ಅಬಕಾರಿ ಆದಾಯ ಹೆಚ್ಚಳಕ್ಕೆ ಹೊಸ ನೀತಿ ಅಗತ್ಯ:ಎಂಎಸ್​ಐಎಲ್​ ಮದ್ಯದಂಗಡಿಗೆ ನೀಡಬೇಕಿದೆ ಉತ್ತೇಜನ

drinks nw
Published on

ಬೆಂಗಳೂರು: ಕಂದಾಯ ಇಲಾಖೆ ಮಾದರಿಯಂತೆ ಅಬಕಾರಿ ಇಲಾಖೆ, ಡಿಜಿಟಲೀಕರಣವಾಗುತ್ತಿದ್ದರೂ ಹಳೆಯ ಕಾಯ್ದೆಗಳನ್ನು ಪರಿಷ್ಕರಿಸುವ ಮೂಲಕ ರಾಜಸ್ವ ಹೆಚ್ಚಿಸಲು ಹೊಸ ನೀತಿಗಳನ್ನು ಜಾರಿಗೆ ತರಬೇಕಿದೆ.

ಪ್ರತಿ ವರ್ಷ ಸರ್ಕಾರದ ಬೊಕ್ಕಸಕ್ಕೆ ರಾಜಸ್ವ ತುಂಬಿಸುವಲ್ಲಿ ಇತರೆ ಇಲಾಖೆಗಿಂತ ಅಬಕಾರಿ ಇಲಾಖೆ ಮುಂಚೂಣಿಯಲ್ಲಿದೆ. ಆದರೂ 2 ವರ್ಷಗಳಿಂದ ಒಂದಿಲ್ಲೊಂದು ಕಾರಣದಿಂದ ಅಬಕಾರಿ ಆದಾಯದಲ್ಲಿ ತುಸು ಕುಸಿತವಾಗುತ್ತಿದೆ. ಆದ್ದರಿಂದ, ಆದಾಯ ಸೋರಿಕೆ ತಡೆಗೆ ಇಲಾಖೆ ಕ್ರಮ ತೆಗೆದುಕೊಳ್ಳಬೇಕಿದೆ. ಇಲಾಖೆಯಲ್ಲಿ ನಡೆಯುತ್ತಿರುವ ಲಂಚಬಾಕಕ್ಕೆ ಕಡಿವಾಣ ಹಾಕುವುದು, ಹೊಸ ರಾಜ್ಯಗಳಲ್ಲಿ ಅಳವಡಿಸಿಕೊಂಡಿರುವ ಅತ್ಯುತ್ತಮ ಪಾಲಿಸಿಗಳನ್ನು ಅಧ್ಯಯನ ನಡೆಸಿ ರಾಜ್ಯದಲ್ಲಿ ಅನುಷ್ಠಾನಕ್ಕೆ ತರುವುದು, ನಿಯಮ ಉಲ್ಲಂಘಿಸಿ ಹೋಟೆಲ್​ ಮತ್ತು ವಸತಿ ಗೃಹ( ಸಿಎಲ್​&7) ಮದ್ಯದಂಗಡಿಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳಿಗೆ ಬ್ರೇಕ್​ ಹಾಕುವುದು, ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಎಸ್​ಐಎಲ್​ಗೆ ಉತ್ತೇಜನ ನೀಡುವುದು, ಹರಾಜು ಬದಲು ರಾಜಸ್ವ ಹೆಚ್ಚಿಸಲು ಪಾಲಿಸಿ ತರುವುದು ಹಾಗೂ ಖಾಲಿ ಹುದ್ದೆಗಳ ಭರ್ತಿ ಸೇರಿ ಇತರೆ ಕ್ರಮ ತೆಗೆದುಕೊಳ್ಳಬೇಕಿದೆ.

