ಹೊಸ ಮೆಗಾ ಡೇರಿ ಫೆಬ್ರವರಿಯಲ್ಲಿ ಪೂರ್ಣ

ಹೊಸ ಮೆಗಾ ಡೇರಿ ಫೆಬ್ರವರಿಯಲ್ಲಿ ಪೂರ್ಣ
Published on

ಹಾಸನ: ಹಾಸನದಲ್ಲಿ 795 ಕೋಟಿ ರೂ. ವೆಚ್ಚದಲ್ಲಿ ಹೊಸ ಮೆಗಾ ಡೇರಿ ನಿರ್ಮಾಣ ಮಾಡಲಾಗುತ್ತಿದ್ದು, ಇದು ದಕ್ಷಿಣ ಭಾರತದಲ್ಲೇ ದೊಡ್ಡ ಡೇರಿಯಾಗಲಿದೆ ಎಂದು ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಎಚ್.ಡಿ. ರೇವಣ್ಣ ಹೇಳಿದರು.

ಹಾಸನ ಡೇರಿ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ವಾರ್ಷಿಕ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೆಇಡಿಬಿ ಮೂಲಕ 66 ಎಕರೆ ಜಾಗ ಖರೀದಿಸಿ 10 ಲಕ್ಷ ಲೀಟರ್ ಸಾಮರ್ಥ್ಯದ ಘಟಕ ನಿರ್ಮಿಸಲಾಗುತ್ತಿದೆ. 60 ಮೆ.ಟನ್ ಹಾಲಿನ ಪುಡಿ ಘಟಕ, ತುಪ್ಪ, ಪನ್ನೀರ್ ಪ್ಲಾಂಟ್, 10 ರಿಂದ 12 ಮಾದರಿಯ ಸಿಹಿ ತಿನಿಸು, ಪನ್ನೀರ್ ಪ್ಲಾಂಟ್, ಹಾಸನ ಹಾಲು ಒಕ್ಕೂಟ ಬೆಳೆದು ಬಂದ ಹಾದಿ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಶೇ.90ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಮುಂಬರುವ ಫೆಬ್ರವರಿ ಒಳಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಡೇರಿ ಉದ್ಘಾಟನೆಗೆ ಪ್ರಧಾನಿ ನರೇಂದ್ರಮೋದಿ ಅವರನ್ನು ಕರೆಸುವ ಚಿಂತನೆ ಇದ್ದು, ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರ ಜತೆ ಚರ್ಚಿಸಲಾಗುವುದು. ಅಲ್ಲದೆ ಪ್ರಸ್ತುತ ಇರುವ ಡೇರಿಯ ಹಳೇ ಕಟ್ಟಡಗಳನ್ನು ಕೆಡವಿ 5-6 ಕೋಟಿ ರೂ. ವೆಚ್ಚದಲ್ಲಿ ನೂತನ ಕಾಮಗಾರಿ ನಡೆಸಲಾಗುವುದು ಎಂದರು.

31 ವರ್ಷದ ಹಿಂದೆ ಡೇರಿಯಲ್ಲಿ ವಾರ್ಷಿಕ 3-4 ಕೋಟಿ ರೂ. ವಹಿವಾಟು ನಡೆಸಲಾಗುತ್ತಿತ್ತು. ನಾನು ಅಧ್ಯಕ್ಷನಾದ ನಂತರದಲ್ಲಿ ಪ್ರಸ್ತುತ 3 ಸಾವಿರ ಕೋಟಿ ರೂ. ವಹಿವಾಟು ನಡೆಸಲಾಗುತ್ತಿದೆ. ಸರ್ಕಾರ ನಿಗದಿಪಡಿಸಿರುವ ಹಣಕ್ಕಿಂತ ಕಡಿಮೆ ವೆಚ್ಚದಲ್ಲಿ ಆಡಳಿತಾತ್ಮಕ ಕೆಲಸ ಮಾಡಲಾಗುತ್ತಿದೆ. ಬೆಂಗಳೂರು ಡೇರಿಯಲ್ಲಿ ಆಡಳಿತಾತ್ಮಕ ಖರ್ಚಿಗೆ ಶೇ.4.49 ಹಣ ಬಳಕೆ ಮಾಡಲಾಗುತ್ತಿದೆ. ದಕ್ಷಿಣ ಕನ್ನಡ ಶೇ.3.30, ಮಂಡ್ಯ ಶೇ. 2.95, ಮೈಸೂರು ಶೇ.3, ಬಳ್ಳಾರಿ ಶೇ.5.83, ಧಾರವಾಡದಲ್ಲಿ ಶೇ.5.19 ಆಡಳಿತಾತ್ಮಕ ಕೆಲಸಕ್ಕೆ ಬಳಸಲಾಗುತ್ತಿದೆ. ಆದರೆ ಹಾಸನ ಡೇರಿಯಲ್ಲಿ ಕೇವಲ 1.69 ಮಾತ್ರ ವೆಚ್ಚ ಮಾಡಲಾಗುತ್ತಿದೆ ಎಂದರು.

