ಹೆಜ್ಜಾಲ - ಚಾಮರಾಜನಗರದ ರೈಲು ಮಾರ್ಗದ ಹೊಸ ನಕ್ಷೆ ಬಿಡುಗಡೆ

TRAin Rail new
Published on

 ಕನಕಪುರ ಭಾಗದ ಕನಸಿಗೆ ನೀರೆರೆದ ಇಲಾಖೆ

ಅರಣ್ಯ ಇಲಾಖೆ ಅನುಮತಿ ಸಿಗದೆ ನನೆಗುದಿಗೆ ಬಿದ್ದಿದ್ದ ಯೋಜನೆ

 ರಾಮನಗರ
ಕನಕಪುರ ಭಾಗದ ಬಹುದಿನಗಳ ಕನಸಿಗೆ ಮತ್ತೆ ನೀರೆರೆಯುವ ಸುದ್ದಿಯೊಂದು ಹೊರಬಿದ್ದಿದೆ.  ಹೆಜ್ಜಾಲ - ಚಾಮರಾಜನಗರ ನಡುವಿನ ರೈಲು ಮಾರ್ಗದ ಹೊಸ ನಕ್ಷೆಯನ್ನು ಇಲಾಖೆ ಬಿಡುಗಡೆ ಮಾಡಿದೆ.


1997 - 98ರಲ್ಲಿ ಘೋಷಣೆಗೊಂಡು ವಿವಿಧ ಕಾರಣಗಳಿಗಾಗಿ ನನೆಗುದಿಗೆ ಬಿದ್ದಿದ್ದ ಯೋಜನೆಗೆ ಈಗ ಮತ್ತೆ ಜೀವ ಬಂದಿದೆ. ಈ ಮೊದಲು ಬೆಂಗಳೂರು - ಚಾಮರಾಜನಗರ - ಸತ್ಯಮಂಗಲ ಮಾರ್ಗದ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಚಾಮರಾಜನಗರದಿಂದ ಸತ್ಯಮಂಗಲದವರೆಗೆ ಅರಣ್ಯದಲ್ಲಿ ಸಮೀಕ್ಷೆ ನಡೆಸಲು ತಮಿಳುನಾಡು ಸರ್ಕಾರ ಮತ್ತು ಸಿಇಸಿ ಅನುಮತಿ ನೀಡದ ಹಿನ್ನೆಲೆಯಲ್ಲಿ ನನೆಗುದಿಗೆ ಬಿದ್ದಿತ್ತು. ನಂತರ 2016ರಲ್ಲಿ ಮತ್ತೆ ಈ ಯೋಜನೆಯನ್ನು ಬೆಂಗಳೂರು - ಹೆಜ್ಜಾಲ - ಕನಕಪುರ - ಚಾಮರಾಜನಗರಕ್ಕೆ ಸೀಮಿತಗೊಳಿಸಿದ್ದ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಭೂ ಸ್ವಾಧಿನಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಎಲ್ಲ ತಾಲೂಕಿನಲ್ಲೂ ರೈಲು ಮಾರ್ಗ