ಅಲ್ಲದೆ, ಗೋವಾ ಸೇರಿ ಇತರೆ ರಾಜ್ಯಗಳ ಮದ್ಯ ಮಾರಾಟವನ್ನು ರಾಜ್ಯದಲ್ಲಿ ನಿಷೇಧಿಸಿದ್ದರೂ ಖಾಸಗಿ ವಾಹನ, ಬೋಟ್​, ದೋಣಿ ಹಾಗೂ ಯಾಂತ್ರೀಕೃತ ಬೋಟ್​ಗಳ ಮೂಲಕ ಸಾಗಾಣೆ ಮಾಡಿ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಸರ್ಕಾರಕ್ಕೆ ಹತ್ತಾರು ಕೋಟಿ ರೂ.ಆದಾಯ ನಷ್ಟವಾಗುತ್ತಿದೆ. ಹಾಗಾಗಿ, ಅಡ್ಡದಾರಿಯಿಂದ ಬರುತ್ತಿರುವ ಹೊರ ರಾಜ್ಯಗಳ ಮದ್ಯ ಮಾರಾಟ ತಡೆಗೆ ಪರಿಣಾಮಕಾರಿಯಾಗಿ ಕಡಿವಾಣ ಹಾಕುವ ಜೊತೆಗೆ ರಾಜ್ಯದಲ್ಲಿ ರಾಜರೋಷವಾಗಿ ನಡೆಯುತ್ತಿರುವ ನಕಲಿ ಮದ್ಯ ಮಾರಾಟ ಬುಡಸಮೇತ ಕಿತ್ತು ಹಾಕಬೇಕು.ಅಬಕಾರಿ ಉದ್ಯಮದ ಸುಗಮ ವ್ಯವಸ್ಥೆ ಮತ್ತು ದೈನಂದಿನ ಸಮಸ್ಯೆಗಳ ಪರಿಹಾರಕ್ಕಾಗಿ "ಸಮನ್ವಯ ಸಮಿತಿ' ರಚಿಸಿದರೆ ಸರ್ಕಾರಕ್ಕೆ ಬರುವ ವರಮಾನವೂ ಹೆಚ್ಚಳವಾಗಲಿದೆ. ಸನ್ನದು ನವೀಕರಣಕ್ಕೆ ಒಂದೇ ನಿಯಮ ಜಾರಿಗೆ ತರಬೇಕು.ಮಿಲಿಟರಿ ಕ್ಯಾಂಟಿನ್​ ಸ್ಟೋರ್​ಗಳಲ್ಲಿ ಡ್ಯೂಟಿ ಫ್ರೀ ಹೆಸರಿನಲ್ಲಿ ನಕಲಿ ಮದ್ಯ ಲಭ್ಯವಾಗುತ್ತಿದೆ. ಗೋವಾದಲ್ಲಿ ತಯಾರಿಯಾಗುವ ಮದ್ಯ ರಾಜ್ಯದಲ್ಲಿ ಸಿಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಡಾಬಾ, ಮಾಂಸಾಹಾರಿ ಹೋಟೆಲ್​, ಕಿರಾಣಿ ಅಂಗಡಿಗಳು ಸೇರಿ ಗ್ರಾಮೀಣ ಪ್ರದೇಶದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ತಡೆಗೆ ಇಲಾಖೆ ಕ್ರಮಕೈಗೊಳ್ಳಬೇಕು.

ಕಾಯ್ದೆಗಳನ್ನು ಮತ್ತಷ್ಟು ಪರಿಣಾಮಕಾರಿ ಜಾರಿಗೆ ತರಲು ಅಬಕಾರಿ ಅಕಾಡೆಮಿ ಕೇಂದ್ರ ಸ್ಥಾಪಿಸಬೇಕು. ಆದಾಯ ಸೋರಿಕೆ ತಡೆಗೆ ಹಾಗೂ ನಿಯಮಗಳನ್ನು ಕಾರ್ಯರೂಪಕ್ಕೆ ತರಲು ಇಲಾಖೆಯನ್ನು ಪುನರ್​ ರಚಿಸಬೇಕು. ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಇಲಾಖೆಯ ಕಾರ್ಯವೈಖರಿಯನ್ನು ಇನ್ನಷ್ಟು ಉತ್ತಮಗೊಳಿಸಬೇಕು. ಹೀಗಾಗಿ, ಈ ಮೇಲಿನ ಎಲ್ಲ ಕ್ರಮ ತೆಗೆದುಕೊಂಡರೆ ಅಬಕಾರಿ ಆದಾಯವೂ ಗಣನೀಯವಾಗಿ ಹೆಚ್ಚಳವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net