಗಿದೆ.
ಚನ್ನಪಟ್ಟಣಕ್ಕೆ ಯಾರನ್ನಾದರೂ ನಿಲ್ಲಿಸಿ?
ಚನ್ನಪಟ್ಟಣ ಕ್ಷೇತ್ರಕ್ಕೆ ಬೇರೆ ಯಾರನ್ನಾದರೂ ಅಭ್ಯರ್ಥಿ ಮಾಡಿ. ಆದರೆ, ನಿಖಿಲ್ ಅವರನ್ನು ರಾಮನಗರದಲ್ಲಿಯೇ ಇರಲು ಬಿಡಿ ಎನ್ನುವುದು ಬಹುತೇಕ ಕಾರ್ಯಕರ್ತರ ಒತ್ತಾಯ. ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸಿ ಹೋದರೆ ಸಾಕಿತ್ತು, ಕಾರ್ಯಕರ್ತರು ಚುನಾವಣೆ ಮಾಡುತ್ತಿದ್ದರು. ಈಗಲೂ ಇಂತಹದ್ದೇ ಹುಮ್ಮಸ್ಸು ಕಾರ್ಯಕರ್ತರಲ್ಲಿ ಇದೆ. ಈಗ ನಿಖಿಲ್ ಅವರು ಚನ್ನಪಟ್ಟಣಕ್ಕೆ ಹೋದರೆ ಇಲ್ಲಿಗೆ ನಾಯಕತ್ವವೇ ಇಲ್ಲದಂತೆ ಆಗುತ್ತದೆ. ಇದರಿಂದ ಈಗಾಗಲೇ ಅತಂತ್ರರಾಗಿರುವ ಪಕ್ಷದ ಕಾರ್ಯಕರ್ತರು ಸಂಟನೆಯಿಂದಲೇ ದೂರ ಉಳಿಯಲಿದ್ದಾರೆ ಎನ್ನುವ ಆತಂಕ ಪಕ್ಷದ ಪಾಳಯದಲ್ಲಿದೆ.
ಜೆಡಿಎಸ್, ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ನಮ್ಮ ಶಕ್ತಿ. ಆದರೆ, ಪದೇಪದೆ ಅವರು ರಾಮನಗರ ಕ್ಷೇತ್ರವನ್ನು ಕಡೆಗಣಿಸುತ್ತಿದ್ದಾರೆ. ನಿಖಿಲ್ ಅವರ ಚನ್ನಪಟ್ಟಣದಿಂದ ಸ್ಪರ್ಧೆ ಮಾಡಿದರೆ ನಮ್ಮ ಪಾಡೇನು? ನಮಗೆ ಕಾಂಗ್ರೆಸ್ ಒಗ್ಗುವುದಿಲ್ಲ . ಬೇರೆ ಕಡೆಗೆ ಹೋಗಲು ಆಗುವುದಿಲ್ಲ. ನಮ್ಮ ನಾಯಕರ ವರ್ತನೆ ನಮಗೆ ಆತಂಕ ತರಿಸಿದೆ.
ಹೆಸರು ಹೇಳಲಿಚ್ಛಿಸದ ಜೆಡಿಎಸ್ ಕಾರ್ಯಕರ್ತ