ಹಾಸನ ಡೇರಿ 14.34 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುವ ಮೂಲಕ ರಾಜ್ಯಕ್ಕೆ ಎರಡನೇ ಸ್ಥಾನದಲ್ಲಿದ್ದೇವೆ. ಮೆಗಾ ಡೇರಿ ಸ್ಥಾಪನೆ ನಂತರ 25 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುವ ಚಿಂತನೆ ಇದೆ. ಸದ್ಯ ನಾವು ಭಾರತ-ಚೀನಾ ಗಡಿ, ಪಾಕಿಸ್ತಾನ ಗಡಿಯವರೆಗೆ ಹಾಲು ಪೂರೈಕೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಬೆಂಗಳೂರು ಡೇರಿ ಹಿಂದಿಕ್ಕಿ ನಂ.1 ಸ್ಥಾನಗಳಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.

ಹಾಮುಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಸಂಘದ ನಿರ್ದೇಶಕರಾದ ಸತೀಶ್ ಹೊನ್ನವಳ್ಳಿ, ನಾರಾಯಣ, ರಾಮಚಂದ್ರ, ಸ್ವಾಮಿಗೌಡ, ಎಚ್.ಎಸ್. ಬಸವರಾಜ, ನಿಂಗರಾಜು, ಎಚ್.ಡಿ. ಸುನಾಲ್, ಎಚ್.ಟಿ. ಆಶಾ, ವಸಂತ, ಎಂ.ಎಸ್. ಸತೀಶ್‌ಕುಮಾರ್, ಕೆ.ಎಸ್. ಮಂಜೇಗೌಡ ಇತರರಿದ್ದರು.

ಸ್ವಂತಕ್ಕೆ ಏನೂ ಮಾಡಿಕೊಂಡಿಲ್ಲ: ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಿಸಬೇಕೆಂದು ಸಾವಿರ ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಯಿತು. ಅದರಲ್ಲಿ 220 ಎಕರೆ ಸರ್ಕಾರಿ ಜಮೀನಿದ್ದು, ಅದನ್ನು ಕಬಳಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಎಚ್.ಡಿ.ರೇವಣ್ಣ ದೂರಿದರು.

ಸೋಮನಹಳ್ಳಿ ಕಾವಲಿನಲ್ಲಿ 440 ಎಕರೆಯಲ್ಲಿ 160 ಕೋಟಿ ರೂ. ವೆಚ್ಚದಲ್ಲಿ ತೋಟಗಾರಿಕಾ ಮಹಾವಿದ್ಯಾಲಯ ತೆರೆಯಲು ಎಚ್.ಡಿ. ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ನಿರ್ಧರಿಸಲಾಗಿತ್ತು. ನಂತರ ಅಧಿಕಾರಕ್ಕೆ ಬಂದ ಸರ್ಕಾರ ಅದಕ್ಕೆ ಕೊಕ್ಕೆ ಹಾಕಿತು. 250 ಕೋಟಿ ರೂ. ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸಿದ್ದೇನೆ. ಹೊಸ ಬಸ್ ನಿಲ್ದಾಣ, ಆಸ್ಪತ್ರೆ, ರಾಷ್ಟ್ರೀಯ ಹೆದ್ದಾರಿ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಹೀಗೆ ಎಲ್ಲ ಕೆಲಸ ಮಾಡಿದ್ದೇನೆ. ಇವರು ಬಂದು ನಾನು ಕಟ್ಟಿಸಿದ ಕಟ್ಟಡಗಳನ್ನು ಉದ್ಘಾಟಿಸಿ ಹೋಗುತ್ತಾರೆಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನಾನು ಏನಂತ ಮುಂದೆ ತೋರಿಸ್ತಿನಿ: ಕೆಲವರು ರೇವಣ್ಣನ ಕಾಲ ಮುಗೀತು ಅಂತಾರೆ. ಕಾದು ನೋಡಿ, ನಮಗೂ ಕಾಲ ಬರುತ್ತದೆ. ರೇವಣ್ಣ, ಕುಮಾರಣ್ಣ, ಎಚ್.ಡಿ. ದೇವೇಗೌಡರು ಅಂದರೆ ಏನಂತ ತೋರಿಸುತ್ತೇನೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಗುಡುಗಿದರು.

ಈ ಡೇರಿ ನಿರ್ಮಾಣ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ಎಷ್ಟು ಕಾಟ ಕೊಟ್ಟರು ಎಂಬುದು ಜನರಿಗೆ ಗೊತ್ತಿದೆ. ರೇವಣ್ಣನ ಕಾಲ ಮುಗಿಯಿತೆಂದು ಹೊರ ಜಿಲ್ಲೆಯ ರಾಜಕಾರಣಿಗಳು ತಿಳಿದಿದ್ದರೆ ಏನು ಅಂತ ತೋರಿಸಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net