

ತುಮಕೂರು: ಲಿಂಗಾಯತರು ಬಹಳ ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷವನ್ನ ಈ ಬಾರಿ ಕೈ ಹಿಡಿದಿದ್ದು ಸೂಕ್ತವಾದ ನ್ಯಾಯವನ್ನ ಒದಗಿಸುವಂತೆ ಹೈಕಮಾಂಡ್‌ಗೆ ಮನವರಿಕೆ ಮಾಡಲಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಸಿದ್ದಗಂಗಾ ಮಠಕ್ಕೆ ಸೋಮವಾರ ಮಧ್ಯಾಹ್ನ ಭೇಟಿ ನೀಡಿದ ಎಂ.ಬಿ.ಪಾಟೀಲ್, ಶಿವಕುಮಾರ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಆಶೀರ್ವಾದ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಕೇವಲ ಲಿಂಗಾಯತರಲ್ಲ. ಎಲ್ಲಾ ಧರ್ಮದವರು ಬೆಂಬಲ ನೀಡಿದ್ದಾರೆ. ಪರಿಶಿಷ್ಟ ಜಾತಿ, ವಾಲ್ಮೀಕಿ ಸಮಾಜ, ಮುಸ್ಲಿಂರು ಸಹ ಬೆಂಬಲಿಸಿದ್ದ ಅಪಪ್ರಚಾರದಿಂದ ದೂರ ಇದ್ದತಂಹ ಲಿಂಗಾಯತರು ಈ ಬಾರಿ ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್ ಕೈ ಹಿಡಿದ್ದಾರೆ ಎಂದರು.
ಶೆಟ್ಟರ್‌ಗೆ ಸೂಕ್ತ ಸ್ಥಾನಮಾನ: ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲರು ಮಾಜಿ ಸಿಎಂ ಜಗದೀಶ್ ಶೆಟ್ಟರ್‌ರನ್ನು ಕಾಂಗ್ರೆಸ್‌ಗೆ ಕರೆತಂದಿದ್ದೇವೆ. ಅವರಿಗೆ ಸೋಲುಂಟಾಗಿದೆ. ಆದರೂ ಸಹ ಅವರಿಗೆ ಸೂಕ್ತ ಸ್ಥಾನಮಾನ ಕೊಡಲು ನಾವೆಲ್ಲ ತೀರ್ಮಾನ ಮಾಡಿದ್ದು ಎಲ್ಲರ ಸಹಮತ ಇದೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪಾಟೀಲ್ ಸ್ಪಷ್ಟಪಡಿಸಿದರು.