

ಚಿಕ್ಕಬಳ್ಳಾಪುರ: ಕನ್ನಡವನ್ನು ವೃತ್ತಿಪರ ಹೆಚ್ಚಿನ ವ್ಯವಹಾರ, ಅನ್ನದ ಭಾಷೆಯನ್ನಾಗಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಹೊಸದಾಗಿ ದೊಡ್ಡ ಜನಾಂದೋಲನದ ಅಗತ್ಯವಿದೆ ಎಂದು ಕನ್ನಡ ಅಭಿವದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಇಂದಿಗೂ ರಾಜ್ಯದಲ್ಲಿ ಕನ್ನಡ ನಾಡು ನುಡಿಯನ್ನು, ಕನ್ನಡಿಗರನ್ನು ಕಡೆಗಣಿಸುವ ವ್ಯಕ್ತಿಗಳು ಹೆಚ್ಚಾಗಿದ್ದಾರೆ. ಇಲ್ಲಿನ ಅನ್ನ ನೀರು ಸೇವಿಸಿ ದುಡಿಮೆಯಲ್ಲಿ ಆದಾಯ ನೆಚ್ಚಿಕೊಂಡಿದ್ದರೂ ಕನ್ನಡತನಕ್ಕೆ ಗೌರವ ಕೊಡದಿರುವುದು ದೊಡ್ಡ ವಂಚನೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಕನ್ನಡ ಭಾಷೆಯ ಅಧ್ಯಯನ, ವ್ಯವಹಾರಕ್ಕೆ ಹೆಚ್ಚಿನ ಮಹತ್ವ ನೀಡುವ ಜತೆಗೆ ಶಿಕ್ಷಣದಲ್ಲಿ ಕೌಶಲಗಳ ವೃದ್ಧಿಯ ವಿಶೇಷ ತರಬೇತಿಗಳ ಅಗತ್ಯವಿದೆ. ಇದರ ಕೊರತೆಯಿಂದ ಕೇಂದ್ರ ಸರ್ಕಾರದ ಅಧೀನ ಕಚೇರಿಗಳು, ದೊಡ್ಡ ಖಾಸಗಿ ಸಂಸ್ಥೆಗಳಲ್ಲಿ ಕನ್ನಡ ಮಾಧ್ಯಮದವರಿಗೆ ಆದ್ಯತೆ ಸಿಗುತ್ತಿಲ್ಲ. ಉದ್ಯೋಗಾವಕಾಶಗಳಿಂದ ವಂಚಿತರಾಗುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್, ಸದಸ್ಯರಾದ ರವಿಕುವಾರ್ ನೀಹಾ, ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಪಂ ಸಿಇಒ ಪ್ರಕಾಶ್ ನಿಟ್ಟಾಲಿ, ಎಡಿಸಿ ಡಾ ಎನ್.ಭಾಸ್ಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುವಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೋಡಿರಂಗಪ್ಪ ಮತ್ತಿತರರು ಇದ್ದರು.
ಸಂಸದರು ಒತ್ತಡ ಹೇರಲಿ
ಕೇಂದ್ರ ರೈಲ್ವೆ, ಬ್ಯಾಂಕಿಂಗ್, ಅಂಚೆ ಕಚೇರಿ ಸೇರಿ ವಿವಿಧ ಹುದ್ದೆಗಳ ನೇಮಕದಲ್ಲಿ ಕನ್ನಡಿಗರು ಹಿನ್ನಡೆ ಅನುಭವಿಸುತ್ತಿದ್ದಾರೆ. ಹಿಂದೆ ಪ್ರಾದೇಶಿಕ ನೇಮಕಾತಿ ಪ್ರಾಧಿಕಾರದಿಂದ ಆಯ್ಕೆ ವೇಳೆ ಸ್ಥಳೀಯರಿಗೆ ಆದ್ಯತೆ ನೀಡಲಾಗುತ್ತಿತ್ತು. ಈಗ ರಾಷ್ಟ್ರೀಯ ನೇಮಕಾತಿ ಪ್ರಾಧಿಕಾರವು ರಾಜ್ಯದಲ್ಲಿನ ಹುದ್ದೆಗಳಿಗೆ ಹೊರ ಭಾಗದವರನ್ನು ನೇಮಿಸುತ್ತಿದೆ. ಇದರ ಬಗ್ಗೆ ಈಗಾಗಲೇ ಕೇಂದ್ರ ಸಚಿವರ ಗಮನ ಸೆಳೆಯಲಾಗಿದೆ. ಈ ನಿಟ್ಟಿನಲ್ಲಿ ಕನ್ನಡಕ್ಕೆ ಸೂಕ್ತ ಸ್ಥಾನಮಾನ, ಅಭಿವೃದ್ಧಿ ವಿಚಾರದಲ್ಲಿ ರಾಜ್ಯದ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಪುರುಷೋತ್ತಮ ಬಿಳಿಮಲೆ ಒತ್ತಾಯಿಸಿದರು.
