

ಬೆಂಗಳೂರು: ಐಸಿಸ್ ಸೇರಿ ಕೆಲವು ನಿಷೇಧಿತ ಸಂಘಟನೆಗಳ ಜತೆ ಸಂಪರ್ಕ ಹೊಂದಿದ್ದ ಬೆಂಗಳೂರು ನಿವಾಸಿ ಮುಹಮ್ಮದ್ ತಾಖಿರ್ (33) ಎಂಬಾತನನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕಾರಿಗಳು ಬಂಧಿದ್ದಾರೆ.
ರಾಜಧಾನಿಯಲ್ಲಿ ನೆಲೆಸಿರುವ ಮುಹಮ್ಮದ್ ತಾಖಿರ್ನನ್ನು ಎನ್ಐಎ ಅಧಿಕಾರಿಗಳು ನಿನ್ನೆ ಬಂಧಿಸಿದ್ದಾರೆ. ಇದೇ ವರ್ಷದ ಏಪ್ರಿಲ್ನಲ್ಲಿ ಈತನ ಇನ್ನಿಬ್ಬರು ಸಹಚರರಾದ ಅಹಮದ್ ಅಬ್ದುಲ್ ಖಾದರ್ ಮತ್ತು ಇರ್ಫಾನ್ ನಾಸಿರ್ ಅವರನ್ನು ಬಂಧಿಸಿದ್ದ ಎನ್ಐಎ, ದೋಷಾರೋಪಣಾ ಪಟ್ಟಿ ಸಲ್ಲಿಸಿತ್ತು. ಈ ಕೇಸ್ ಹಿನ್ನೆಲೆಯಲ್ಲಿ ಮುಹಮ್ಮದ್ ತಾಖಿರ್ ಸಂಬಂಧ ಬೆಳಕಿಗೆ ಬಂದಿತ್ತು.
ನಿಷೇಧಿತ ಸಂಘಟನೆಗಳಾದ ಐಎಸ್ಐಎಸ್, ಐಎಸ್ಐಎಲ್ ಹಾಗೂ ಡಾಯಿಷ್ ಮುಂತಾದವುಗಳ ಜತೆ ತಾಖಿರ್ ನಿರಂತರ ಸಂಬಂಧ ಹೊಂದಿದ್ದ. ನಿಷೇಧಿತ ಸಂಘಟನೆಗಳಿಗೆ ಫಂಡಿಂಗ್ ಮಾಡುತ್ತಿದ್ದ ಈತ ಮುಸ್ಲಿಂ ಯುವಕರನ್ನು ಸೆಳೆದು ಖುರಾನ್ ಸರ್ಕಲ್ ಎಂಬ ಗ್ರೂಪ್ಗೆ ಸೇರಿಸಿಕೊಂಡು ಅವರನ್ನು ಐಸಿಸ್ಗೆ ಸೇರಲು ಸಿರಿಯಾಗೆ ಕಳಿಸುತ್ತಿದ್ದ.
2013ರಲ್ಲಿ ಕಾನೂನುಬಾಹಿರವಾಗಿ ಸಿರಿಯಾಗೆ ಭೇಟಿ ನೀಡಿದ್ದ ಈತ ನಿಷೇಧಿತ ಸಂಘಟನೆಗಳ ಮುಖ್ಯಸ್ಥರ ಜತೆ ಮಾತುಕತೆ ನಡೆಸಿ, ಭಾರತೀಯ ಮುಸ್ಲಿಮರ ಸಹಕಾರ ಒದಗಿಸುವ ಭರವಸೆಯನ್ನೂ ನೀಡಿದ್ದ ಎಂದು ಎನ್ಐಎ ತಿಳಿಸಿದೆ.