

ಬೆಳ್ತಂಗಡಿ: ಪ್ರಸಕ್ತ ವರ್ಷ ರಬ್ಬರ್ ಬೆಲೆ ಏರಿಳಿತ ಕಂಡ ವರ್ಷವಾಗಿದ್ದು, ರಬ್ಬರ್ ಬೆಳೆಗಾರರು ಆತ್ಮವಿಶ್ವಾಸ ಕಳೆದುಕೊಳ್ಳುವ ಅಗತ್ಯವಿಲ್ಲ. ರಬ್ಬರ್ ಕೃಷಿಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಂಘದ ವತಿಯಿಂದ ಅನೇಕ ಯೋಜನೆ ರೂಪಿಸಲಾಗಿದೆ ಎಂದು ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ.ಭಿಡೆ ಹೇಳಿದರು.
ಉಜಿರೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೃಷಿಕರ ಭವಿಷ್ಯದ ದೃಷ್ಟಿಯಲ್ಲಿ ಬೆಂಗಳೂರಿನ ಬ್ಯಾಂಬೂ ಸೊಸೈಟಿಯೊಂದಿಗೆ ಸೇರಿ ಬಿದಿರು ಕೃಷಿಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಂಘದ ಮೂಲಕ 5000 ಗಿಡಗಳನ್ನು ವಿತರಿಸಲಾಗಿದೆ. ಆರು ವರ್ಷ ಅವಧಿಯ ಈ ಕೃಷಿಗೆ ಬ್ಯಾಂಬೂ ಸೊಸೈಟಿಯಿಂದ ಮೊದಲ ವರ್ಷ ಪ್ರತಿ ಗಿಡಕ್ಕೆ 100 ರೂ., ಎರಡನೇ ಮತ್ತು ಮೂರನೇ ವರ್ಷ ತಲಾ 50 ರೂ. ಧನಸಹಾಯ ಸಿಗಲಿದೆ. ಸಂಘದ ಸದಸ್ಯರಿಗೆ ಪ್ರತಿ ಕೆ.ಜಿ ರಬ್ಬರ್‌ಗೆ 2.50 ರೂ. ಹೆಚ್ಚುವರಿ ದರ ನೀಡಲಾಗಿದೆ. ಇದು ಸಂಘಕ್ಕೆ ನಿರಂತರ ರಬ್ಬರ್ ಪೂರೈಸುವ ಹಾಗೂ ರಬ್ಬರ್ ಸೊಸೈಟಿಯಿಂದ ಸಾಮಗ್ರಿ ಖರೀದಿಸುವ ಸದಸ್ಯರಿಗೆ ಅನ್ವಯವಾಗುತ್ತದೆ ಎಂದರು.
ಉಪಾಧ್ಯಕ್ಷ ಅನಂತ ಭಟ್, ನಿರ್ದೇಶಕರಾದ ಜಯಶ್ರೀ ಡಿ.ಎಂ., ಆರ್.ಸುಭಾಷಿಣಿ, ಬೈರಪ್ಪ, ಕೆ.ರಾಮ ನಾಯ್ಕ, ಇ.ಸುಂದರ ಗೌಡ, ಪದ್ಮ ಗೌಡ ಎಚ್, ಕೆ.ಜೆ.ಆಗಸ್ಟಿನ್, ವಿ.ವಿ.ಅಬ್ರಹಾಂ, ಬಾಲಕೃಷ್ಣ ಗೌಡ ಕೆ, ಅಬ್ರಹಾಂ ಬಿ.ಎಸ್, ಸಿಇಒ ರಾಜು ಶೆಟ್ಟಿ ಉಪಸ್ಥಿತರಿದ್ದರು.
ರಬ್ಬರ್ ಸೊಸೈಟಿಯಲ್ಲಿ ರಬ್ಬರ್ ದಾಸ್ತಾನು ಇಡುವ ಯೋಜನೆ ಇದ್ದು, ಈ ವರ್ಷ ಬೆಲೆ ಏರಿಕೆಯಿಂದ ಸದಸ್ಯರಿಗೆ ಸುಮಾರು 6.30 ಕೋಟಿ ರೂ. ಲಾಭ ದೊರಕಿದೆ. ಬೆಲೆ ಇಳಿಕೆ ವೇಳೆ ಸರ್ಕಾರಕ್ಕೆ ರಬ್ಬರ್ ಕೃಷಿಕರ ಹಿತದೃಷ್ಟಿಯಲ್ಲಿ ಅನೇಕ ಮನವಿ ನೀಡಲಾಗಿದ್ದು, ಇದುವರೆಗೆ ಯಾವುದೇ ಸ್ಪಂದನೆ ದೊರಕಿಲ್ಲ. ಸಂಘವು ವರದಿ ವರ್ಷದಲ್ಲಿ 6,421 ಕೆ.ಜಿ. ಕಾಳುಮೆಣಸು ಖರೀದಿ ಮಾಡಿದೆ. ರಸಗೊಬ್ಬರ ಮಾರಾಟ ವಿಭಾಗದಲ್ಲಿ 582 ಟನ್ ರಸಗೊಬ್ಬರ ಮಾರಾಟ ಮಾಡಲಾಗಿದೆ ಎಂದು ಶ್ರೀಧರ ಜಿ.ಭಿಡೆ ತಿಳಿಸಿದರು.
ರಬ್ಬರ್‌ಗೆ ಉತ್ತಮ ಬೇಡಿಕೆ ಇದ್ದು, ಪ್ರಸ್ತುತ ಉತ್ಪಾದನೆ ಕಡಿಮೆ ಇದೆ. ಈ ಕಾರಣದಿಂದ ಮುಂದಿನ ಹಲವು ವರ್ಷ ದರ ತೀರಾ ಕುಸಿಯುವ ಸಾಧ್ಯತೆ ಇಲ್ಲ. ಮುಂದಾಲೋಚನೆ ಮಾಡಿ ರಬ್ಬರ್ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ರಬ್ಬರ್ ಗಿಡಗಳನ್ನು ಕಡಿಯುವ ತಪ್ಪು ನಿರ್ಧಾರ ಕೃಷಿಕರು ಮಾಡಬಾರದು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಬ್ಬರ್‌ಗೆ ಬೇಡಿಕೆ ಏರಿಕೆಯಾಗುತ್ತಿದೆ. ರಬ್ಬರ್‌ನಿಂದ ಸುಮಾರು 72,000 ರೀತಿಯ ವಸ್ತುಗಳು ತಯಾರಾಗುತ್ತವೆ. - ಶ್ರೀಧರ ಜಿ.ಭಿಡೆ, ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