ರಾಜ್ಯದಲ್ಲಿನ ವಿವಿಧ ರಾಷ್ಟ್ರೀಯ ಬ್ಯಾಂಕುಗಳಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿ ಬಹುತೇಕ ಹಿಂದಿ ಹಾಗೂ ತೆಲುಗು ಭಾಷಿಕರು ಅಥವಾ ಹೊರರಾಜ್ಯದವರೇ ಅಧಿಕವಾಗಿ ಇದ್ದು. ಇದಕ್ಕೆ ಇತರ ರಾಜ್ಯ ಸರ್ಕಾರಗಳು ವಿಶೇಷ ಕೌಶಲ ತರಬೇತಿ, ಮಾರ್ಗದರ್ಶನ ನೀಡುತ್ತಿವೆ. ಆ ಭಾಗದವರು ಹೆಚ್ಚಿಗೆ ನೇಮಕವಾಗುವಂತೆ ನೋಡಿಕೊಳ್ಳಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ನಿರೀಕ್ಷೆಗೆ ಅನುಗುಣವಾಗಿ ಕೆಲಸವಾಗುತ್ತಿಲ್ಲ. ಮತ್ತೊಂದೆಡೆ ಅನ್ಯಭಾಷಿಕರೊಂದಿಗೆ ಕನ್ನಡ ಭಾಷಿಕರು ವ್ಯವಹರಿಸಲು ತೊಂದರೆ ಅನುಭವಿಸುವಂತಾಗಿದೆ ಎಂದು ಬೇಸರಿಸಿದರು.
ಊರುಗಳ ಹೆಸರಿನ ಸಮಸ್ಯೆಗೆ ಪರಿಹಾರ
ಅಂತರ್ಜಾಲದಲ್ಲಿ ರಾಜ್ಯದ ಸಾವಿರಕ್ಕೂ ಹೆಚ್ಚು ಹಳ್ಳಿಗಳ ಹೆಸರು ತಪ್ಪಾಗಿ ಬಳಕೆಯಾಗುತ್ತಿವೆ. ಅದರಲ್ಲೂ ಗೂಗಲ್ ವ್ಯಾಪ್ ಬಳಸುವವರಿಗೆ ಊರಿನ ಹೆಸರುಗಳ ಸಂದೇಶವು ಸ್ಪಷ್ಟವಾಗಿ ರವಾನೆಯಾಗದೇ ಗೊಂದಲ, ಸಮಸ್ಯೆ ಸೃಷ್ಟಿಯಾಗುತ್ತಿದೆ. ಇದನ್ನು ಸರಿಪಡಿಸಲು ಕಂದಾಯ ಇಲಾಖೆ, ಗೂಗಲ್ ಹಾಗೂ ಕನ್ನಡ ಅಭಿವದ್ಧಿ ಪ್ರಾಧಿಕಾರದ ಸಮನ್ವಯದೊಂದಿಗೆ ಹೊಸ ಯೋಜನೆ ರೂಪಿಸಲು ಪ್ರಾಧಿಕಾರ ಮುಂದಾಗಿದೆ. ರಾಜ್ಯದ 72 ಸಾವಿರ ಹಳ್ಳಿಗಳ ಹೆಸರುಗಳನ್ನು ಈಗಾಗಲೇ ಧ್ವನಿಮುದ್ರಣ ವಾಡಿ, ಹೇಗೆ ಊರುಗಳ ಹೆಸರುಗಳನ್ನು ಸ್ಪಷ್ಟವಾಗಿ ಉಚ್ಚರಿಸಬೇಕೆಂಬ ವರದಿಯನ್ನು ಸಿದ್ಧಪಡಿಸಲಾಗಿದೆ. ಕಂದಾಯ ಇಲಾಖೆಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ದಾಖಲಿಸಿರುವ ಊರಿನ ಹೆಸರಿನ ಧ್ವನಿಮುದ್ರಣವನ್ನು ಪೂರಕವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಪುರಷೋತ್ತಮ ಬಿಳಿಮಲೆ ಹೇಳಿದರು.
