ಮತ್ತೆ ಎನ್‌ಜಿಟಿ ಅಂಗಳದಲ್ಲಿ ಜಿಲ್ಲೆಯ ಮರಳುಗಾರಿಕೆ

National-Green-tribunal
Published on

ಕಾರವಾರ: ಜಿಲ್ಲೆಯ ಸಿಆರ್‌ಜಡ್ ವ್ಯಾಪ್ತಿಯಲ್ಲಿ ಮರಳು ಗಣಿಗಾರಿಕೆಗೆ ವಿಚಾರ ಮತ್ತೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ(ಎನ್‌ಜಿಟಿ)ಯ ಚೆನ್ನೈ ಹಸಿರು ಪೀಠದೆದುರು ವಿಚಾರಣೆ ಪ್ರಾರಂಭವಾಗಿದೆ. ಪರಿಸರ ಇಲಾಖೆ ಅನುಮತಿ ಇಲ್ಲದೇ ಮರಳು ಗಣಿಗಾರಿಕೆ ನಡೆಸಬಾರದು ಎಂದು ಎನ್‌ಜಿಟಿ ಸೂಚಿಸಿದೆ.
ಗಜಾನನ ನಾರಾಯಣ ಹೆಗಡೆ ಎಂಬುವವರು ಹೂಡಿದ್ದ ದಾವೆಯನ್ನು ಪರಿಶೀಲಿಸಿದ ಪುಷ್ಪಾ ಸತ್ಯನಾರಾಯಣನ್ ಹಾಗೂ ಡಾ.ಸತ್ಯಗೋಪಾಲ ಕೊರ್ಲಪಾಟಿ ಅವರಿದ್ದ ಪೀಠವು ಏ.24 ರಂದು ಮಧ್ಯಂತರ ಆದೇಶವೊಂದನ್ನು ನೀಡಿದೆ. ಸ್ಥಳ ಪರಿಶೀಲಿಸಿ ವಿಸ್ತ್ರತ ವರದಿಯನ್ನು ಮುಂದಿನ ವಿಚಾರಣೆ ವೇಳೆ ನೀಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರ(ಎಸ್‌ಇಐಎಎ)ದ ಅಧಿಕಾರಿಗಳಿಗೆ ಎನ್‌ಜಿಟಿ ಆದೇಶಿಸಿದೆ. ಜುಲೈ 26 ಕ್ಕೆ ವಿಚಾರಣೆ ಮುಂದೂಡಿದೆ.
ಜಿಲ್ಲೆಯ ಶರಾವತಿ ನದಿಯ ಸಿಆರ್‌ಜಡ್ ಪ್ರದೇಶದಲ್ಲಿ ಪರಿಸರ ಇಲಾಖೆ ಅನುಮತಿ ಇಲ್ಲದೇ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂದು ದಾವೆದಾರರ ಪರ ವಕೀಲರು ವಾದಿಸಿದ್ದರು. ಮೊದಲೇ ಸಂಗ್ರಹಿಸಿದ ಮರಳನ್ನು ಸಾಗಿಸಲಾಗುತ್ತಿದೆಯೇ ಅಥವಾ ಹೊಸದಾಗಿ ಮರಳನ್ನು ತೆಗೆಯಲಾಗುತ್ತಿದೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಆದರೆ, ಪರಿಸರ ಇಲಾಖೆ ಅನುಮತಿ ಇಲ್ಲದೆಯೇ ಮರಳು ಗಣಿಗಾರಿಕೆ ಮಾಡುವಂತಿಲ್ಲ ಎಂದು ನಾವು ಸ್ಪಷ್ಟಪಡಿಸುತ್ತೇವೆ ಎಂದು ಆದೇಶದಲ್ಲಿ ಹೇಳಲಾಗಿದೆ. ಅಕ್ರಮ ನಡೆಯುತ್ತಿದ್ದರೆ ತಕ್ಷಣ ತಡೆಯಬೇಕು. ಇಲ್ಲದಿದ್ದರೆ ಗಣಿಗಾರಿಕೆ ಅಕ್ರಮವಾಗುತ್ತದೆ. ಯಾವುದಾರರೂ ಪರವಾನಗಿ ಇದ್ದರೆ ಅದನ್ನು ಮುಂದಿನ ವಿಚಾರಣೆ ವೇಳೆ ಹಾಜರುಪಡಿಸಬೇಕು ಎಂದು ಸೂಚಿಸಲಾಗಿದೆ.

ಎರಡು ವರ್ಷದಿಂದ ಬಂದ್:

ಎನ್‌ಜಿಟಿಯಲ್ಲಿ ವಿಚಾರಣೆ ಹಂತದಲ್ಲಿರುವುದರಿಂದ ಕಳೆದ ಎರಡು ವರ್ಷಗಳಿಂದ ಮರಳು ಗಣಿಗಾರಿಕೆಯನ್ನು ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ತಡೆಯಲಾಗಿತ್ತು. ಫೆಬ್ರವರಿ ಅಂತ್ಯದಲ್ಲಿ ಜಿಲ್ಲೆಯ ಕಾಳಿ, ಗಂಗಾವಳಿ, ಅಘನಾಶಿನಿ ಹಾಗೂ ಶರಾವತಿಯಲ್ಲಿ 19 ಮರಳು ದಿಬ್ಬಗಳಲ್ಲಿ ಒಟ್ಟು 12.40 ಲಕ್ಷ ಮೆಟ್ರಿಕ್ ಟನ್ ಮರಳು ಗಣಿಗಾರಿಕೆಗೆ ಜಿಲ್ಲಾ ಮರಳು ಮೇಲುಸ್ತುವಾರಿ ಸಮಿತಿ ಅನುಮತಿ ನೀಡಿತ್ತು. ಒಟ್ಟು 129 ಸಾಂಪ್ರದಾಯಿಕ ಮರಳು ಗುತ್ತಿಗೆದಾರರು ಮರಳು ತೆಗೆಯಲು ಅನುಮತಿ ಪಡೆದುಕೊಂಡಿದ್ದರು. ಈಗ ಮತ್ತೆ ಇದೇ ವಿಚಾರ ಎನ್‌ಜಿಟಿ ಮೆಟ್ಟಿಲೇರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net