

ಮುಂಬೈ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ವಿಪಕ್ಷಗಳು ಒಂದುಗೂಡಿದ್ದು, ಈ ನಿಟ್ಟಿನಲ್ಲಿ ಜುಲೈ 13, 14ರಂದು ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ(NCP)ದ ಮುಖ್ಯಸ್ಥ ಶರದ್ ಪವಾರ್ ತಿಳಿಸಿದ್ಧಾರೆ.
ಜೂನ್ 23ರಂದು ಬಿಹಾರದ ಪಾಟ್ನಾದಲ್ಲಿ ನಡೆದಿದ್ದ, ವಿಪಕ್ಷಗಳ ಸಭೆಯನ್ನು ಉಲ್ಲೇಖಿಸಿ ಮಾತನಾಡಿದ ಪವಾರ್ ಮುಂದಿನ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಲಾಗುವುದು ಶಿಮ್ಲಾದಲ್ಲಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಪವಾರ್ ಜೂನ್ 23ರಂದು ಪಾಟ್ನಾದಲ್ಲಿ ನಡೆದ ಮೊದಲ ಸಭೆಯಲ್ಲಿ ಕಾಂಗ್ರೆಸ್ ಸೇರಿದಂತೆ 17ಕ್ಕೂ ಹೆಚ್ಚು ವಿಪಕ್ಷಗಳ 32 ಸದಸ್ಯರು ಭಾಗಿಯಾಗಿದ್ದರು. ಎರಡನೇ ಸಭೆ ಎಲ್ಲಿ ನಡೆಸಬೇಕು ಎಂದಾಗ ಮೊದಲಿಗೆ ಶಿಮ್ಲಾದಲ್ಲಿ ನಡೆಸುವ ಬಗ್ಗೆ ಮಾತುಕತೆ ನಡೆಸಲಾಗಿತ್ತು. ಆಧರೆ, ಕಾರಣಾಂತರಗಳಿಂದ ಬೆಂಗಳೂರಿನಲ್ಲಿ ಸಭೆ ನಡೆಸಲಾಗುತ್ತಿದ್ದು, ಇದರ ನೇತೃತ್ವವನ್ನು ಮಲ್ಲಿಕಾರ್ಜುನ ಖರ್ಗೆ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ವಿಪಕ್ಷಗಳು ನಡೆಸಿರುವ ಸಭೆಯಿಂದ ಕಂಗೆಟ್ಟಿರುವ ಪ್ರಧಾನಿ ಮೋದಿ ನಮ್ಮನ್ನು ಮಣಿಸಲು ಇನ್ನಿಲ್ಲದ ಕಾರ್ಯತಂತ್ರಗಳನ್ನು ಹೆಣೆಯಲು ತಡರಾತ್ರಿವರೆಗೂ ಸಭೆಗಳನ್ನು ನಡೆಸುತ್ತಿದ್ಧಾರೆ. ಆದರೆ, ಜನತೆ ವಿಪಕ್ಷಗಳ ಮೇಲೆ ನಂಬಿಕೆಯಿಟ್ಟಿದ್ದು, ಅವರ ತೀರ್ಮಾನವನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ತಿಳಿಸಿದ್ದಾರೆ.