ಹೆಜ್ಜಾಲ - ಚಾಮರಾಜನಗರ ನಡುವಿನ ರೈಲು ಮಾರ್ಗ ಕಾರ್ಯಗತಗೊಂಡರೆ, ಜಿಲ್ಲೆಯ ಎಲ್ಲ ತಾಲೂಕುಗಳೂ ರೈಲು ಮಾರ್ಗಗಳನ್ನು ಹೊಂದಿದಂತೆ ಆಗಲಿದೆ. ಈಗಾಗಲೇ ಬೆಂಗಳೂರು - ಮಂಗಳೂರು ರೈಲು ಮಾರ್ಗ ಮಾಗಡಿ ತಾಲೂಕಿನ ವಿವಿಧ ಭಾಗಗಳಲ್ಲಿ ಹಾದು ಹೋಗಿದ್ದರೆ, ಬೆಂಗಳೂರು - ಮೈಸೂರು ನಡುವೆ ಹಲವಾರು ವರ್ಷಗಳಿಂದ ರೈಲುಗಳು ಕಾರ್ಯಾಚರಣೆ ನಡೆಸುತ್ತಿವೆ. ಆದರೆ ಕನಕಪುರ ಭಾಗಕ್ಕೆ ರೈಲು ಇಲ್ಲದ ಕಾರಣ, ದೂರದ ಊರುಗಳಿಗೆ ಪ್ರಯಾಣ ಬೆಳೆಸಬೇಕು ಎನ್ನುವ ರೈಲು ಪ್ರಯಾಣಿಕರು ರಾಮನಗರ, ಇಲ್ಲವೇ ಚನ್ನಪಟ್ಟಣಕ್ಕೆ ಬರಬೇಕಿತ್ತು. ಇಲ್ಲವೇ ಬೆಂಗಳೂರಿಗೆ ಹೋಗಬೇಕಿತ್ತು. ಈ ಯೋಜನೆ ಜಾರಿಯಿಂದ ಹಾರೋಹಳ್ಳಿ ಹಾಗೂ ಕನಕಪುರ ತಾಲೂಕಿನ ಜನತೆಗೂ ರೈಲು ಭಾಗ್ಯ ದೊರೆತಂತೆ ಆಗುತ್ತದೆ.

ಯೋಜನೆ ವಿವರ

ಇದು ಮೊದಲು 260 ಕಿಮೀ ಉದ್ದದ ಯೋಜನೆ ಆಗಿತ್ತು. 2016ರಲ್ಲಿ ಹೆಜ್ಜಾಲ - ಚಾಮರಾಜ ನಗರಕ್ಕೆ ಸೀಮಿತ ಮಾಡಿರುವ ಕಾರಣ ಯೋಜನೆ ಉದ್ದ 142 ಕಿಮೀಗೆ ಇಳಿದಿದೆ. ಇದಕ್ಕೆ ಸುಮಾರು 1723.15 ಎಕರೆ ಖಾಸಗಿ ಭೂಮಿ ಅಗತ್ಯವಿದ್ದು, ಈಗಿನ ಅಂದಾಜು ಭೂಸ್ವಾಧಿನ ಮೊತ್ತವೇ 1500 ಕೋಟಿ ರೂ.ಗಳಿಗೂ ಹೆಚ್ಚಿದೆ. ಈ ಯೋಜನೆ ನಿರ್ಮಾಣದ ಜವಾಬ್ದಾರಿ ಕೇಂದ್ರ ಸರ್ಕಾರದ್ದೇ. ಆದರೆ ಭೂಮಿ ಒದಗಿಸುವ ಕೆಲಸ ರಾಜ್ಯ ಸರ್ಕಾರ ಮಾಡುವ ಜತೆಗೆ ರೈಲು ಮಾರ್ಗ ನಿರ್ಮಾಣ ವೆಚ್ಚದ ಶೇ.50ರಷ್ಟನ್ನು ಭರಿಸಬೇಕು.

