ನಿರುದ್ಯೋಗಿಗಳಿಗೆ ಸರ್ಕಾರದಿಂದ ಹೊಸ ಕಾರ್ಯಕ್ರಮ

25byd1
Published on

ಬ್ಯಾಡಗಿ: ಪದವೀಧರ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಹೊಸ ಕಾರ್ಯಕ್ರಮ ಜಾರಿಗೊಳಿಸುವ ಚಿಂತನೆ ನಡೆಸಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

ಪಟ್ಟಣದ ತಾಲೂಕು ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಜನಸಂಖ್ಯೆ ಹೆಚ್ಚಿದಂತೆ ನಿರುದ್ಯೋಗ ಸಮಸ್ಯೆ ಉದ್ಭವಿಸುತ್ತಿವೆ. ಎಲ್ಲರಿಗೂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಔದ್ಯೋಗಿಕ ಬೆಳವಣಿಗೆ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ತಾಂತ್ರಿಕ ಶಿಕ್ಷಣಕ್ಕೂ ನಾವು ಮನ್ನಣೆ ನೀಡಬೇಕು. ಪದವೀಧರರ ಸಂಖ್ಯೆ ಏರಿಕೆಯಾಗುತ್ತಿದ್ದು, ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಯತ್ನಿಸುತ್ತಿದೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ನಡೆಯಲಿದೆ. ಹಾವೇರಿಯಲ್ಲಿ ಜರುಗುವ ಸಾಹಿತ್ಯ ಸಮ್ಮೇಳನ ಕುರಿತು ಕಸಾಪ ಅಧ್ಯಕ್ಷರು, ಉಸ್ತುವಾರಿ ಸಚಿವರು, ಜಿಲ್ಲೆಯ ಎಲ್ಲ ಶಾಸಕರು, ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಸ್ಥಳ ಪರಿಶೀಲಿಸಿ, ಸಭೆ ನಡೆಸಿದ್ದೇವೆ. ಫೆಬ್ರವರಿ ಎರಡನೇ ವಾರದಲ್ಲಿ ಸಮ್ಮೇಳನ ನಡೆಸಲು ಸಿದ್ಧತೆ ನಡೆದಿದೆ. ಆದರೆ, ಎರಡನೇ ಹಂತದಲ್ಲಿ ಕರೊನಾ ಉಲ್ಬಣವಾಗದಿದ್ದಲ್ಲಿ ಸಮ್ಮೇಳನಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂದರು.

ಶಿವಾನಂದ ಯಮನಕ್ಕನವರ, ಪುರಸಭೆ ಅಧ್ಯಕ್ಷೆ ಕವಿತಾ ಸೊಪ್ಪಿನಮಠ, ತಾಲೂಕು ಬಿಜೆಪಿ ಅಧ್ಯಕ್ಷ ಸುರೇಶ ಅಸಾದಿ, ಕಾರ್ಯದರ್ಶಿ ಶಿವಯೋಗಿ ಶಿರೂರು, ಪುರಸಭೆ ಸದಸ್ಯರಾದ ಫಕೀರಮ್ಮ ಚಲವಾದಿ, ವಿನಯ ಹಿರೇಮಠ, ವಿಷ್ಣುಕಾಂತ ಬೆನ್ನೂರು, ಪರಶುರಾಮ ಉಜನಿಕೊಪ್ಪ, ಸಂಜೀವ ಮಡಿವಾಳರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net