ಸರ್ಕಾರಿ ಚಿತ್ರಕಲಾ ಕಾಲೇಜಿಗೆ ಸ್ವಂತಕಟ್ಟಡಕ್ಕಾಗಿ ಎಬಿವಿಪಿ ಆಗ್ರಹ

ABVP_Manavi
Published on

ತುಮಕೂರು: ನಗರದ ಸರ್ಕಾರಿ ಚಿತ್ರಕಲಾ ಕಾಲೇಜಿಗೆ ಸ್ವಂತ ನಿವೇಶನ ಹಾಗು ಕಟ್ಟಡವಿಲ್ಲವಾಗಿದ್ದು ಶೀಘ್ರ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಆಗ್ರಹಿಸಿದೆ.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶನಿವಾರ ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಅಪ್ಪುಪಾಟೀಲ್ ನೇತೃತ್ವದಲ್ಲಿ ತುಮಕೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಏಕೈಕ ಚಿತ್ರಕಲಾ ಮಹಾವಿದ್ಯಾಲಯ ಇದಾಗಿದ್ದು ಸದ್ಯ 20 ವಿದ್ಯಾರ್ಥಿಗಳಿಗೆ 6 ಉಪನ್ಯಾಸಕರು ಪಾಠ ಪ್ರವಚನಗಳು ಮಾಡುತ್ತಿದ್ದಾರೆ. ಈ ಕಾಲೇಜಿಗೆ ನಗರದಲ್ಲೇ ಸ್ವಂತ ನೀವೇಶನ ನೀಡಿ, ಕಟ್ಟಡ ನಿರ್ಮಾಣ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಲಾಯಿತು.

ಸದ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ಸೈಕಲ್ ಸ್ಟ್ಯಾಂಡ್ ಶೆಡ್‌ನಲ್ಲಿ ತರಗತಿಗಳು ನಡೆಯುತ್ತಿದ್ದು ಚಿತ್ರಕಲಾ ಶಿಕ್ಷಣಕ್ಕೆ ಅಗತ್ಯವಾದ ಪೀಠೋಪಕರಣಗಳು ಹಾಗೂ ಕಲಿಕೋಪಕರಣಗಳನ್ನು ಒದಗಿಸಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುವಂತೆ ಅಪ್ಪುಪಾಟೀಲ್ ಆಗ್ರಹಿಸಿದರು.

ಈ ಚಿತ್ರಕಲಾ ಕಾಲೇಜು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆಯುತ್ತಿದ್ದು ಪ್ರಾರಂಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಡಳಿತದಲ್ಲಿದ್ದವು. 2012 ರಿಂದ ಸರ್ಕಾರದ ಆದೇಶದ ಮೇರೆಗೆ ಈ ಕಾಲೇಜುನ್ನು ತಾಂತ್ರಿಕ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲಾಗಿದೆ. ಪುನಃ ಏಪ್ರಿಲ್ 2018 ರಿಂದ ಸರ್ಕಾರದ ಆದೇಶದ ಮೇರೆಗೆ ಕಾಲೇಜು ಶಿಕ್ಷಣ ಇಲಾಖೆಗೆ ಹಸ್ತಾಂತರಗೊಂಡು ಕಾರ್ಯ ನಿರ್ವಹಿಸುತ್ತಿದೆ. ಈ ಕಾಲೇಜಿಗೆ ತುಮಕೂರು ನಗರದಲ್ಲೇ ಸ್ವಂತ ನೀವೇಶನ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಹೋರಾಟದಲ್ಲಿ ಜಿಲ್ಲಾ ಸಂಚಾಲಕ ಗುರುಪ್ರಸಾದ್, ಧನುಷ್, ವಿನುತಾ, ಹರ್ಷಿತಾ, ದೀಪುಗೌಡ, ಕಿರಣ್, ವಿದ್ಯಾ, ಅಕ್ಷತಾ, ಪಲ್ಲವಿ, ಭರತ, ಹರಿಣಿ, ಸೂಕ್ತ ಹಾಗೂ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net