ಪ್ರಾಧಿಕಾರ ಮುಚ್ಚೋದೆ ಒಳ್ಳೇದು
ಕನ್ನಡ ಅಭಿವದ್ಧಿ ಪ್ರಾಧಿಕಾರಕ್ಕೆ ಪ್ರಸ್ತುತ ವಾರ್ಷಿಕ ಕೇವಲ 2 ಕೋಟಿ ರೂ. ಅನುದಾನ ನೀಡುತ್ತಿದ್ದು, ಇದರಿಂದ ರಾಜ್ಯಾದ್ಯಂತ ಕನ್ನಡಪರ ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳಲು ತೊಂದರೆಯಾಗುತ್ತಿದೆ. ಪ್ರಾಧಿಕಾರಕ್ಕೆ ಕನಿಷ್ಠ 30 ಕೋಟಿ ರೂ. ಅನುದಾನದ ಅಗತ್ಯವಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಕನಿಷ್ಠ 5 ಕೋಟಿ ರೂ ಬಿಡುಗಡೆಗೊಳಿಸುವ ನಿರೀಕ್ಷೆ ಇದೆ ಎಂದು ಪುರುಷೋತ್ತಮ ಬಿಳಿಮಲೆ ತಿಳಿಸಿದರು. ಪ್ರಾಧಿಕಾರಕ್ಕೆ ಕೇವಲ ಕನ್ನಡ ಅನುಷ್ಠಾನ ಪ್ರಗತಿಯ ಪರಿಶೀಲನೆ, ವರದಿ ಸಲ್ಲಿಸುವ ಅಧಿಕಾರ ಇದೆ. ಆದರೆ, ಸಮಸ್ಯೆಗಳ ಪರಿಹಾರ ಒದಗಿಸುವ ಶಕ್ತಿ ಇಲ್ಲ. ಹೇಳೋದಕ್ಕಷ್ಟೇ ಇರುವಂತಹುವ ಪ್ರಾಧಿಕಾರವನ್ನು ಮುಚ್ಚುವುದೇ ಒಳ್ಳೆಯದು ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಅಹವಾಲು ಸಲ್ಲಿಕೆ
ಕನ್ನಡಪರ ಹೋರಾಟಗಾರರ ಕಡೆಗಣನೆ, ಹೋರಾಟ ಹತ್ತಿಕ್ಕುವ ಅಧಿಕಾರಿಗಳ ಧೋರಣೆ, ವಿವಿಧೆಡೆ ಪರಭಾಷಾ ಹಾವಳಿ, ನಾಡುನುಡಿ ವಿಚಾರವಾಗಿ ಅನ್ಯಭಾಷಿಕ ಸಿಬ್ಬಂದಿ ಅಸಡ್ಡೆ ಧೋರಣೆ... ಇವು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕನ್ನಡ ಪರ ಹೋರಾಟಗಾರರು, ಸಾಹಿತಿಗಳು ಸಲ್ಲಿಸಿದ ಅಹವಾಲುಗಳು. ಇದರ ಬಗ್ಗೆ ಅಧ್ಯಕ್ಷರು ಜಿಲ್ಲಾಡಳಿತದ ಗಮನ ಸೆಳೆದು, ಪರಿಹಾರಕ್ಕೆ ಗಡುವು ನೀಡಿದರು.
ಭವನದಲ್ಲಿ ಅವಕಾಶ
ನೂತನವಾಗಿ ನಿರ್ಮಾಣವಾಗಿರುವ ಕನ್ನಡ ಭವನದಲ್ಲಿ ನಾಡು ನುಡಿಯ ಕಾರ್ಯಕ್ರಮಗಳನ್ನು ಕೈಗೊಳ್ಳಲು ಕನ್ನಡಪರ ಸಂಘ ಸಂಸ್ಥೆಗಳಿಗೂ ವಿಶೇಷ ಆದ್ಯತೆ, ಬಾಡಿಗೆಯಲ್ಲಿ ರಿಯಾಯಿತಿ ನೀಡಲು ಜಿಲ್ಲಾಡಳಿತಕ್ಕೆ ಪುರುಷೋತ್ತಮ ಬಿಳಿಮಲೆ ಸೂಚಿಸಿದರು.
"ರಾಜ್ಯಮಟ್ಟದ ಬ್ಯಾಂಕುಗಳ ಸಮಿತಿ ಸಹಕಾರದೊಂದಿಗೆ ಕನ್ನಡೇತರ ಅಧಿಕಾರಿ ಮತ್ತು ಸಿಬ್ಬಂದಿಗೆ ಗ್ರಾಹಕರೊಂದಿಗೆ ವ್ಯವಹರಿಸಲು ಕಡ್ಡಾಯವಾಗಿ ಕನ್ನಡ ಭಾಷೆಯ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗುವುದು. ಬ್ಯಾಂಕುಗಳಲ್ಲಿ ಕನ್ನಡಿಗ ಅಧಿಕಾರಿ ಸಿಬ್ಬಂದಿ ಪ್ರಾತಿನಿಧ್ಯ ಹೆಚ್ಚಿಸಲು ಪ್ರಾದೇಶಿಕ ಬ್ಯಾಂಕಿಂಗ್ ನೇಮಕಾತಿ ಮಂಡಳಿಯನ್ನು ಆರಂಭಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು." - ಪುರುಷೋತ್ತಮ ಬಿಳಿಮಲೆ, ಕನ್ನಡ ಅಭಿವದ್ಧಿ ಪ್ರಾಧಿಕಾರದ ಅಧ್ಯಕ್ಷ