ರೈಲು ಇಲ್ಲಿ ಹಾದು ಹೋಗಲಿದೆ

ಬೆಂಗಳೂರಿನಿಂದ ಹೆಜ್ಜಾಲಕ್ಕೆ ಬರುವ ರೈಲು ಅಲ್ಲಿಂದ ಹಾರೋಹಳ್ಳಿ, ಕೆ.ಕರೇನಹಳ್ಳಿ, ಹಾರೋಹಳ್ಳಿ, ತೋಪಗೊಂಡನಹಳ್ಳಿ, ಕನಕಪುರ & ಬೊಮ್ಮನಹಳ್ಳಿ, ಸಾತನೂರಿಗೆ ಬರಲಿದೆ. ಜಿಲ್ಲೆಯಲ್ಲಿ ರೈಲು ಸಂಚಾರದ ಉದ್ದ ಸುಮಾರು 60 ಕಿಮೀ ಆಗಲಿದೆ. ನಂತರ ಮಂಡ್ಯ ಜಿಲ್ಲೆಗೆ ಹಲಗೂರಿಗೆ ಪ್ರವೇಶ ಪಡೆಯುವ ರೈಲು ಹಲಸಳ್ಳಿ, ಹಲಗೂರು, ಸೀರಾಮಳ್ಳಿ, ಹೊಳೆಸೂರು, ಕೊಳ್ಳೇಗಾಲ, ಮಲ್ಲಿಗೆಹಳ್ಳಿ, ಯಳಂದೂರು, ಮಂಗಳ ಮೂಲಕ ಚಾಮರಾಜನಗರ ಸೇರಲಿದೆ. ಹೆಜ್ಜಾಲದಿಂದ ಚಾಮರಾಜನಗರ ನಡುವಿನ ಒಟ್ಟಾರೆ ದೂರ 141.45 ಕಿ.ಮೀ. ಆಗಿದೆ.

ಏನೆಲ್ಲಾ ಲಾಭ?


ಯೋಜನೆ ಜಾರಿಯಿಂದ ರಾಮನಗರ ಮತ್ತು ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಯ ಆರ್ಥಿಕ ಚಟುವಟಿಕೆ ಹೆಚ್ಚಳಕ್ಕೆ ಸಹಕಾರಿ ಆಗಲಿದೆ. ಕೊಳ್ಳೇಗಾಲ ಸುತ್ತಮುತ್ತಲ ರೇಷ್ಮೆ ವ್ಯಾಪಾರಿಗಳಿಗೆ ಇದು ಅನುಕೂಲವಾಗಲಿದೆ. ಇದರ ಜತೆಗೆ ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಈಗ ರೈಲು ಮಾರ್ಗಕ್ಕೆ ಬಿಡದಿಯನ್ನೇ ಅವಲಂಬಿಸಬೇಕಿದೆ. ಸ್ಥಳಿಯವಾಗಿಯೇ ರೈಲು ದೊರೆಯುವುದರಿಂದ ಉತ್ಪಾದಿತ ವಸ್ತುಗಳ ಸಾಗಾಣಿಕೆ ಹಾಗೂ ಕಚ್ಚಾವಸ್ತುಗಳನ್ನು ತರಿಸಿಕೊಳ್ಳಲು ಸಹಕಾರಿಯಾಗಲಿದೆ.

ಹೆಜ್ಜಾಲ-ಚಾಮರಾಜನಗರ ನಡುವಿನ ರೈಲ್ವೆ ಯೋಜನೆ ಜಾರಿಗೆ ಕೇಂದ್ರ ಸಚಿವರಲ್ಲಿ ಮನವಿ ಮಾಡಿದ್ದೆ. ಮುಂದಿನ ಬಜೆಟ್​ನಲ್ಲಿ ಯೋಜನೆ ಘೋಷಣೆ ಆಗಲಿದೆ. ಭೂ ಸ್ವಾಧಿನ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ.
 ಡಿ.ಕೆ.ಸುರೇಶ್​, ಸಂಸದ

ಯೋಜನೆ ಘೋಷಣೆ ಆಗಬೇಕು ಎನ್ನುವುದು ಈ ಭಾಗದ ಜನರ ಬಹುದಿನಗಳ ಬೇಡಿಕೆ. ಈಗ ನೆ ಪ್ರಕಟ ಮಾಡುವ ಮೂಲಕ ಹೊಸ ಭರವಸೆ ಮೂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತ್ವರಿತವಾಗಿ ಯೋಜನೆ ಜಾರಿಗೆ ತಂದು ಜನರ ಕನಸು ನನಸು ಮಾಡಲಿ.

 ಕುಮಾರಸ್ವಾಮಿ, ಹೋರಾಟಗಾರ, ಕನಕಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net